ಬೆಂಗಳೂರು: ಶನಿವಾರ ಬೆಳಿಗ್ಗೆ ಭಾರತದಾದ್ಯಂತ ಯುಪಿಐ ಸೇವೆಗಳಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ.
ಈ ದಿಢೀರ್ ತೊಂದರೆಯಿಂದ ಯುಪಿಐ ಮೇಲೆ ಪರಿಣಾಮ ಬೀರಿದೆ. ಅನೇಕ ಬಳಕೆದಾರರು ಪಾವತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಡೌನ್ ಡೆಕ್ಟರ್ ವರದಿಗಳ ಪ್ರಕಾರ, ಮಧ್ಯಾಹ್ನದ ವೇಳೆಗೆ ಈ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 1,168 ದೂರುಗಳು ಬಂದಿವೆ. ಅವುಗಳಲ್ಲಿ, ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ಯುಪಿಐ ಈ ಸಮಸ್ಯೆಯನ್ನು ಇನ್ನೂ ಪರಿಹರಿಸಿಲ್ಲ. ಕಳೆದ ಕೆಲವು ದಿನಗಳಿಂದ ಯುಪಿಐ ಈ ರೀತಿಯ ಸಮಸ್ಯೆ ಎದುರಿಸುತ್ತಿದೆ.
ಕಳೆದ ಮಾರ್ಚ್ 26 ರಂದು ಕೂಡ ಇದೇರೀತಿ ಯುಪಿಐ ಡೌನ್ ಆಗಿತ್ತು. ಆ ಸಂದರ್ಭ ವಿವಿಧ UPI ಅಪ್ಲಿಕೇಶನ್‌ಗಳ ಬಳಕೆದಾರರು ಸುಮಾರು 2 ರಿಂದ 3 ಗಂಟೆಗಳ ಕಾಲ ಇದನ್ನು ಉಪಯೋಗಿಸಲು ಸಾಧ್ಯವಾಗಲಿಲ್ಲ. UPI ಅನ್ನು ಮೇಲ್ವಿಚಾರಣೆ ಮಾಡುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಈ ಸಮಸ್ಯೆಗೆ ಕೆಲವು ತಾಂತ್ರಿಕ ತೊಂದರೆಗಳು ಕಾರಣವೆಂದು ಹೇಳಿದೆ. ಇದರಿಂದಾಗಿ ದೈನಂದಿನ ಬಳಕೆದಾರರು ಮತ್ತು ವ್ಯಾಪಾರಿಗಳು ಅಡಚಣೆಗಳನ್ನು ಅನುಭವಿಸುತ್ತಿದ್ದಾರೆ.
ಇತ್ತೀಚಿನ ಸ್ಥಗಿತವು ಭಾರತವು ದೈನಂದಿನ ವಹಿವಾಟುಗಳಿಗೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೇಲೆ ಗಣನೀಯವಾಗಿ ಅವಲಂಬಿತವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವೈಫಲ್ಯದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸರ್ವರ್ ಓವರ್ ಲೋಡ್ ಗಳು, ನಿಗದಿತ ನಿರ್ವಹಣೆ ಅಥವಾ ಸಂಭಾವ್ಯ ಸೈಬರ್ ಭದ್ರತಾ ಸಮಸ್ಯೆಗಳು ಇರಬಹುದು ಎನ್ನಲಾಗಿದೆ.