ಮೈಸೂರು : ನಂಜನಗೂಡು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಕೇಳಿಬಂದಿರುವ ಮೈಸೂರು ಜಿಲ್ಲಾ ಪಂಚಾಯತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ತುರ್ತು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.
ವೈದ್ಯಾಧಿಕಾರಿಯವರ ಹಠಾತ್ ಆತ್ಮಹತ್ಯೆಯಿಂದ ಆಕ್ರೋಶಿತರಾಗಿದ್ದ ವೈದ್ಯ ಸಮುದಾಯ, ಜಿ.ಪಂ. ಸಿಇಒ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು. ಡಾ. ನಾಗೇಂದ್ರ ಅವರ ತಂದೆ ದೂರು ದಾಖಲಿಸುತ್ತಿದ್ದಂತೆ ಸಿಇಒ ಮಿಶ್ರಾರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಜಿ.ಪಂ. ಸಿಇಒ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ರಿಗೆ ವಹಿಸಿಕೊಡಲಾಗಿದೆ.
ಕೊರೋನ ಸೋಂಕಿನ ಸಂಕಷ್ಟದ ಆರಂಭದಲ್ಲಿ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಾಗ, ಉತ್ತಮ ಸೇವೆ ಸಲ್ಲಿಸಿ ಗಮನ ಸೆಳೆದಿದ್ದ ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವಿನಿಂದ ಹಲವು ಅನುಮಾನಗಳು ಎದ್ದಿದ್ದವು. ಮೈಸೂರಿನಲ್ಲಿ ವೈದ್ಯ ಸಮುದಾಯವು ಕರ್ತವ್ಯದಿಂದ ದೂರವುಳಿದು ಡಾ. ನಾಗೇಂದ್ರ ಸಾವಿಗೆ ಪ್ರತಿಭಟನೆ ನಡೆಸಿತ್ತು. ಇನ್ನೊಂದೆಡೆ, ಡಾ. ನಾಗೇಂದ್ರ ಅವರ ತಂದೆ ನೀಡಿರುವ ದೂರಿನ ಆಧಾರದಲ್ಲಿ ಮಿಶ್ರಾ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮಿಶ್ರಾ ಅವರ ಒತ್ತಡವೇ ಡಾ. ನಾಗೇಂದ್ರ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ.