ಹೈದರಾಬಾದ್: ಕೋವಿಡ್ ವ್ಯಾಪಕವಾಗಿ ಹರಡುತ್ತಿರುವಾಗ ಕೇವಲ ದುರಂತಗಳು ಮಾತ್ರವಲ್ಲದೆ ಜನರಿಗೆ ಉತ್ತಮ ಅನುಭವಗಳನ್ನೂ ಕೂಡಾ ತಂದಿದೆ. ಅಂತಹಾ ಅನುಭವವೊಂದು ಹೈದರಾಬಾದಿನಲ್ಲಿ ನಡೆದಿದೆ. ಕೋವಿಡ್ ಹೆಚ್ಚುತ್ತಿರುವ ಈ ಸಂದಭದಲ್ಲಿ ಹೈದರಾಬಾದ್ನ ಮಸ್ಜಿದ್-ಇ-ಮುಸ್ತಫಾವನ್ನು ಒಂದು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇಡಿಗ ಈ ಆಸ್ಪತ್ರೆಯಲ್ಲಿ ಕೇವಲ ಮಹಿಳೆಯರು ಮತ್ತು ಮಕ್ಕಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ಇದೀಗ ಈ ಪ್ರದೇಶದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
ಲಾಕ್ಡೌನ್ ಸಮಯದಲ್ಲಿ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ NGO,ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ನ ಕಾರ್ಯಕರ್ತ ಮುಹಮ್ಮದ್ ಫರೀದುಲ್ಲಾ ಅವರಿಗೆ ಸಮಸ್ಯೆಯೊಂದು ಉದ್ಭವಿಸಿತು. ಆ ಪ್ರದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡಬಹುದಾದ ಯಾವುದೇ ಆಸ್ಪತ್ರೆಗಳಿಲ್ಲ. ಏನಾದರೂ ಮಾಡಬಹುದೇ? ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಹೋಗಬೇಕಾದರೆ 8 ಕಿ.ಮೀ ಪ್ರಯಾಣಿಸಬೇಕು. ಅದು ಸ್ಥಳೀಯ ಮಹಿಳೆಯರು ಮತ್ತು ಮಕ್ಕಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿತ್ತು. ಸಾಮಾನ್ಯ ಕೂಲಿಕಾರ್ಮಿಕರಾದ ಸ್ಥಳೀಯರಿಗೆ ಚಿಕಿತ್ಸಾ ವೆಚ್ಚವು ಕೈಗೆಟಕುತ್ತಿರಲಿಲ್ಲ. ಫರೀದುಲ್ಲಾ ಮತ್ತು ಅವರ ಸ್ನೇಹಿತರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು.
ಆ ಪ್ರದೇಶದಲ್ಲಿ ತಾತ್ಕಾಲಿಕವಾಗಿಯಾದರೂ ಕೆಲಸ ಮಾಡಲು ಒಂದೇ ಒಂದು ಕಟ್ಟಡವನ್ನು ಅವರಿಗೆ ಕಂಡುಹಿಡಿಯಲಾಗಲಿಲ್ಲ. ಅದಕ್ಕಾಗಿ ಅವರು ಮಸೀದಿಯ ಸಮಿತಿಯನ್ನು ಸಂಪರ್ಕಿಸಿದರು. ಸರ್ವ ಧರ್ಮೀಯರಿಗೂ ಆಸ್ಪತ್ರೆಯೊಂದು ತೆರೆಯಬೇಕು ಮತ್ತು ಅಂತಹಾ ಕಟ್ಟಡದ ಅಗತ್ಯವಿದೆಯೆಂದು ಮಸೀದಿಯ ಸಮಿತಿಗೆ ಅವರು ತಿಳಿಸಿದರು. ಆರೋಗ್ಯ ಸೇವೆ ಉಚಿತವಾಗಿರುವುದರಿಂದ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಫರೀದುಲ್ಲಾ ಅವರ ಬೇಡಿಕೆಯನ್ನು ಮಸೀದಿಯ ಸಮಿತಿಯು ಗಂಭೀರವಾಗಿ ಪರಿಗಣಿಸಿತು. ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿದ ಮಸೀದಿಯ ಅಧಿಕಾರಿಗಳು ಮಸೀದಿಯ ಒಂದು ಭಾಗವನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡರು.
ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಸೀದಿಯ ಸಮಿತಿಯು ಇಂತಹಾ ನಿರ್ಧಾರಕ್ಕೆ ಬಂದಿದೆ ಎಂದು ಮಸೀದಿಯ ಇಮಾಂ ಅಬ್ದುಲ್ಲಾ ಹೇಳಿದ್ದಾರೆ. ಆಸ್ಪತ್ರೆ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿಯಾದರೂ ಪುರುಷರಿಗಾಗಿ ಒಂದು ದಂತ ಚಿಕಿತ್ಸಾಲಯವೂ ಕಾರ್ಯನಿರ್ವಹಿಸುತ್ತಿದೆ. ಜನರಿಂದ ಜನರಿಗೆ ಕೋವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಜನರು ಹೆದರುತ್ತಾರೆ. ಆದರೆ ಈ ಮಸೀದಿಯಲ್ಲಿರುವ ಆಸ್ಪತ್ರೆಗೆ ಬರಲು ಆ ಸಮಸ್ಯೆ ಇರುವುದಿಲ್ಲ ಎಂದು ಮಸ್ಜಿದ್ ಇಮಾಂ ಹೇಳುತ್ತಾರೆ. ಈ ಆಸ್ಪತ್ರೆಯು ನಮಗೆ ಅನುಗ್ರಹವಾಗಿದೆ ಎಂದು ರೋಗಿಗಳೂ ಹೇಳುತ್ತಿದ್ದಾರೆ.
ಚಿತ್ರ ಕೃಪೆ : ANI