– ಪಿ.ಎನ್.ಬಿ.
ಮೊನ್ನೆ ತಾನೇ ನಡೆದ ಹಿಂಸಾಚಾರ ಮತ್ತು ಬೆಂಕಿಹಚ್ಚಿದ ಘಟನೆಗಳಿಂದಾಗಿ ಇಡೀ ದೇಶದ ಸುದ್ದಿ ಮಾಧ್ಯಮಗಳ ಚರ್ಚೆಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನವನ್ನು ಪಡೆದಿದೆ. ಆಗಸ್ಟ್ 11ರಂದು ರಾತ್ರಿ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ದುರದೃಷ್ಟಕರ ಘಟನೆಯಿಂದಾಗಿ ಇಡೀ ಉದ್ಯಾನ ನಗರ ತತ್ತರಿಸಿತ್ತು.
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಮತ್ತು ಕಾವಲ್ ಭೈರಸಂದ್ರ ಅಕ್ಕಪಕ್ಕದ ಪ್ರದೇಶಗಳು ಜನನಿಬಿಡ ಪ್ರದೇಶಗಳಾಗಿವೆ. ಇಲ್ಲಿ ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ, ಸೋದರತ್ವ ಯಥೇಚ್ಚವಾಗಿದೆ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಇಲ್ಲಿ ದಶಕಗಳಿಂದ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಇಲ್ಲಿ ಹಲವಾರು ಮಸೀದಿ, ದೇವಸ್ಥಾನ, ಚರ್ಚ್ ಗಳು ಅಕ್ಕಪಕ್ಕದಲ್ಲೇ ಇದ್ದರೂ, ದಿನನಿತ್ಯದ ಧಾರ್ಮಿಕ ಆಚರಣೆ, ಸಂಪ್ರದಾಯಗಳಿಗೆ ಯಾವುದೇ ಅಡ್ಡಿಯಾಗಿರಲಿಲ್ಲ ಮತ್ತು ಶಾಂತಿಯುತವಾಗಿ ಇರಲು ಯಾವತ್ತೂ ಅಡಚಣೆ ಎನಿಸಿರಲಿಲ್ಲ. ಆದಾಗ್ಯೂ, ಆ.11ರ ಘಟನೆಗಳು ಇಲ್ಲಿನ ಸಾಂಪ್ರದಾಯಿಕ ಸಾಮರಸ್ಯ ಭಾವನೆಯ ವಾತಾವರಣಕ್ಕೆ ಆತಂಕವನ್ನು ತಂದೊಡ್ಡಿದೆ.
ಪ್ರವಾದಿ ಮುಹಮ್ಮದರ ವಿರುದ್ಧ ಅವಮಾನಕಾರಿ ಪೋಸ್ಟ್ :
ಆ.1ರಂದು ಸ್ಥಳೀಯ ಯುವಕ ಪಿ.ನವೀನ್ ಎಂಬಾತ ಪ್ರವಾದಿ ಮುಹಮ್ಮದರ ಬಗ್ಗೆ ಅವಮಾನಕಾರಿ ಹೇಳಿಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸ್ಥಳೀಯ ಮುಸ್ಲಿಮರಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ನವೀನ್ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿಕನಾಗಿರುವುದರಿಂದ, ಡಿ.ಜೆ.ಹಳ್ಳಿ ಮತ್ತು ಪಕ್ಕದ ಪ್ರದೇಶದಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ವಿರುದ್ಧ ಆತ ಪೋಸ್ಟ್ ಗಳನ್ನು ಹಾಕುವುದೂ ಬಹುತೇಕರಿಗೆ ತಿಳಿದಿತ್ತು.
ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಬಾಬರಿ ಮಸೀದಿಯಿದ್ದ ತಾಣದಲ್ಲಿ ಆ.5ರಂದು ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಿತು. ಆ ದಿನ ಕೋರ್ಟ್ ಆದೇಶ ಇದ್ದಾಗ್ಯೂ, ಮುಸ್ಲಿಮರನ್ನು ಪ್ರಚೋದಿಸುವ ದೃಷ್ಟಿಯಿಂದ ನವೀನ್ ತನ್ನ ಮನೆಯ ಮುಂದೆ ಪಟಾಕಿ ಸಿಡಿಸಿದ್ದ ಮತ್ತು ಸಿಹಿ ಹಂಚಿ ಸಂಭ್ರಮಿಸಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
ಗಲಭೆಗೆ ಷಡ್ಯಂತ್ರ?
