ಬೆಳ್ತಂಗಡಿ: ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಮುಸ್ಲಿಂ ಧಾರ್ಮಿಕ ವೇಷ ಧರಿಸಿ ಹಾಗೂ ಎಸ್ಡಿಪಿಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಬಳಕೆ ಮಾಡಿರುವವರ ವಿರುದ್ಧ ಎಸ್ಡಿಪಿಐ ವೇಣೂರು ಗ್ರಾಮ ಸಮಿತಿ ವತಿಯಿಂದ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ನೋವಿಂದೂರು ಪೆರ್ಲಡ್ಕ ವ್ಯಾಪ್ತಿಯಲ್ಲಿ ಪುರುಷರಕಟ್ಟೆ ಎಂಬ ಪಾರಂಪರಿಕ ಆಚರಣೆಯಲ್ಲಿ ಕೆಲವೊಂದು ಕಿಡಿಗೇಡಿಗಳು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಮುಸ್ಲಿಂ ಸಮುದಾಯದ ಗುರುಗಳು ಧರಿಸುವ ಟೋಪಿ ಹಾಗೂ ಮಹಿಳೆಯರ ವೇಷ ಭೂಷಣ ಧರಿಸಿಕೊಂಡು ಧಾರ್ಮಿಕ ನಿಂದನೆ ಮಾಡಿದ್ದು, ಅದೇ ರೀತಿ ಎಸ್ಡಿಪಿಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಬಳಕೆ ಮಾಡಿರುತ್ತಾರೆ. ಆದುದರಿಂದ ಇಂತಹ ಕೃತ್ಯವನ್ನು ನಡೆಸಿದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಮುಖಂಡರುಗಳಾದ ಮಹಮ್ಮದ್ ವೇಣೂರು, ಅಶ್ರಫ್ ಬದ್ಯಾರು, ನಿಜಾಮ್ ಕಟ್ಟೆ, ಅಸ್ಲಾಂ ಮದ್ದಡ್ಕ, ರಿಜ್ವಾನ್ ಉಪಸ್ಥಿತರಿದ್ದರು.







