ಚೆನ್ನೈ : ಬಿಜೆಪಿಗರು ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎನ್ನುವುದು ಬಹುವರ್ಷಗಳ ವಾದ. ಅದಕ್ಕೆ ತಕ್ಕಂತೆ ಆಡಳಿತಾರೂಢ ಬಿಜೆಪಿ ಮುಖಂಡರು, ಸರಕಾರದ ನೀತಿ, ಉತ್ತರ ಭಾರತೀಯರ ವರ್ತನೆ ಸಾಕಷ್ಟು ಬಾರಿ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧ #HindiTheriyathuPoda ಎಂಬ ಹ್ಯಾಶ್ ಟ್ಯಾಗ್, ಟಿ-ಶರ್ಟ್, ಮೊಬೈಲ್ ಫೋನ್ ಗಳಲ್ಲಿ ಹಾಕಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಅಲ್ಲದೆ, “I am Indian, I don’t speak Hindi,” (ನಾನೊಬ್ಬ ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ) ಎಂಬ ಘೋಷವಾಕ್ಯ ಇರುವ ಟಿ-ಶರ್ಟ್ ಗಳೂ ಭಾರಿ ಪ್ರಚಾರ ಪಡೆದಿವೆ.
ಈ ಎರಡು ಘೋಷವಾಕ್ಯಗಳಿರುವ ಟಿ-ಶರ್ಟ್ ಗಳನ್ನು ನಟ ಶಿರೀಶ್ ಸರವಣನ್ ಹಾಗೂ ಯುವ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಹಾಕಿಕೊಂಡಿರುವ ಫೋಟೊಗಳು ಟ್ವಿಟರ್ ನಲ್ಲಿ ಶೇರ್ ಆಗಿವೆ. ಹೀಗಾಗಿ ಈಗ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ವ್ಯಾಪಕ ಚರ್ಚೆಗಳು ನಡೆದಿವೆ ಮತ್ತು ಸಾಕಷ್ಟು ವೀಡಿಯೊ, ಪೋಸ್ಟರ್ ಗಳು ವೈರಲ್ ಆಗುತ್ತಿವೆ.