Home ಟಾಪ್ ಸುದ್ದಿಗಳು ಶೇಖ್ ಹಸೀನಾ ಬೆಂಬಲಿಗರ ಮೇಲೆ ದಾಳಿ ನಡೆಸಿ, ವಶದಲ್ಲಿರಿಸಿಕೊಂಡ ಸಶಸ್ತ್ರ ವಿದ್ಯಾರ್ಥಿಗಳ ಗುಂಪು

ಶೇಖ್ ಹಸೀನಾ ಬೆಂಬಲಿಗರ ಮೇಲೆ ದಾಳಿ ನಡೆಸಿ, ವಶದಲ್ಲಿರಿಸಿಕೊಂಡ ಸಶಸ್ತ್ರ ವಿದ್ಯಾರ್ಥಿಗಳ ಗುಂಪು

ಢಾಕಾ: ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರ ಹತ್ಯೆಯ ದಿನವಾದ ಆಗಸ್ಟ್ 15 ರಂದು ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶೇಕ್‌ ಹಸೀನಾ ಅವರ ಬೆಂಬಲಿಗರ ಮೇಲೆ ಸಶಸ್ತ್ರ ವಿದ್ಯಾರ್ಥಿಗಳ ಗುಂಪು ದಾಳಿ ನಡೆಸಿ ಹಲವರನ್ನು ವಶದಲ್ಲಿರಿಸಿಕೊಂಡ ಘಟನೆ ವರದಿಯಾಗಿದೆ.

ಶೇಖ್ ಮುಜೀಬುರ್ ರೆಹಮಾನ್ 1975ರ ಆಗಸ್ಟ್ 15ರಂದು ಹತ್ಯೆಯಾಗಿದ್ದರು. ಅವರ ಸ್ಮರಣಾರ್ಥ ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ನೀಡಿ ರಾಷ್ಟ್ರೀಯ ಶೋಕಾಚರಣೆ ಮತ್ತು ರಜಾದಿನವನ್ನು ಮಧ್ಯಂತರ ಸರಕಾರ ರದ್ದುಗೊಳಿಸಿರುವುದಾಗಿ ಘೋಷಿಸಿತ್ತು.

ಆದರೆ ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವಾಗಿ ಆಚರಿಸುವಂತೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದ ಜನರನ್ನು ಆಗ್ರಹಿಸಿದ್ದರು. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು ಶ್ರದ್ಧಾಂಜಲಿ ಸಲ್ಲಿಸಲು ಧನ್ಮಂಡಿಯಲ್ಲಿರುವ ಶೇಕ್‌ ಮುಜೀಬುರ್ ರೆಹಮಾನ್ ಅವರ ನಿವಾಸಕ್ಕೆ ತೆರಳಿದಾಗ ನಿವಾಸದ ಹೊರಗೆ ಶಸ್ತ್ರಧಾರಿಗಳಾಗಿ ತಯಾರಾಗಿ ನಿಂತಿದ್ದ ನೂರಾರು ವಿದ್ಯಾರ್ಥಿಗಳು ಹಸೀನಾ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನು ವಶದಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಅಲ್ಲಿಗೆ ಆಗಮಿಸಿದ ಸೇನೆಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತೊಮ್ಮೆ ಗುಂಪು ಸೇರಿ ದೊಂಬಿ ನಡೆಸುವುದು ಅವಾಮಿ ಲೀಗ್ ಪಕ್ಷದ ಉದ್ದೇಶವಾಗಿತ್ತು. ಅವರ ಪ್ರಯತ್ನವನ್ನು ನಾವು ವಿಫಲಗೊಳಿಸಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಗಳನ್ನು ತಡೆಯಲು ನಾವು ಪ್ರಮುಖ ರಸ್ತೆಗಳಲ್ಲಿ ಕಾವಲು ಮುಂದುವರಿಸಲಿದ್ದೇವೆ ಎಂದು ವಿದ್ಯಾರ್ಥಿಗಳ ಗುಂಪಿನ ಮುಖಂಡರು ಹೇಳಿದ್ದಾರೆ ಎಂದು ವರದಿಯಾಗಿದೆ.

Join Whatsapp
Exit mobile version