ಭೋಪಾಲ್ : ದೇಶದ ಪೊಲೀಸರ ಪೂರ್ವಾಗ್ರಹ ಮನಸ್ಥಿತಿ ಯಾವ ಮಟ್ಟಕ್ಕಿದೆ ಎಂಬುದು ಈ ಎರಡು ಘಟನೆಗಳಿಂದ ತಿಳಿಯಬಹುದು. ಇಂಧೋರ್ ನ ಮಾಜಿ ಕಾರ್ಪೊರೇಟರ್ ಉಸ್ಮಾನ್ ಪಟೇಲ್ ಆ.30ರಂದು ಮೊಹರಮ್ ಮೆರವಣಿಗೆ ನಡೆಸಿದುದಕ್ಕೆ, ಅವರ ವಿರುದ್ಧ ಕಠಿಣ ಭಯೋತ್ಪಾದಕ ತಡೆ ಕಾನೂನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಆದರೆ, ಅದೇ ಇಂಧೋರ್ ನ ನಂದನ್ ನಗರದಲ್ಲಿ 10 ದಿನ ಗಣೇಶ ಚತುರ್ಥಿ ಆಚರಣೆ ಆಯೋಜಿಸಿದ್ದ ಬಿಜೆಪಿ ಶಾಸಕ ರಮೇಶ್ ಮೆಂಡೋಲ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ, ಮೌನವಾಗಿದ್ದಾರೆ ಎಂದು ‘ದ ವೈರ್’ವರದಿ ಮಾಡಿದೆ.
ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಮಾರ್ಗಸೂಚಿ ಇದ್ದಾಗ್ಯೂ, ಮೆಂಡೋಲ, ಅವುಗಳನ್ನು ಉಲ್ಲಂಘಿಸಿ ಪೆಂಡಾಲ್ ಹಾಕಿದ್ದರು. ಅಲ್ಲದೆ, ಅನ್ನ ಸಂತರ್ಪಣೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದರು. ಮೆಂಡೋಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಧೋರ್ ಕಾಂಗ್ರೆಸ್ ಒತ್ತಾಯಿಸಿದೆ. ಆದರೆ, ಅದನ್ನು ಕೇಳಿಸಿಕೊಳ್ಳುವವರೇ ಇಲ್ಲ.
ಉಸ್ಮಾನ್ ಪಟೇಲ್ ಪ್ರಕರಣದಲ್ಲಿ ಮೊಹರಮ್ ಮೆರವಣಿಗೆಯಲ್ಲಿ ಭಾಗವಹಿಸಿದರೆಂಬ ಆರೋಪದಲ್ಲಿ 28 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಐವರ ವಿರುದ್ಧ ಎನ್ ಎಸ್ ಎಯಡಿ ಪ್ರಕರಣ ದಾಖಲಾಗಿದೆ. ಉಳಿದ 23 ಮಂದಿಯ ವಿರುದ್ಧ ಐಪಿಸಿ ಕಲಂಗಳಾದ 188, 269, 270 ಮತ್ತು 251ರಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಎಲ್ಲ ಬಂಧಿತ 28 ಮಂದಿಯನ್ನು ಇಂಧೋರ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಮೀನ್ ಉಲ್ ಖಾನ್ ಸುರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಶಾಸಕರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ 10 ದಿನ ಪೆಂಡಾಲ್ ಹಾಕಿದ್ದಾರೆ. ಸಾಮೂಹಿಕ ಅನ್ನ ಸಂತರ್ಪಣೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮೌನವಾಗಿದ್ದಾರೆ. ಆದರೆ, ಮುಸ್ಲಿಂ ಸಮುದಾಯದ ಜನರು ಮೊಹರಂ ಮೆರವಣಿಗೆ ನಡೆಸಿದುದಕ್ಕೆ ಅವರ ವಿರುದ್ಧ ಎನ್ ಎಸ್ ಎ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದೆ. ಆದರೆ, ಪೊಲೀಸರು ಒಂದು ಕಡೆಯಿದ್ದಾರೆ ಎಂಬುದು ಈ ಘಟನೆಗಳಿಂದ ಸಾಬೀತಾಗುತ್ತದೆ’’ ಎಂದು ಅವರು ಹೇಳಿದ್ದಾರೆ.