ಘಟನೆಯ ಪ್ರಮುಖ ಸೂತ್ರದಾರಿ ನವೀನ್, ಆರೆಸ್ಸೆಸ್ ಗೆ ಸೇರಿದ ವಾಟ್ಸಪ್ ಗ್ರೂಪ್ ಒಂದರದಲ್ಲಿದ್ದು ಅದರಲ್ಲಿ ಬರುವ ಪೋಸ್ಟ್ ಗಳನ್ನು ತನ್ನ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಚೋದನಾಕಾರಿ ಪೋಸ್ಟ್ ಹರಡುವ ಹಿಂದೆ ದೊಡ್ಡ ಕೋಮು ಗಲಭೆಯ ಹುನ್ನಾರ ಅಡಗಿತ್ತು ಎಂಬ ಸಂಶಯವೂ ವ್ಯಕ್ತವಾಗಿದೆ. ಆದಾಗ್ಯೂ, ನವೀನ್ ಪೋಸ್ಟ್ ಹಂಚಿಕೊಂಡಿದ್ದರ ಹಿಂದಿನ ಉದ್ದೇಶವೇನು? ವಿನ್ಯಾಸವನ್ನು ರಚಿಸಿದ್ದು ಯಾರು? ಅದನ್ನು ಮೊದಲು ಹಂಚಿಕೊಂಡವರು ಯಾರು? ಎಂಬ ಆಯಾಮದಲ್ಲಿ ತನಿಖೆ ಸಾಗುತ್ತಿಲ್ಲ. ಒಂದು ವೇಳೆ ತನಿಖೆ ಈ ಹಾದಿಯಲ್ಲಿ ಸಾಗಿದರೆ ಈ ಗಲಭೆ ಹಿಂದಿನ ನೈಜ ಷಡ್ಯಂತ್ರವನ್ನು ಬಯಲುಗೊಳಿಸಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಎಫ್ ಐಆರ್ ದಾಖಲಿಸಲು ವಿಳಂಬ :
ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದರ ವಿರುದ್ಧ ಅವಮಾನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಪಿ. ನವೀನ್ ವಿರುದ್ಧ ದೂರು ನೀಡಲು ಆ.11ರ ಮಂಗಳವಾರ ಸಂಜೆ 6:30ರ ಸುಮಾರಿಗೆ ಎಸ್ ಡಿಪಿಐ ನಾಯಕ ಮುಝಮ್ಮಿಲ್ ಪಾಶಾ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದರು. ಇದೇ ವೇಳೆಗೆ ಇನ್ನಿಬ್ಬರು ವ್ಯಕ್ತಿಗಳು ಇತರ ಕೆಲವು ವ್ಯಕ್ತಿಗಳೊಂದಿಗೆ ಇದೇ ವಿಷಯವಾಗಿ ದೂರು ನೀಡಲು ಠಾಣೆಗೆ ಆಗಮಿಸಿದ್ದರು. ಆದಾಗಲೇ ಪ್ರವಾದಿ ಮುಹಮ್ಮದರಿಗೆ ಅವಮಾನ ಮಾಡಿದ ವಿಷಯ ತಿಳಿದು ಆಕ್ರೋಶಿತರಾದ ಜನ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದರು. ನವೀನ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ತಕ್ಷಣವೇ ಬಂಧಿಸಬೇಕು ಎಂದು ಮುಝಮ್ಮಿಲ್ ಪಾಶಾ ನೇತೃತ್ವದಲ್ಲಿ ಮುಸ್ಲಿಮ್ ಮುಖಂಡರು ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸುತ್ತಿದ್ದರು. ಆದಾಗ್ಯೂ, ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡಿದ್ದರು ಮತ್ತು ಕ್ರಮ ಕೈಗೊಳ್ಳಲು 2-3 ಗಂಟೆ ಬೇಕು ಎಂದಿದ್ದರು ಎಂದು ಹೇಳಲಾಗಿದೆ.
