38 ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಪಿಎಂ ಕೇರ್ಸ್ ಗೆ ರೂ.2,105 ಕೋಟಿ ದೇಣಿಗೆ!

Prasthutha|

ಮುಂಬೈ : ಕೊರೋನ ಸಂಕಷ್ಟದ ಸಂದರ್ಭ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ಪಿಎಂ – ಕೇರ್ಸ್ ನಿಧಿಯ ಮಾಹಿತಿಗಳನ್ನು ಕೇಳಿದ್ದ ಆರ್ ಟಿಐ ಕಾರ್ಯಕರ್ತರಿಗೆ ಮಾಹಿತಿ ನೀಡಲು ನಿರಾಕರಿಸಲಾಗಿತ್ತು. ಆದರೆ, ಇಲ್ಲೊಂದು ಆರ್ ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಒಟ್ಟು 38 ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಸುಮಾರು ರೂ.2,105 ಕೋಟಿಗೂ ಹೆಚ್ಚು ಮೊತ್ತ ಈ ಪಿಎಂ – ಕೇರ್ಸ್ ನಿಧಿಗೆ ಪಾವತಿಯಾಗಿದೆ ಎಂದು ತಿಳಿದುಬಂದಿದೆ.

- Advertisement -

ಕಳೆದ ಮಾ.31ರ ವೇಳೆಗೆ ರೂ. 3,076.62 ಕೋಟಿ ಮೊತ್ತ ಈ ನಿಧಿಗೆ ಪಾವತಿಯಾಗಿದ್ದು, ಅದರಲ್ಲಿ ರೂ.3,075.85 ಕೋಟಿ  ಸ್ವಯಂ ಪ್ರೇರಿತ ದೇಣಿಗೆ ಎಂಬುದಾಗಿ ನಿಧಿಗೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ಆದಾಗ್ಯೂ ‘ದ ಇಂಡಿಯನ್ ಎಕ್ಸ್ ಪ್ರೆಸ್’ 55 ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕಳುಹಿಸಿದ್ದ ಆರ್ ಟಿಐ ಅರ್ಜಿಗೆ ಆ.13ರ ವರೆಗೆ 38 ಸಂಸ್ಥೆಗಳ ಪ್ರತಿಕ್ರಿಯೆ ಲಭ್ಯವಾಗಿದೆ. ಆ ಪ್ರಕಾರ, 38 ಸಂಸ್ಥೆಗಳು ರೂ.2,105.38 ಕೋಟಿ ದೇಣಿಗೆ ನೀಡಿವೆ. 2019-20 ಮತ್ತು 2020-21ರ ಬಜೆಟ್ ಮಂಜೂರಾತಿಯಿಂದ ಕಳೆದ ಐದು ತಿಂಗಳಲ್ಲಿ ಈ ದೇಣಿಗೆ ನೀಡಲಾಗಿದೆ.

ಮಾ.28ರಂದು ಪಿಎಂ ಕೇರ್ಸ್ ನಿಧಿ ಸಂಸ್ಥಾಪನೆಯಾಗಿತ್ತು. ಮೇ 28ರಂದು ಪಿಎಂ ಕೇರ್ಸ್ ನಿಧಿಗೆ ಬಂದ ದೇಣಿಗೆಯ ವಿವರಗಳನ್ನು ಕೋರಿದ್ದ ಆರ್ ಟಿಐಗೆ ಮಾಹಿತಿ ನೀಡಲು ಪ್ರಧಾನಿ ಸಚಿವಾಲಯ ನಿರಾಕರಿಸಿತ್ತು. ಆದಾಗ್ಯೂ, ಪಿಎಂ ಕೇರ್ಸ್ ನಿಧಿಯಲ್ಲಿನ ಸಂಬಂಧಪಟ್ಟ ಮಾಹಿತಿಗಳು ಪಿಎಂ ಕೇರ್ಸ್ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಆದರೆ, ವೆಬ್ ಸೈಟ್ ನಲ್ಲಿ ದೇಣಿಗೆದಾರರು ಮತ್ತು ಅವರು ನೀಡಿದ ದೇಣಿಗೆಯ ವಿವರಗಳಿಲ್ಲ. ಆ ನಂತರ ಜೂ.24ರಂದು ಕೋರಲಾದ ಮೇಲಾಧಿಕಾರಿಗಳ ಪ್ರಾಧಿಕಾರವೂ ಈ ಕುರಿತ ಮಾಹಿತಿ ನೀಡಲು ನಿರಾಕರಿಸಿತ್ತು.

