ಬೆಂಗಳೂರು: 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಗಣ್ಯರು ತಮ್ಮ ಸಂದೇಶವನ್ನು ನೀಡಿದ್ದು, ನಾಡಿನ ಏಳಿಗೆಗಾಗಿ ದುಡಿಯಲು, ಬಹುತ್ವ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನದ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, “ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಗಮನಾರ್ಹ ಕೊಡುಗೆಯೊಂದಿಗೆ ವಿಶ್ವದಲ್ಲಿ ನಮ್ಮ ಭಾರತದ ಹೆಸರನ್ನು ಪ್ರಜ್ವಲಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂಬ ಕಳಕಳಿಯ ಮನವಿಯೊಂದಿಗೆ ತಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ಇಚ್ಛಿಸುತ್ತೇನೆ” ಎಂದು ಹೇಳಿದ್ದಾರೆ.
“ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣಗೊಳ್ಳುವುದು. ಆ ದಿಕ್ಕಿನೆಡೆಗೆ ದೃಢಚಿತ್ತದಿಂದ ಹೆಜ್ಜೆ ಹಾಕುವ ಸಂಕಲ್ಪವನ್ನು 74ನೇ ಸ್ವಾತಂತ್ರ್ಯೊತ್ಸವದ ದಿನ ನಾವೆಲ್ಲರೂ ಕೈಗೊಳ್ಳೋಣ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಅಸಂಖ್ಯಾತ ಜನರ ನಿಸ್ವಾರ್ಥ ತ್ಯಾಗ – ಬಲಿದಾನಗಳ ಫಲವೇ ಬಹುತ್ವದ ಆತ್ಮವುಳ್ಳ ಭಾರತಕ್ಕೆ ದಕ್ಕಿದ ಸ್ವಾತಂತ್ರ್ಯ. ಇದನ್ನು ಜತನದಿಂದ ಕಾಯ್ದುಕೊಂಡು ಹೋಗುವುದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ ಮತ್ತು ಅರ್ಥ ಪೂರ್ಣ ಸ್ವಾತಂತ್ರ್ಯ ಸಂಭ್ರಮವಾಗಲಿದೆ. “ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಜನರು, ಬಹುಸಂಸ್ಕೃತಿಯ ಮೆರವಣಿಗೆ, ಭಾವೈಕ್ಯದ ದೀವಿಗೆ”. ಸಮಸ್ತ ನಾಗರಿಕರಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ವ್ಯಕ್ತಿಗತ ಅಂತರದೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸೋಣ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸಕ್ಕೆ ಶುಭ ಕೋರಿರುವ ನಿಜಗುಣಾನಂದ ಸ್ವಾಮೀಜಿಯವರು, “ಭಾರತ ಬಹುತ್ವದ ಭಾರತ. ಹಾಗಾಗಿ ಹಿಂದು, ಮುಸ್ಲಿಮ್, ಕ್ರೈಸ್ತ ಅನ್ನುವ ಭೇದಭಾವವಿಲ್ಲದೇ, ನಾವೆಲ್ಲರೂ ಭಾರತದಲ್ಲಿ ಭಾವೈಕ್ಯತೆಯಿಂದ ಬದುಕಿ ಭಾರತದ ಪ್ರಗತಿಗೆ ಕೈಜೋಡಿಸೋಣ. ನಾವೆಲ್ಲರೂ ಒಂದೇ ಅನ್ನುವ ಭಾವನೆಯೊಂದಿಗೆ ಬದುಕೋಣ” ಎಂಬ ವಿಡಿಯೋ ಸಂದೇಶವನ್ನು ಸಂದೇಶವನ್ನು ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, “ದೇಶದ ಸಂವಿಧಾನವು ಅಪಾಯದಲ್ಲಿದ್ದು, ನಾಗರಿಕರ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಹಿಂದುತ್ವವನ್ನು ಹೇರುವ ಮೂಲಕ ಈ ದೇಶದ ಬಹುತ್ವದ ಪರಂಪರೆಯನ್ನು ನಾಶ ಮಾಡಲು ಹೊರಟಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸ್ವಾತಂತ್ರ್ಯದ ಕಾವಲಾಳುಗಳಾಗಿ ದೇಶದ ಹಿತ ಕಾಯಲು ಮುಂದಾಗಬೇಕಾಗಿದೆ” ಎಂದು ಹೇಳಿದ್ದಾರೆ.