ಎ. 11-13 ರಂದು ತುಂಬೆ ಬಿ.ಎ ಗ್ರೂಪ್‌ ನಿಂದ ತುಂಬೆ ಫೆಸ್ಟ್‌-2025

- Advertisement -

ಬಂಟ್ವಾಳ: ತುಂಬೆ ಬಿಎ ಗ್ರೂಪ್‌ ನ ಆಶ್ರಯದಲ್ಲಿ ರಾಜ್ಯ ಸರಕಾರ, ಯೇನೆಪೋಯ ವಿಶ್ವವಿದ್ಯಾನಿಲಯ, ಗಲ್ಫ್ ಮೆಡಿಕಲ್‌ ಯೂನಿವರ್ಸಿಟಿ ಹಾಗೂ ಕೆಫ್‌ ಹೋಲ್ಡಿಂಗ್ಸ್‌ ಸಹಕಾರದೊಂದಿಗೆ ಮನೋರಂಜನೆ, ಆಹಾರ-ಆರೋಗ್ಯ ಮೇಳ, ಉದ್ಯೋಗ ಮಾಹಿತಿಯನ್ನೊಳಗೊಂಡ ತುಂಬೆ ಫೆಸ್ಟ್‌-2025 ಸಮಾರಂಭವು ಎ. 11ರಿಂದ 13ರ ವರೆಗೆ ತುಂಬೆ ಫಾದರ್‌ ಮುಲ್ಲರ್ ಆಸ್ಪತ್ರೆಯ ಬಳಿಯ ಮೈದಾನದಲ್ಲಿ ನಡೆಯಲಿದೆ ಎಂದು ತುಂಬೆ ಪ.ಪೂ.ಕಾಲೇಜು ಕಚೇರಿ ಅಧೀಕ್ಷಕ ಬಿ.ಅಬ್ದುಲ್‌ ಕಬೀರ್‌ ಮಾಹಿತಿ ನೀಡಿದ್ದಾರೆ.

- Advertisement -

ಸಮಾಜದ ಸರ್ವರನ್ನೂ ಒಂದುಗೂಡಿಸಿ ಪ್ರೀತಿ, ಸೌಹಾರ್ದವನ್ನು ಬೆಳೆಸುವ ಜತೆಗೆ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸಲು ತುಂಬೆ ಮುಹಿಯುದ್ದೀನ್‌ ಎಜ್ಯುಕೇಶನ್‌ ಟ್ರಸ್ಟ್‌ನ ಟ್ರಸ್ಟಿ ಬಿ.ಎಂ.ಆಶ್ರಫ್‌ ಅವರ ನೇತೃತ್ವದಲ್ಲಿ ಈ ಹಬ್ಬ ನಡೆಯಲಿದೆ. ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಸರಕಾರದ ಸಹಕಾರವನ್ನೂ ಘೋಷಿಸಿದ್ದಾರೆ ಎಂದರು.

ಎ. 11ರಂದು ಸಂಜೆ 4ಕ್ಕೆ ಉದ್ಘಾಟನಾ ಸಮಾರಂಭ ದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮೊಡಂಕಾಪು ಚರ್ಚ್‌ ನ ಧರ್ಮಗುರು ರೆ|ಫಾ| ವಲೇರಿಯನ್‌ ಡಿಸೋಜ, ಮಿತ್ತಬೈಲು ಮಸೀದಿಯ ಅಲ್‌ ಹಾಜ್‌ ಕೆ.ಪಿ.ಇರ್ಷಾದ್‌ ದಾರಿಮಿ ಭಾಗವಹಿಸುವರು. ಎ. 13 ರಂದು ಸಂಜೆ 7.30ಕ್ಕೆ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ ನಡೆಯಲಿದ್ದು, ದಕ್ಷಿಣ ಕನ್ನಡ ಸಂಸದರು, ಶಾಸಕರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವರು. ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಿವುಡ್‌-ರಾಕ್‌ ಮ್ಯೂಸಿಕ್‌, ಉನ್ನತ ತಂತ್ರಜ್ಞಾನದ ಶಬ್ದ ಬೆಳಕು, ಸುಡುಮದ್ದು ಪ್ರದರ್ಶನ ನಡೆಯಲಿದೆ.

- Advertisement -

ಮೂರು ದಿನ ವೈವಿಧ್ಯ ಹೂರಣ
ಫೆಸ್ಟ್‌ ಮೂರು ದಿನಗಳ ಕಾಲ ಸಂಜೆ 4ರಿಂದ ರಾತ್ರಿ 10ರ ವರೆಗೆ ನಡೆಯಲಿದೆ. ಇದರಲ್ಲಿ ಯೇನೆಪೋಯ ವಿವಿಯಿಂದ ಆರೋಗ್ಯ ತಪಾಸಣಾ ಶಿಬಿರ, ಗಲ್ಫ್ ಮೆಡಿಕಲ್‌ ಯೂನಿವರ್ಸಿಟಿಯಿಂದ ಉದ್ಯೋಗ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಆಹಾರ ಮೇಳ, ವಿವಿಧ ಮಳಿಗೆಗಳು, ಬ್ಯಾರಿ, ತುಳು ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಮೇಶ್‌ ಮಿಜಾರ್‌ ತಂಡದಿಂದ ತೆಲಿಕೆದ ಗೊಂಚಿಲ್‌, ಪಿಲಿನಲಿಕೆ, ಚೆಂಡೆ ವಾದನ, ಬಹುಭಾಷಾ ಕವಿಗೋಷ್ಠಿ, ಒಪ್ಪಣೆ, ದಫ್‌, ಭರತನಾಟ್ಯ ಕಾರ್ಯಕ್ರಮಗಳು ನಡೆಯುತ್ತವೆ.

- Advertisement -


Must Read

Related Articles