- Advertisement -

ಆದರೆ, ಈಗ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಕೋರಲಾಗಿದ್ದ ಮಾಹಿತಿ ಲಭ್ಯವಾಗಿದ್ದು, 38 ಸಂಸ್ಥೆಗಳು ಮಾಹಿತಿ ನೀಡಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(CSR) ಚಟುವಟಿಕೆಗಳಿಗೆ ಮಂಜೂರಾದ ಬಳಕೆಯಾಗದ ಅನುದಾನದಿಂದ ಈ ದೇಣಿಗೆ ನೀಡಲಾಗಿದೆ. 2019-20ರ ಚಟುವಟಿಕೆಗಳಿಗೆ ಮೀಸಲಾಗಿದ್ದ ಈ ಅನುದಾನ, ಹಣಕಾಸು ವರ್ಷ ಪೂರ್ಣಗೊಳ್ಳಲು ನಾಲ್ಕು ದಿನಗಳಿರುವಾಗ ಬಳಕೆಯಾಗಿದೆ. ಕೆಲವು ಸಂಸ್ಥೆಗಳು ಈ ವರ್ಷದ ಬಜೆಟ್ ನಿಂದ ದೇಣಿಗೆ ನೀಡಿವೆ. ಒಟ್ಟು ಮಂಜೂರಾತಿ ಇನ್ನೂ ಅಂತಿಮಗೊಳ್ಳದಿದ್ದರೂ, ಅದರಿಂದ ದೇಣಿಗೆ ನೀಡಲಾಗಿದೆ. ಒಂದು ಸಂಸ್ಥೆಯು ತನ್ನ ಸಂಸ್ಥೆಯಿಂದ ಇಂತಹ ಚಟುವಟಿಕೆಗಳಿಗೆ ಮೀಸಲಿರಿಸುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಿದೆ ಎಂದು ವರದಿ ತಿಳಿಸಿದೆ.

ದೇಣಿಗೆ ನೀಡಿರುವ 38 ಸಂಸ್ಥೆಗಳಲ್ಲಿ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ (ಒಎನ್ ಜಿಸಿ) ಅತಿಹೆಚ್ಚು ರೂ.300 ಕೋಟಿ ದೇಣಿಗೆ ನೀಡಿದೆ. ಈ ವರ್ಷದ ಸಿಎಸ್ಆರ್ ಬಜೆಟ್ ಇಳಿಕೆ ಮಾಡಿರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಒಎನ್ ಜಿಸಿ ಕೂಡ ಒಂದು. ಇದರ 2020-21ರ ಬಜೆಟ್ ಮಂಜೂರಾತಿ ಇನ್ನೂ ಅಂತಿಮಗೊಂಡಿಲ್ಲ. ರೂ.120 ಕೋಟಿ ದೇಣಿಗೆ ನೀಡಿರುವ ಎಚ್ ಪಿಸಿಎಲ್ ನ 2020-21ರ ಸಿಎಸ್ ಆರ್ ಮಂಜೂರಾತಿ ಇನ್ನೂ ಅಂತಿಮಗೊಂಡಿಲ್ಲ ಎಂದು ಅದು ತನ್ನ ಆರ್ ಟಿಐ ಮಾಹಿತಿಯಲ್ಲಿ ಸ್ಪಷ್ಟಪಡಿಸಿದೆ. ಪವರ್ ಫೈನಾನ್ಸ್ ಕಾರ್ಪೊರೇಶನ್ ತನ್ನ 2020-21ರ ಸಿಎಸ್ ಆರ್ ಬಜೆಟ್ ನಿಂದ ಹೆಚ್ಚಿನ ಮೊತ್ತವನ್ನು ದೇಣಿಗೆ ನೀಡಿದೆ. ಈ ಸಂಸ್ಥೆಯ 2020-21ರ ಸಿಎಸ್ ಆರ್ ಬಜೆಟ್ ರೂ.150.28 ಕೋಟಿ ಆದರೆ, ಅದು ಈ ಅವಧಿಗೆ ರೂ.200 ಕೋಟಿ ದೇಣಿಗೆ ನೀಡಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ ರೂ.13 ಕೋಟಿ ಮತ್ತು ರೂ.25 ಕೋಟಿ ಕ್ರಮವಾಗಿ 2019-20 ಮತ್ತು 2020-21ರ ಸಾಲಿಗೆ ದೇಣಿಗೆಯಾಗಿ ನೀಡಿದೆ. ಪವರ್ ಗ್ರಿಡ್ ಕಾರ್ಪೊರೇಶನ್ ಇದೇ ಅವಧಿಗೆ ಕ್ರಮವಾಗಿ ರೂ.130 ಕೋಟಿ ಮತ್ತು ರೂ. 70 ಕೋಟಿ ದೇಣಿಗೆ ನೀಡಿದೆ. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಕ್ರಮವಾಗಿ ರೂ.100 ಕೋಟಿ ಮತ್ತು ರೂ.50 ಕೋಟಿ ಎರಡು ಹಣಕಾಸು ವರ್ಷಗಳ ಸಾಲಿಗೆ ನೀಡಿದೆ. ತೀವ್ರ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿರುವ ಏರ್ ಪೋರ್ಟ್ಸ್ ಅಥಾರಿಟಿ ಇಂಡಿಯಾ (ಎಎಐ) ಕೂಡ ರೂ.15 ಕೋಟಿ ದೇಣಿಗೆ ನೀಡಿದೆ. ಆದಾಗ್ಯೂ, ನಷ್ಟದಲ್ಲಿರುವ ಬಿಎಸ್ ಎನ್ ಎಲ್ 2015-16ರಿಂದ 2018-19ರ ವರೆಗೆ ಸಿಎಸ್ ಆರ್ ನಿಧಿ ಗಳಿಸಿಲ್ಲ. 

