Home ಟಾಪ್ ಸುದ್ದಿಗಳು ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ 3 ವರ್ಷದ ಮಗು

ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ 3 ವರ್ಷದ ಮಗು

ಮಂಡ್ಯ: ಜಿಲ್ಲೆಯ ತಾಲೂಕಿನ ಹೊನಗಳ್ಳಿಮಠ ಗ್ರಾಮದಲ್ಲಿ ಆಟವಾಡುವ ವೇಳೆ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಮಗು, ನೀರಿನಲ್ಲಿ ಕೊಚ್ಚಿ ಹೋಗಿರುವ ಆಘಾತಕಾರಿ ಘಟನೆ ಸಂಭವಿಸಿದೆ.

ಹೊನಗಹಳ್ಳಿಮಠ ನಿವಾಸಿ ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ ಸಬಿನ್‌ರಾಜ್ (3) ನಾಲೆಯಲ್ಲಿ ಕೊಚ್ವಿಹೋದ ಮಗು.

ನಾಲೆ ನೀರಿನಲ್ಲಿ ಮಗುವಿಗಾಗಿ ಪೋಲಿಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ನಾಲೆಯಲ್ಲಿ 700 ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಯುತ್ತಿದ್ದು, ಮಗುವಿನ ಹುಡುಕಾಟಕ್ಕೆ ತೊಂದರೆಯಾಗಿದ್ದರಿಂದ ನಾಲೆಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ಸಂಪರ್ಕ ನಾಲೆಗಳ ಗೇಟನ್ನು ತೆರೆದು ನಾಲೆ ನೀರನ್ನು ಖಾಲಿ ಮಾಡುವ ಪ್ರಯತ್ನ ಸಾಗಿದೆ. ಮುಂಗಾರು ಕೃಷಿ ಚಟುವಟಿಕೆಗಳು ಹಾಗೂ ಕೆರೆಕಟ್ಟೆಗಳನ್ನು ತುಂಬಿಸುವ ಸಲುವಾಗಿ ಕೆ ಆರ್ ಎಸ್ ಜಲಾಶಯದಿಂದ ಬುಧವಾರವಷ್ಟೇ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಈ ನೀರು ಹೊನಗಳ್ಳಿಮಠ ಗ್ರಾಮವನ್ನು ಗುರುವಾರ ಮಧ್ಯಾಹ್ನ ತಲುಪಿತ್ತು. ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವಿನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯು ರಾತ್ರಿ 8.30ರವರೆಗೆ ಶೋಧ ಮುಂದುವರಿಸಿದ್ದರು. ಮಗು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಕುಟುಂಬದವರ ರೋದನ ಮುಗಿಲು ಮುಟ್ಟಿದೆ. ಬೆಳಗ್ಗಿನ ಮಾಹಿತಿ ದೊರೆತಿಲ್ಲ.

Join Whatsapp
Exit mobile version