ತ್ರಿವಳಿ ತಲಾಖ್, ಬಾಬರಿ ಮಸ್ಜಿದ್ ತೀರ್ಪು, ಕೊರೋನ ಸಂದರ್ಭದಲ್ಲಿ ಮುಸ್ಲಿಮರ ರಾಕ್ಷಸೀಕರಣ ನಡೆದ ವೇಳೆಯಲ್ಲೂ ಮುಸ್ಲಿಮ್ ಸಮುದಾಯವು ಬಹಳ ಸಂಯಮವನ್ನು ತಾಳಿತ್ತು. ಎನ್.ಆರ್.ಸಿ, ಸಿಎಎ, ಎನ್.ಪಿ.ಆರ್. ಪೌರತ್ವ ಪ್ರತಿಭಟನೆ ವಿರುದ್ಧ ನಡೆದ ಪ್ರತಿಭಟನೆಗೆ ಮುಂಚೂಣಿ ನಾಯಕತ್ವ ನೀಡಿದ ಮುಸ್ಲಿಮರು ಕಾನೂನಾತ್ಮಕವಾಗಿಯೇ ಹೋರಾಟ ನಡೆಸಿದ್ದರು. ಆ ವೇಳೆ ಸಂಘಪರಿವಾರವು ಹಿಂಸೆಗೆ ಬಹಳಷ್ಟು ಪ್ರಚೋದನೆ ನೀಡಿದರೂ ಮುಸ್ಲಿಮರು ಹಿಂಸಾಚಾರಕ್ಕೆ ಆಸ್ಪದ ನೀಡಿರಲಿಲ್ಲ. ಆದರೆ ಪ್ರವಾದಿ ಮುಹಮ್ಮದರ ಕುರಿತು ನಿಂದನಾತ್ಮಕ ಪೋಸ್ಟ್ ಹಾಕಿದ್ದು, ಅಲ್ಲಿನ ಮುಸ್ಲಿಮರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತ್ರವಲ್ಲ, ಎಫ್ ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಂತೆ, ಠಾಣೆಯ ಹೊರಗೆ ಜಮಾಯಿಸಿದ್ದ ಗುಂಪಿನ ಜನರು ತಾಳ್ಮೆ ಕಳೆದುಕೊಳ್ಳತೊಡಗಿದ್ದರು. ಆರೋಪಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಅವರು ಘೋಷಣೆಗಳನ್ನು ಕೂಗಲಾರಂಭಿಸಿದ್ದರು.
ಎಸ್ ಡಿಪಿಐ ನಾಯಕರಿಂದ ಶಾಂತಿಗೆ ಮನವಿ :
ಅಲ್ಲಿ ವರೆಗೆ ಠಾಣೆಯೊಳಗೇ ಇದ್ದ ಎಸ್ ಡಿಪಿಐ ನಾಯಕ ಮುಝಮ್ಮಿಲ್ ಪಾಶಾ ರಾತ್ರಿ 8 ಗಂಟೆಗೆ, ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಗೇಟ್ ಬಳಿ ಜಮಾಯಿಸಿದ್ದ ಗುಂಪನ್ನುದ್ದೇಶಿಸಿ ಮಾತನಾಡಿದರು. ಅವರು ಮಾತನಾಡುವಾಗ ಪೊಲೀಸ್ ಧ್ವನಿ ವರ್ಧಕ (ಪಿಎ) ವ್ಯವಸ್ಥೆಯನ್ನೇ ಬಳಸಿದ್ದರು. ಜನತೆ ಶಾಂತಿ ಕಾಪಾಡಬೇಕು, ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ಈ ವೇಳೆ ಮನವಿ ಮಾಡಿದ್ದರು. ಅವಮಾನಕಾರಿ ಪೋಸ್ಟ್ ಗಾಗಿ ನವೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಜನತೆಗೆ ಭರವಸೆ ನೀಡಿದ್ದರು.
ಮುಝಮ್ಮಿಲ್ ಜೊತೆಗೆ ಅತ್ಯಂತ ಗೌರವಾನ್ವಿತರೂ ಆಗಿರುವ ಮೌಲಾನಾ ಪಿ.ಎಂ. ಮುಝಮ್ಮಿಲ್ ಸಾಹೆಬ್ ಕೂಡ ಜನತೆಯನ್ನು ಶಾಂತವಾಗಿಸಲು ಪ್ರಯತ್ನಿಸಿದರು. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿದೆ. ಈ ನಡುವೆ, ಹಿಂಸಾಚಾರ ಆರಂಭಗೊಂಡಿತ್ತು. ಪೊಲೀಸ್ ಠಾಣೆಯ ಮೇಲೆ ಕಲ್ಲುಗಳನ್ನೆಸೆಯಲಾಗಿತ್ತು ಮತ್ತು ಸುತ್ತಮುತ್ತಲಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಬಸ್ ಗೆ ಬೆಂಕಿ ಹಂಚಲಾಗಿತ್ತು. ಜನರ ಒಂದು ಗುಂಪು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ನವೀನ್ ಮನೆಗೆ ತೆರಳಿತ್ತು. ಉಳಿದವರು ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು.
ಪೊಲೀಸರ ಪ್ರತೀಕಾರ :
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಸ್ ಆರ್ ಪಿ) ಸೇರಿದಂತೆ ಪೊಲೀಸರ ದಂಡು ಸ್ಥಳಕ್ಕಾಗಮಿಸಿತು. ಲಾಠಿಚಾರ್ಜ್ ನಿಂದ ಗುಂಪನ್ನು ಚದುರಿಸಲು ವಿಫಲವಾದಾಗ, ಗುಂಪನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ನಂತರ ಗುಂಪಿನ ಮೇಲೆ ಗುಂಡು ಹಾರಿಸಿದರು. ಪೊಲೀಸ್ ಗೋಲಿಬಾರ್ ನಲ್ಲಿ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿ, ನಂತರ ಇಬ್ಬರು ಆಸ್ಪತ್ರೆಯಲ್ಲಿ ಪ್ರಾಣ ತೆತ್ತರು. ಆಸ್ಪತ್ರೆ ವರದಿ ಪ್ರಕಾರ, ಹೊಟ್ಟೆಯಲ್ಲಾಗಿರುವ ರಂಧ್ರ ಅಲ್ಸರ್ ಅಥವಾ ಗಾಯದಿಂದ ಆಗಿರುವ ರೀತಿಯದ್ದಾಗಿದೆ ಎಂದು ತಿಳಿಸಲಾಗಿದೆ. ಗೋಲಿಬಾರ್ ನಲ್ಲಿ ಗಾಯಗೊಂಡಿದ್ದ ನಾಲ್ಕನೇ ವ್ಯಕ್ತಿ ಸಾವಿನ ಕುರಿತು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು, ಸಾವಿಗೆ ಪೊಲೀಸರು ಹೊಣೆ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ನಾಯಕರಿಂದ ಶಾಂತಿಗೆ ಮನವಿ
ರಾತ್ರಿ 11 ಗಂಟೆಗೆ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಮತ್ತು ರಿಝ್ವಾನ್ ಅರ್ಷದ್ ಸ್ಥಳಕ್ಕೆ ಧಾವಿಸಿದರು. ಗಲಭೆ ನಿಲ್ಲಿಸುವಂತೆ ಮತ್ತು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸದಂತೆ ಅವರು ಪೊಲೀಸ್ ಜೀಪ್ ನ ಮೈಕ್ ಬಳಸಿಕೊಂಡು ವಿನಂತಿಸಲಾರಂಭಿಸಿದರು. ನವೀನ್ ಮಾಡಿರುವುದು ಖಂಡನೀಯ, ಆದರೆ ಆತನ ವಿರುದ್ಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದರು. ನವೀನ್ ಬಂಧನದ ಬಗ್ಗೆ ತಾವು ಭರವಸೆ ನೀಡುತ್ತೇವೆ, ವಿಷಯವನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳೋಣ ಎಂದೂ ಅವರು ಭರವಸೆ ನೀಡಿದರು. ಆದರೆ, ಗುಂಪು ಹಿಮ್ಮೆಟ್ಟಲಿಲ್ಲ ಮತ್ತು ನಾಯಕರ ಮನವಿ ವ್ಯರ್ಥವಾಯಿತು.