ಪ್ರಮುಖ ಸಾರ್ವಜನಿಕ ವಲಯ ಸಂಸ್ಥೆಗಳು ನೀಡಿರುವ ದೇಣಿಗೆ ವಿವರ:

ಒಎನ್ ಜಿಸಿ – ರೂ.300 ಕೋಟಿ

ಒಎನ್ ಜಿಸಿ – ರೂ.300 ಕೋಟಿ

ಎನ್ ಟಿಪಿಸಿ – ರೂ.250 ಕೋಟಿ  

ಇಂಡಿಯನ್ ಆಯಿಲ್ – ರೂ.225 ಕೋಟಿ

ಪವರ್ ಫೈನಾನ್ಸ್ ಕಾರ್ಪೊರೇಶನ್ – ರೂ.200 ಕೋಟಿ

ಪವರ್ ಗ್ರಿಡ್ – ರೂ. 200 ಕೋಟಿ

ಎನ್ ಎಂಡಿಸಿ – ರೂ. 155 ಕೋಟಿ

ಆರ್ ಇಸಿ – ರೂ. 150 ಕೋಟಿ

ಬಿಪಿಸಿಎಲ್ – ರೂ. 125 ಕೋಟಿ

ಎಚ್ ಪಿಸಿಎಲ್ – ರೂ. 120 ಕೋಟಿ

ಕೋಲ್ ಇಂಡಿಯಾ – ರೂ. 100 ಕೋಟಿ

ಹುಡ್ಕೊ – ರೂ.50 ಕೋಟಿ

ಜಿಎಐಎಲ್ – ರೂ.50 ಕೋಟಿ

ಆಯಿಲ್ ಇಂಡಿಯಾ – ರೂ. 38 ಕೋಟಿ

ಎನ್ ಎಲ್ ಸಿ – ರೂ. 20 ಕೋಟಿ

ಎಚ್ ಎಎಲ್ – ರೂ. 20 ಕೋಟಿ

ಎಎಐ – ರೂ. 15 ಕೋಟಿ

ಕಾಟನ್ ಕಾರ್ಪೊರೇಶನ್ –  ರೂ. 10.1 ಕೋಟಿ

ಐಆರ್ ಸಿಟಿಸಿ – ರೂ. 10 ಕೋಟಿ

ಬಿಇಎಲ್ – ರೂ. 10 ಕೋಟಿ

ಕೃಪೆ : indianexpress.com



Join Whatsapp