ಬಿಜೆಪಿ-ಸಂಘದ ಪತನದ ಆರಂಭ

0
460

ಕಾವಲು ಕಾಯಬೇಕಾಗಿದ್ದ ಚೌಕಿದಾರ, ಸೈನ್ಯಕ್ಕೆ ಸೇರಬೇಕಾದ ಯುದ್ಧ ವಿಮಾನಗಳನ್ನೇ ನುಂಗಿದ್ದಾನೆ. ಫ್ರಾನ್ಸ್ ದೇಶದಿಂದ ಸಲ್ಲಬೇಕಾಗಿದ್ದ ವೈಮಾನಿಕ ತಂತ್ರಜ್ಞಾನ ಭಾರತಕ್ಕೆ ದೊರಕದಂತೆ ದೇಶದ್ರೋಹವೆಸಗಿದ್ದಾನೆ. ದೇಶದಲ್ಲಿ ಈವರೆಗೆ ನಡೆದ ಭ್ರಷ್ಟಾಚಾರಗಳನ್ನೆಲ್ಲಾ ಮೀರಿಸುವ ರಫೇಲ್ ಹಗರಣ ‘ಭ್ರಷ್ಟಾಚಾರಗಳ ತಾಯಿ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೀಡಾಗಿದೆ. ಮೋದಿ ಮತ್ತವರ ಸಹಚರರ ಗೋಮುಖ ವ್ಯಾಘ್ರತನ ಭಾರತವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ದೇಶದ ಜನರು ಕೇಳುವ ಪ್ರಶ್ನೆಗೆ ಉತ್ತರವಿಲ್ಲದೆ ಚಡಪಡಿಸುತ್ತಿರುವ ಮೋದಿ ಪಡೆ ದೇಶದ ಗಮನ ಬೇರೆಡೆಗೆ ಸೆಳೆಯುವ ತಂತ್ರವನ್ನಾಡುತ್ತಿದೆ.ದೇಶ ಎಷ್ಟೇ ಹಾಳಾದರೂ ಬಿಜೆಪಿಯಂತೂ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಬೇಕೆಂಬ ತಂತ್ರಗಳನ್ನು ಹೆಣೆಯುತ್ತಾ, ತಮ್ಮ ಆಡಳಿತದ ಘೋರ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಹಾಗೂ ಆರೆಸ್ಸೆಸ್ ವಿವಾದಗಳನ್ನು ಹುಟ್ಟು ಹಾಕುತ್ತಿವೆ ಮತ್ತು ಕ್ಷುಲ್ಲಕ ವಿಚಾರಗಳನ್ನೂ ವಿವಾದಮಯವನ್ನಾಗಿ ಮಾಡುತ್ತಿವೆ. ‘ತ್ರಿವಳಿ ತಲಾಖ್’ ಅನ್ನುವ ಎಂಬ ಸಮಸ್ಯೆಯೇ ಅಲ್ಲದ ವಿಷಯವನ್ನು ದೇಶ ಎದುರಿಸುತ್ತಿರುವ ಗಂಡಾಂತರ ಎಂಬಂತೆ ಬಿಂಬಿಸಿ, ಮುಸ್ಲಿಮರ ಮಧ್ಯೆ ಒಡಕನ್ನು ಸಷ್ಟಿಸಲು ಹತಾಶ ಪ್ರಯತ್ನಪಟ್ಟರೂ ಅವುಗಳಿಗೆ ಸಾಧ್ಯವಾಗಲಿಲ್ಲ. ಆದರೂ ಸಾಕಷ್ಟು ಕೆಸರೆರಚಲು ಮತ್ತು ಜನತೆಯ ದಿಕ್ಕು ತಪ್ಪಿಸಲು ಯಶಸ್ವಿಯಾಗಿತ್ತು. ‘ಶಬರಿಮಲೆ ವಿವಾದ’ವನ್ನು ದೈತ್ಯೀಕರಿಸಿ ಉಗ್ರ ಧರ್ಮ ರಕ್ಷಕನೆನಿಸಿಕೊಳ್ಳಲು ಯಶಸ್ವಿಯಾದರೂ ಅದರ ಹಿಂದೆ ಸಂಘಿಗಳ ಕುತ್ಸಿತ ಹಿಂಸಾಪ್ರವತ್ತಿ ಜಗಜ್ಜಾಹೀರಾಗಿದೆ. ಶಬರಿಮಲೆ ವಿಷಯವನ್ನು ವಿವಾದಕ್ಕೆಳೆದು ಹಿಂದು ಮತಗಳನ್ನು ತನ್ನೆಡೆಗೆ ಸೆಳೆಯುವ ಮತೀಯ ರಾಜಕಾರಣವು ಕೇರಳದ ಶಾಂತಿ ಸೌಹಾರ್ದತೆಯನ್ನು ಕದಡುತ್ತಿದೆ. ಮೋದಿ ಮತ್ತು ಬಿಜೆಪಿಯನ್ನು ಟೀಕಿಸುವ ಯಾರೇ ಆಗಲಿ ಅವರಿಗೆ ಉಳಿಗಾಲವಿಲ್ಲ ಎಂಬ ತಾಕೀತನ್ನು ಮಾಡುತ್ತಿರುವ ಬಿಜೆಪಿ ಜಾರಿ ನಿರ್ದೇಶನಾಲಯ, ಸಿಬಿಐ, ಎನ್‌ಐಎ ಮುಂತಾದ ಸರಕಾರಿ ಏಜೆನ್ಸಿಗಳನ್ನು ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ.ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ನಡುವಿನ ಕದನದ ಹಿಂದೆ ಮೋದಿ ಸರಕಾರದ ಅಖಂಡ ಭ್ರಷ್ಟಾಚಾರದ ಹಿನ್ನೆಲೆ ಸೂರ್ಯ ಬೆಳಕಿನಷ್ಟೇ ಪ್ರಖರವಾಗಿ ಗೋಚರಿಸುತ್ತಿದೆ. ಕುರೇಶಿ ಹವಾಲಾ ಕೇಸಿಗೆ ಸಂಬಂಧಿಸಿ ಮೂರು ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ರಾಕೇಶ್ ಆಸ್ತಾನ ಮೋದಿಯ ಬಲಗೈ ಬಂಟ. ಮೋದಿಯೇ ಸ್ವಹಿತಾಸಕ್ತಿಯಿಂದ ಸಿಬಿಐ ವಿಶೇಷ ನಿರ್ದೇಶಕನಾಗಿ ನೇಮಕ ಮಾಡಲ್ಪಟ್ಟ ಮೋದಿ ಭಕ್ತ. ಬಿಜೆಪಿ ಅಧ್ಯಕ್ಷ ಅಮಿತ್ ಶಾನ ಮೇಲಿದ್ದ ಎನ್‌ಕೌಂಟರ್ ಮತ್ತಿತರ ಕ್ರಿಮಿನಲ್ ಕೇಸುಗಳಿಗೆ ಕ್ಲೀನ್‌ಚಿಟ್ ಕೊಟ್ಟು ಮುಗಿಸಿದ್ದ ಆಸ್ತಾನ, ಮೋದಿ-ಶಾ-ಬಿಜೆಪಿಯ ರಕ್ತಸಿಕ್ತ ಕೈಗಳನ್ನು ತೊಳೆಯಲು, ಕಾಂಚಾಣಕ್ಕಾಗಿ ಮಾಡಿದ ರಾಜಕೀಯ ಹಾದರಗಳನ್ನು ಮುಚ್ಚಿ ಸಿಬಿಐಗೆ ವಕ್ಕರಿಸಿರುವುದಾಗಿದೆ. ರಫೇಲ್ ಹಗರಣದ ಮಾಹಿತಿಗಳನ್ನು ಕೇಳಿದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನೇ ಈ ಸಂದರ್ಭದಲ್ಲಿ ಎತ್ತಿಬಿಸಾಕಿದ ಮೋದಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲೆ ‘ಧ್ವಂಸದ ಕರಸೇವೆ’ ಮಾಡಿದ್ದಾರೆ. ‘ಭಾರತದ ಪ್ರಧಾನಿ ಮೋದಿ ಕಳ್ಳ’ ಎಂದು ವಿದೇಶದ ಮಾಜಿ ಪ್ರಧಾನಿಯೊಬ್ಬರು ಹೇಳಿಕೆ ಕೊಡುವುದಾದರೆ, ಅದು ಭಾರತದ ಪ್ರಧಾನಿಯ ಕಿರೀಟಕ್ಕೊಂದು ತುರಾಯಿಯ ರೀತಿಯಲ್ಲಿದೆ ಮೋದಿಯ ವರ್ತನೆ. ಈವರೆಗೂ ವೌನ ಮುರಿಯದ ‘ಭಾಷಣಕಾರ’ ಮೋದಿಗೆ ಯಾವ ‘ಜುಮ್ಲಾ ಹೇಳಿಕೆಗಳು’ ಬಾಯಿಗೆ ಬರುತ್ತಿಲ್ಲ. ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ನೆರೆ ರಾಷ್ಟ್ರಗಳ ಸಂಬಂಧಗಳು ಹಳಸಿವೆ. ದೇಶಾದ್ಯಂತ ಜನರನ್ನು ಬೀದಿಗಳಲ್ಲಿ ಹೊಡೆದು ಕೊಲ್ಲಲಾಗುತ್ತಿದೆ. ದೇಶಕ್ಕೆ ‘ರೇಪಿಸ್ತಾನ್’ ಮತ್ತು ‘ಲಿಂಚಿಸ್ತಾನ್’ ಎಂಬ ಹೆಸರು ಬಂದಿದೆ. ಉನ್ನತ ತನಿಖಾ ಸಂಸ್ಥೆ ಸಿಬಿಐ ಬಿಜೆಪಿಯ ಚೆಲ್ಲಾಟದ ಅಡ್ಡೆಯಾದಂತಿದೆ. ಮತಾಂಧ ಸಂಘಿಗಳು ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುತ್ತಿದ್ದಾರೆ. ಇವೆಲ್ಲವೂ ದೇಶವನ್ನು ದುರಂತದ ಅಂಚಿಗೆ ತಳ್ಳುತ್ತಿದೆಯಾದರೂ, ದೇಶದ ‘ಸಂವಿಧಾನ ಪ್ರಿಯ’ ಜನರು ಮನುವಾದಿಗಳಿಗೆ ತಕ್ಕಪಾಠವನ್ನು ಕಲಿಸಿ ದೇಶದ ರಕ್ಷಣೆಗೆ ಸಿದ್ಧರಾಗುತ್ತಿದ್ದಾರೆ ಎನ್ನುವುದಂತೂ ಖಂಡಿತಾ ಸತ್ಯ. ಇಲ್ಲಿಂದಲೇ ಸಂಘ ಮತ್ತು ಬಿಜೆಪಿಯ ಪತನವಾಗಲಿದೆ.