ಚುನಾವಣಾ ಆಯೋಗ ಇನ್ನೂ ದಿನಾಂಕಗಳನ್ನು ಘೋಷಿಸದಿದ್ದರೂ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ರಾಜಕೀಯ ಪಕ್ಷಗಳು ಅಧಿಕಾರವನ್ನು ಪಡೆಯಲು ಜಿದ್ದಾಜಿದ್ದಿನ ಹೋರಾಟಕ್ಕೆ ಇಳಿದಿವೆ. ಎಲ್ಲಾ ರಾಜಕೀಯ ಪಕ್ಷಗಳು ಬಿಹಾರ ವಿಧಾನಸಭಾ ಚುನಾವಣೆಗೆ ಸಿದ್ಧರಾಗಿರುವ ಬಗ್ಗೆ ಮಾತನಾಡುತ್ತಿವೆ. ಕಳೆದ ಚುನಾವಣೆಯಲ್ಲಿನ ಸ್ನೇಹಿತರು ಇದೀಗ ರಾಜಕೀಯ ಎದುರಾಳಿಗಳಾಗಿ ಮಾರ್ಪಟ್ಟಿದ್ದಾರೆ. ಕಳೆದ ಚುನಾವಣೆಯ ಎದುರಾಳಿಗಳು ಒಟ್ಟಾಗಿ ಹೋರಾಡಲು ಕೈ ಜೋಡಿಸುತ್ತಿದ್ದಾರೆ.
ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾಗಿ ಹೋರಾಡಿದ್ದ ಬಿಜೆಪಿ ಮತ್ತು ಜನತಾ ದಳ(ಯುನೈಟೆಡ್) ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಯೊಂದಿಗೆ ಕೈ ಜೋಡಿಸಿದ್ದಾರೆ. ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಈ ಬಾರಿಯೂ ಎನ್‌ಡಿಎಯಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಆದರೆ ಕಳೆದ ಚುನಾವಣೆಯಲ್ಲಿ ಎನ್‌ಡಿಎಯಲ್ಲಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಎನ್‌ಡಿಎಯೊಂದಿಗೆ ಕಾಣಿಸುತ್ತಿಲ್ಲ. ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹರವರ ಆರ್‌ಎಲ್‌ಎಸ್‌ಪಿ ಪಕ್ಷವು ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮಹಾ ಮೈತ್ರಿಯೊಂದಿಗೆ ಸೇರಿಕೊಂಡಿದೆ.
ಆರ್‌ಎಲ್‌ಎಸ್‌ಪಿ ಮತ್ತು ವಿಕಾಸ್ ಇನ್ಸಾನ್ ಪಾರ್ಟಿ (ವಿಐಪಿ) ಇದುವರೆಗೆ ಮಹಾ ಮೈತ್ರಿಯ ಸೀಟು ಹಂಚಿಕೆಯಲ್ಲಿ ಮುನಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಂಸದ ಪಪ್ಪು ಯಾದವ್ ಕೂಡ ಜನ್ ಅಧಿಕಾರ ಪಕ್ಷದ ಮೂಲಕ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಜೊತೆಗೆ ಜೆಡಿಯು ಸೇರಿಕೊಂಡಿರುವುದು ಬಿಜೆಪಿಗೆ ನಿರಾಳತೆಯನ್ನು ನೀಡಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ವತಃ ಪಾಟ್ನಾಕ್ಕೆ ಭೇಟಿ ನೀಡಿ ಕೆಳಮಟ್ಟದ ಹಂತದಲ್ಲಿನ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಎನ್‌ಡಿಎ ಪೂರ್ಣ ಬಲದಿಂದ ಚುನಾವಣಾ ಕ್ಷೇತ್ರಕ್ಕೆ ಪ್ರವೇಶಿಸಿದೆ ಎಂದು ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ. ಅಭಿವೃದ್ಧಿಯನ್ನು ಗುರಿಯಾಗಿಸಿ ಎನ್‌ಡಿಎ ಚುನಾವಣೆಯನ್ನು ಎದುರಿಸುತ್ತಿವೆ ಎಂದು ಹೇಳಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ, ಮತ್ತು ಕಾಂಗ್ರೆಸ್ ಮಹಾ ಮೈತ್ರಿಯ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದ್ದವು. ನಂತರ ಜೆಡಿಯು ಮಹಾಮೈತ್ರಿಯಿಂದ ದೂರ ಸರಿದು ಬಿಹಾರದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿತ್ತು.