ಬಂದ್ ಯಶಸ್ವಿ: ಬಿಜೆಪಿ ಪತನದ ಸೂಚನೆಯೇ?

0
405

2019ರ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ತನ್ನ ಪ್ರಚಾರ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ. ಮೋದಿ ಮತ್ತು ಅಮಿತ್ ಶಾ ದೇಶಾದ್ಯಂತ ಪ್ರವಾಸ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. 2014ರಲ್ಲಿ ಗೆಲ್ಲುವುದಕ್ಕಾಗಿ ಯಾವ ಭರವಸೆಗಳನ್ನು ಅವರು ನೀಡಿದ್ದರೋ, ಅದರ ಕುರಿತು ಮಾತನಾಡುವುದನ್ನು ಅವರು ಉದ್ದೇಶಪೂರ್ವಕವಾಗಿ ಮರೆತುಬಿಟ್ಟಿದ್ದಾರೆ. ದೇಶದ ಜನತೆ ತಾವು ಪಡೆದುಕೊಂಡ ಆಶ್ವಾಸನೆಗಳ ಕುರಿತು ಯಾವುದೇ ಚಿಂತೆ ಇಲ್ಲದಿದ್ದರೆ, ಅದನ್ನು ಪೂರೈಸುವ ಉತ್ಸಾಹ ಅಧಿಕಾರ ಪಡೆದ ಮಂದಿಗೆ ಬರುವುದಾದರೂ ಹೇಗೆ? ಇಂತಹ ಒಂದು ಪರಿಸ್ಥಿತಿ ದೇಶದಲ್ಲಿದ್ದಂತೆ ಭಾಸವಾಗುತ್ತಿದೆ. ಅಂದಹಾಗೆ 2014ರ ಚುನಾವಣೆಗೂ 2019ರ ಚುನಾವಣೆಗೂ ಬಹಳಷ್ಟು ಅಂತರವಿದೆ. 2014ರ ಚುನಾವಣೆಯಲ್ಲಿ, ಯಾವುದೇ ಬೆಲೆ ತೆತ್ತಾದರೂ ಚುನಾವಣೆಯನ್ನು ಗೆಲ್ಲಬೇಕೆಂಬ ಉತ್ಸಾಹ ಬಿಜೆಪಿಯಲ್ಲಿದ್ದರೆ, ಈ ಬಾರಿ ಇರುವ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ.

ಕಾಂಗ್ರೆಸ್‌ನ ಜನವಿರೋಧಿ ಆಡಳಿತದಿಂದ ರೋಸಿ ಹೋಗಿದ್ದ ಜನತೆ ಹೊಸ ಅವಕಾಶಕ್ಕಾಗಿ ಕಾಯುತ್ತಿರುವಾಗ ಅನಿವಾರ್ಯವಾಗಿ ಸಿಕ್ಕಿದ ಪಕ್ಷವಾಗಿತ್ತು ಬಿಜೆಪಿ. ಹೊಸ ಪಕ್ಷ, ಹೊಸ ವ್ಯಕ್ತಿಯ ಕುರಿತಂತೆ ಬಹಳಷ್ಟು ಆಕಾಂಕ್ಷೆಗಳು ಜನರಲ್ಲಿ ಮೂಡಿದ್ದವು. ದೇಶದ ಜನರಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಹೊಸ ಅವಕಾಶಗಳ ಕದ ತೆರೆಯುವ ಕುರಿತು ನಿರೀಕ್ಷೆಗಳು ತುಂಬಿದ್ದವು. ಬಿಜೆಪಿಯನ್ನು ವಿರೋಧಿಸುತ್ತಿದ್ದ ಮಂದಿಯೂ ಅದರತ್ತ ಅನಿವಾರ್ಯ ಆಕರ್ಷಣೆಗೊಳಗಾದರು. ಸಮಯದ ಲಾಭ ಪಡೆದುಕೊಂಡ ಮೋದಿ ಜನರನ್ನು ಭಾಷಣಗಳ ಮೂಲಕ ಜನರನ್ನು ರಂಜಿಸುತ್ತಾ ಹೋದರು. ಅವರು ಚುನಾವಣಾ ಪೂರ್ವದಲ್ಲಿ ಮತ್ತು ಚುನಾವಣೋತ್ತರದಲ್ಲಿ ಮಾಡಿದ ಭಾಷಣಗಳು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಟ್ರೋಲ್ ಆಗುತ್ತಿದೆ. ಅವರು ಭಾಷಣದ ಮೂಲಕ ಉಣಬಡಿಸಿದ ಸಂಗತಿಗಳು ಇಂದು ವಾಸ್ತವಕ್ಕೆ ಬಹಳಷ್ಟು ದೂರವಾಗಿವೆ. ಇದು ಆ ಸಂದರ್ಭದಲ್ಲಿ ಮೋದಿ ಪರ ಬ್ಯಾಟಿಂಗ್ ಮಾಡಿದ ತಜ್ಞರಿಗಲ್ಲದೇ, ಜನಸಾಮಾನ್ಯರಿಗೂ ಬಹಳ ಸ್ಪಷ್ಟವಾಗಿ ಮನದಟ್ಟಾಗುತ್ತಿದೆ.

ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ, ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸಷ್ಟಿಸುವ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ, ಬೆಲೆ ಏರಿಕೆಯನ್ನು ನಿಯಂತ್ರಿಸುವ ಎಲ್ಲಾ ಭರವಸೆಗಳು ಹುಸಿಯಾದವು. ಕಪ್ಪು ಹಣ ಹೊರತೆಗೆಯುವ ಹೆಸರಿನಲ್ಲಿ ಹಾಗೂ 3 ಲಕ್ಷ ಕೋಟಿ ರೂ. ನಕಲಿ ನೋಟು ನಿಯಂತ್ರಿಸುತ್ತೇವೆ ಎಂದು ನೋಟ್ ಬ್ಯಾನ್ ಮಾಡಲಾಯಿತು. ಆದರೆ ಇದೀಗ ಶೇ.99ರಷ್ಟು ಹಣ ಬ್ಯಾಂಕ್‌ಗೆ ಮರಳಿ ಬಂದಿದೆ ಎಂಬ ತಾಜಾ ಸುದ್ದಿ ವರದಿಯಾಗಿದೆ. ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂಪಾಯಿಯನ್ನು ಅನವಶ್ಯಕ ವ್ಯಯಿಸಲಾಯಿತು. ಇದರ ಕ್ರೂರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಯಿತು. ಕಳೆದ ಬಾರಿಯ ಚುನಾವಣೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಬೆಲೆ ಏರಿಕೆಯನ್ನು ಪ್ರಮುಖ ಅಸ್ತ್ರವಾಗಿಸಿದ ಬಿಜೆಪಿ, ದುಬಾರಿ ಅಚ್ಛೇ ದಿನಗಳನ್ನು ಜನರಿಗೆ ತಂದುಕೊಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳು ಗಗನಮುಖಿಯಾಗಿವೆ. ಪೆಟ್ರೋಲ್ ಬೆಲೆ ಲೀ.ಗೆ 85 ರೂ. ಡೀಸೆಲ್ ಲೀ.ಗೆ 75 ರೂ. ಹಾಗೂ ಅಡುಗೆ ಅನಿಲದ ಒಂದು ಸಿಲಿಂಡರ್ಗೆ 800 ರೂ. ಆಗಿದೆ. ಇವುಗಳ ಬೆಲೆ ಏರಿಕೆಯಾದರೆ ಅವುಗಳ ನೇರ ಪರಿಣಾಮ ಗ್ರಾಹಕರ ಸರಕುಗಳ ಮೇಲೆ ಬೀಳುತ್ತದೆ ಎಂಬುದು ಸ್ಪಷ್ಟ ವಾಸ್ತವವಾಗಿದೆ. ಇದು ಆರ್ಥ ವ್ಯವಸ್ಥೆಯ ಆರೋಗ್ಯಕ್ಕೂ ಮಾರಕವಾಗಿದೆ. ಸದ್ಯದ ಸ್ಥಿತಿಯಲ್ಲಿ ಈ ಅಗತ್ಯ ವಸ್ತುಗಳ ಬೆಲೆ ಇಳಿಮುಖವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಭಾರತ್ ಬಂದ್ ನಡೆದ ಉದಾಹರಣೆಯಿಲ್ಲ. ಮೊನ್ನೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಅಭೂತಪೂರ್ವ ಯಶಸ್ಸು ಕಂಡಿದೆ. ಕೇವಲ ರಾಜಕೀಯ ಪಕ್ಷಗಳೇ ಬಂದ್‌ನಲ್ಲಿ ಪಾಲ್ಗೊಂಡಿದ್ದರೆ ಇಂತಹ ಒಂದು ಯಶಸ್ಸನ್ನು ಕಾಣಲು ಖಂಡಿತಾ ಸಾಧ್ಯವಾಗುತ್ತಿರಲ್ಲಿ. ಬೆಲೆ ಏರಿಕೆ ಮತ್ತು ಜನವಿರೋಧಿ ನೀತಿಗಳ ವಿರುದ್ಧ ರೋಸಿ ಹೋದ ಜನತೆ ಮಾಡಿದ ಬಂದ್ ಇದಾಗಿದೆ. ಬಹಳಷ್ಟು ತಡವಾಗಿಯಾದರೂ ಈ ರೀತಿಯ ಬೆಳವಣಿಗೆ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಭಾರತ್ ಬಂದ್ ಯಶಸ್ವಿಗೊಳಿಸಿದ ದೇಶದ ಜನತೆಗೆ ಮನಸ್ಸು ಮಾಡಿದರೆ ಜನವಿರೋಧಿ, ಜೀವವಿರೋಧಿ ಆಡಳಿತವನ್ನೂ ಕಿತ್ತೊಗೆಯಲು ಹೆಚ್ಚು ಸಮಯಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಿದಂತಾಗಿದೆ.

 

 

 

***