ಮುಸ್ಲಿಮ್ ಯುವಕರು ದೇವಸ್ಥಾನ ರಕ್ಷಿಸಿದರು :
ಈ ಎಲ್ಲ ಹಿಂಸಾಚಾರದ ನಡುವೆಯೂ, ಮುಸ್ಲಿಮ್ ಯುವಕರ ಗುಂಪೊಂದು ಘಟನೆಯು ಕೋಮು ಬಣ್ಣಕ್ಕೆ ತಿರುಗಕೂಡದು ಎಂದು ಪ್ರಯತ್ನಿಸಿತು. ಕಾವಲ್ ಭೈರಸಂದ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಪಕ್ಕದ ದೇವಸ್ಥಾನವೊಂದರ ಸುತ್ತ ಮುಸ್ಲಿಮ್ ಯುವಕರು ಮಾನವ ಸರಪಳಿ ನಿರ್ಮಿಸಿದರು. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಸ್ಲಿಮ್ ಯುವಕರು ನನ್ನನ್ನು ಕಾಪಾಡಿದರು :
ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸ್ಥಳೀಯ ಮುಸ್ಲಿಮರು ರಕ್ಷಿಸಿದರು ಎಂದು ಸ್ವತಃ ನವೀನ್ ನ ತಾಯಿ ಜಯಂತಿ ತಿಳಿಸಿದರು. “ಸ್ಥಳೀಯ ಮುಸ್ಲಿಮ್ ಯುವಕರು ನನ್ನ ರಕ್ಷಣೆಗೆ ಬರುತ್ತಿರಲಿಲ್ಲ ಎಂದಿದ್ದರೆ, ಇವತ್ತು ನಾನು ಜೀವಂತವಿರುತ್ತಿದ್ದೆ ಎಂದೆನಿಸುತ್ತಿಲ್ಲ’’ಎಂದು ಜಯಂತಿ ಹೇಳಿದ್ದಾರೆ.
ನವೀನನ ರಾಜಕೀಯ ಆಸಕ್ತಿ ಮತ್ತು ಶಾಸಕರೊಂದಿಗಿನ ರಾಜಕೀಯ ಪೈಪೋಟಿ :
ನವೀನ ಉದಯೋನ್ಮುಖ ರಾಜಕಾರಣಿ. ಆದರೆ, ತನ್ನ ಸೋದರ ಸಂಬಂಧಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಮೆಚ್ಚುಗೆಯಾಗದೆ, ಅವರಿಂದ ದೂರವುಳಿದಿದ್ದ. ತನ್ನ ಮದುವೆಯಾದ ಸ್ವಲ್ಪ ಸಮಯದ ನಂತರ ಜೂ.22ರಂದು ತಾನು ತನ್ನ ಮಾವನಂತೆ ಆಗಬೇಕೆಂಬ ಇಚ್ಛೆಯನ್ನು ಆತ ಹಂಚಿಕೊಂಡಿದ್ದ. “ಪ್ರತಿಯೊಂದು ಸಣ್ಣ ಕೆಲಸಕ್ಕೂ ಬಿಬಿಎಂಪಿ ಎಂಜಿನಿಯರ್ ಗಳು – ಆರೋಗ್ಯಾಧಿಕಾರಿಗಳು – ಕಾರ್ಪೊರೇಟರ್ ಗಳೊಂದಿಗೆ ವಿನಂತಿಸುವುದು ನನಗೆ ಸಾಕಾಗಿ ಹೋಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ವಿಷಯವನ್ನು ನಾನೇ ಬದಲಾಯಿಸಲು ನಿರ್ಧರಿಸಿದ್ದೇನೆ’’ಎಂದು ನವೀನ್ ಹೇಳಿಕೊಂಡಿದ್ದ. ಆ.8ರಂದು, ಕಾಂಗ್ರೆಸ್ ನ ಮಾಜಿ ನಾಯಕ, ಪ್ರಸ್ತುತ ಬಿಜೆಪಿ ಸಂಪರ್ಕದಲ್ಲಿರುವ ರೋಶನ್ ಬೇಗ್ ರ ಬಗ್ಗೆ ಮೆಚ್ಚುಗೆಯ ಪೋಸ್ಟ್ ಒಂದನ್ನು ನವೀನ್ ಹಾಕಿದ್ದ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂಬಂಧಿಸಿದ ಅವರ ನಿಲುವಿಗೆ ಆತ ಮೆಚ್ಚುಗೆ ವ್ಯಕ್ತಪಡಿಸಿದ್ದ.
