ನ್ಯೂಯಾರ್ಕ್ : ಎರಡನೇ ವಿಶ್ವಯುದ್ಧದ ವೇಳೆ ಹತ್ಯಾಕಾಂಡಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಯಹೂದಿಗಳ ಹತ್ಯೆ ಮಾಡಲಾಗಿದೆ ಎಂಬುದು, ಅಮೆರಿಕದ ಮೂರನೇ ಎರಡರಷ್ಟು ಯುವಜನರಿಗೆ ಗೊತ್ತಿಲ್ಲ. ಬದಲಿಗೆ ಯಹೂದಿಗಳೇ ಹತ್ಯಾಕಾಂಡ ನಡೆಸಿದರು ಎಂದು ಹತ್ತರಲ್ಲಿ ಒಬ್ಬ ಅಮೆರಿಕದ ಯುವಕ ನಂಬಿದ್ದಾನೆ ಎಂದು ಸಮೀಕ್ಷೆಯೊಂದರಲ್ಲಿ ಗೊತ್ತಾಗಿದೆ. 20ನೇ ಶತಮಾನದ ಅತಿದೊಡ್ಡ ಸಾಮೂಹಿಕ ಹತ್ಯಾಕಾಂಡದ ಮಹಾ ಅಪರಾಧದ ಬಗ್ಗೆ ಅವರಿಗೆ ಅರಿವಿಲ್ಲದಿರುವಂತಹ ಆಘಾತಕಾರಿ ಅಂಶ ಈ ಸಮೀಕ್ಷೆಯಿಂದ ತಿಳಿದುಬಂದಿದೆ.
ಮಿಲೇನಿಯಲ್ ಆ್ಯಂಡ್ ಜೆನ್ ಝಡ್ ಅಡಲ್ಟ್ಸ್ ಅಧ್ಯಯನದ ಪ್ರಕಾರ, 18-39ರ ವಯಸ್ಸಿನ ನಡುವಿನ ಶೇ.48ರಷ್ಟು ಮಂದಿಗೆ ಎರಡನೇ ವಿಶ್ವಯುದ್ಧದ ಸಂದರ್ಭ ನಿರ್ಮಿಸಲಾದ ಒಂದೇ ಒಂದು ಪರಿಹಾರ ಶಿಬಿರದ ಹೆಸರು ಗೊತ್ತಿಲ್ಲ. ಶೇ.23 ಮಂದಿ ಹತ್ಯಾಕಾಂಡ ಒಂದು ಕಟ್ಟುಕತೆ ಎಂದು ಭಾವಿಸಿದ್ದಾರೆ ಅಥವಾ ಅದರ ಬಗ್ಗೆ ಅವರಿಗೆ ಸ್ಪಷ್ಟತೆಯಿಲ್ಲ. ಶೇ.12 ಮಂದಿ ಹತ್ಯಾಕಾಂಡದ ಬಗ್ಗೆ ಕೇಳಿಯೇ ಇಲ್ಲ ಅಥವಾ ತಮಗೆ ಕೇಳಿಸಿಕೊಂಡಿದ್ದೇವೆ ಎಂದನಿಸುತ್ತಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಶೇ.56 ಮಂದಿ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ನಾಝಿ ಸಂಕೇತಗಳನ್ನು ನೋಡಿದ್ದಾರೆ. ಶೇ. 49ರಷ್ಟು ಮಂದಿ ಹತ್ಯಾಕಾಂಡ ನಡೆದಿಲ್ಲ ಎನ್ನುವಂತಹ ಅಥವಾ ಆ ಕುರಿತು ತಿರುಚಲಾದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ.
ಸಮೀಕ್ಷೆಯ ಫಲಿತಾಂಶ ನಿಜಕ್ಕೂ ಆಘಾತಕಾರಿ ಮತ್ತು ಬೇಸರ ತರಿಸುವಂತದ್ದು. ಅಲ್ಲದೆ, ಹತ್ಯಾಕಾಂಡದ ಸಂತ್ರಸ್ತರು ತಮ್ಮ ಗೋಳುಗಳನ್ನು ಹೇಳಿಕೊಳ್ಳಲು ಈಗಲೂ ಇರುವಾಗ, ಈ ಬಗ್ಗೆ ಈಗ ಯಾಕೆ ನಾವು ಪ್ರತಿಕ್ರಿಯಿಸಬೇಕು ಎನ್ನುವವರಿದ್ದಾರೆ ಎಂದು ಜ್ಯೂಯಿಷ್ ಮೆಟೀರಿಯಲ್ ಕ್ಲೇಮ್ಸ್ ಅಗೈನ್ಸ್ಟ್ ಜರ್ಮನಿಯ ಸಮಾವೇಶದ ಅಧ್ಯಕ್ಷ ಗಿಡಾನ್ ಟೇಲರ್ ಹೇಳುತ್ತಾರೆ.
ಹತ್ಯಾಕಾಂಡದ ಕುರಿತು ಯುವ ಸಮುದಾಯಕ್ಕೆ ಅರಿವು ಮೂಡಿಸುವಲ್ಲಿ ಮತ್ತು ಹಿಂದಿನ ಪಾಠಗಳನ್ನು ಅರ್ಥ ಮಾಡಿಸುವಲ್ಲಿ ನಾವು ಯಾಕೆ ವಿಫಲರಾಗುತ್ತಿದ್ದೇವ ಎಂಬುದರ ಬಗ್ಗೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.