ಕಾಂಗ್ರೆಸ್ ಕಾರ್ಪೊರೇಟರ್ ಪತಿಯ ಬಂಧನ :
ಕಾಂಗ್ರೆಸ್ ಕಾರ್ಪೊರೇಟರ್ ಓರ್ವರ ಪತಿಯ ಬಂಧನದಿಂದ, ಆ ಪಕ್ಷದೊಳಗೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿರುವುದು ಬಹಿರಂಗವಾಗಿದೆ. ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಸಂಪತ್ ರಾಜ್ ರ ಹೆಸರು ಕೂಡ ಪ್ರಕರಣದಲ್ಲಿ ಕೇಳಿ ಬಂದಿದೆ. ಕಳೆದ ಚುನಾವಣೆಯಲ್ಲಿ ಸಿವಿ ರಾಮನ್ ನಗರದಲ್ಲಿ ವಿಧಾನಸಭಾ ಚುನಾವಣೆ ಸೋತ ಬಳಿಕ, ಅಖಂಡ ಶ್ರೀನಿವಾಸ ಮೂರ್ತಿ ಅವರು ಶಾಸಕರಾಗಿರುವ ಪುಲಕೇಶಿ ನಗರ ಕ್ಷೇತ್ರದ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಇದು ಇಬ್ಬರು ಕಾಂಗ್ರೆಸ್ ನಾಯಕರ ಬೆಂಬಲಿಗರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಮಾಧ್ಯಮ ಅಪಪ್ರಚಾರ :
ಟಿವಿ ಹಾಗೂ ಮುದ್ರಣ ಮಾಧ್ಯಮದ ಒಂದು ಬಣ ಈ ಪ್ರಕರಣವನ್ನಿಟ್ಟುಕೊಂಡು ಎಸ್ ಡಿಪಿಐಯನ್ನು ನಿಂದಿಸುವುದಕ್ಕೆ ಮುಂದಾಗಿದೆ. ಎಸ್ ಡಿಪಿಐ ನಾಯಕ ಮುಝಮ್ಮಿಲ್ ಪಾಶಾ ಈ ಘಟನೆಯ ರೂವಾರಿ ಎಂಬಂತೆ ಅವು ಬಿಂಬಿಸುತ್ತಿವೆ. ಕಪೋಲಕಲ್ಪಿತ ವರದಿಗಳು ಮತ್ತು ಊಹೆಗಳ ಮೂಲಕ ಮಾಧ್ಯಮದ ಈ ವರ್ಗ ಎಸ್ ಡಿಪಿಐಯ ತೇಜೋವಧೆ ನಡೆಸಲು ಉತ್ಸುಕವಾಗಿ ಕೆಲಸ ಮಾಡಿದೆ. ಆದಾಗ್ಯೂ, ಸತ್ಯ ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೊಳಗಿನ ಗುಂಪುಗಾರಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕಾರಣ ಮತ್ತು ಬಿಜೆಪಿಯ ದಲಿತ – ಮುಸ್ಲಿಮರ ಒಗ್ಗಟ್ಟು ಮುರಿಯುವ ತಂತ್ರ ಮುಂತಾದ ಪ್ರಮುಖ ಕಾರಣಗಳು ಸೇರಿದಂತೆ ಗಲಭೆಯ ಹಿಂದಿರುವ ವಿವಿಧ ದೃಷ್ಟಿಕೋನಗಳು ಬೆಳಕಿಗೆ ಬರುತ್ತಿವೆ. ಪೊಲೀಸರು ಹಾಗೂ ರಾಜ್ಯ ಸರಕಾರದ ವೈಫಲ್ಯದ ಕುರಿತು ಗಮನ ಬೇರೆಡೆ ಸೆಳೆಯಲು ಮತ್ತು ಇವೆಲ್ಲದರ ಬಗ್ಗೆ ಗಮನ ಹರಿಸದೆ ಮಾಧ್ಯಮಗಳು ಎಸ್ ಡಿಪಿಐಯ ಘನತೆಗೆ ಕಳಂಕ ಹಚ್ಚುವ ಕಾರ್ಯಕ್ಕೆ ಒತ್ತು ನೀಡಿವೆ. ಎಸ್ ಡಿಪಿಐ ಬೆಂಗಳೂರಿನಲ್ಲಿ ಎರಡು ಪತ್ರಿಕಾಗೋಷ್ಠಿಗಳನ್ನು ನಡೆಸಿದೆ. ಘಟನೆಯ ವೇಳೆ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ನಾಯಕರು ಶ್ರಮಿಸಿದ ಕುರಿತು ಅದು ಈ ಪತ್ರಿಕಾಗೋಷ್ಠಿಗಳಲ್ಲಿ ಸ್ಪಷ್ಟಪಡಿಸಿದೆ.
ಬಂಧನಗಳು :
ಪ್ರವಾದಿ ಮುಹಮ್ಮದರನ್ನು ಅವಮಾನಿಸಿದ ನವೀನ್ ಸೇರಿದಂತೆ, ಹಿಂಸಾಚಾರದ ಘಟನೆಗೆ ಸಂಬಂಧಿಸಿ ಇಲ್ಲಿ ವರೆಗೆ 400ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಜನರ ಗುಂಪನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದ ಎಸ್ ಡಿಪಿಐ ನಾಯಕ ಮುಝಮ್ಮಿಲ್ ಪಾಶಾ ಅವರನ್ನೂ ಬಂಧಿಸಲಾಗಿದೆ. ಜನರನ್ನು ಶಾಂತಗೊಳಿಸುತ್ತಿರುವ ವೀಡಿಯೊ ವೈರಲ್ ಆಗಿದ್ದರೂ, ಗುಂಪನ್ನು ಪ್ರಚೋದಿಸಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರವಾದಿಯವರ ನಿಂದನೆಯ ವಿರುದ್ಧ ಪೊಲೀಸರ ನಿಷ್ಕ್ರಿಯತೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ತಮ್ಮ ಪಕ್ಷದ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಎಸ್ ಡಿಪಿಐ ನಾಯಕರು ಹೇಳಿದ್ದಾರೆ.
ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಭಾರೀ ಪೊಲೀಸರ ನಿಯೋಜನೆಯೊಂದಿಗೆ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದರು. ಹಲವಾರು ಅಮಾಯಕರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಎಸ್ ಡಿಪಿಐ ನಾಯಕ ಮುಝಮ್ಮಿಲ್ ಪಾಶಾರೊಂದಿಗೆ ಜನತೆಯನ್ನು ಶಾಂತಗೊಳಿಸುತ್ತಿದ್ದ ಮೌಲಾನಾ ಮುಝಾಮ್ಮಿಲ್ ಅವರನ್ನೂ ಬಂಧಿಸಲಾಗಿತ್ತು ಮತ್ತು ಆ ಬಳಿಕ ಬಿಡುಗಡೆಗೊಳಿಸಲಾಗಿದೆ.
ನ್ಯಾಯಾಂಗ ತನಿಖೆಗೆ ಒತ್ತಾಯ:
ರಾಜ್ಯ ಸರಕಾರ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದೆ. ಎಸ್ ಡಿಪಿಐ ಮತ್ತು ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ಒತ್ತಾಯಿಸಿವೆ. ದೂರು ನೀಡಿದ್ದ ಸಂದರ್ಭ ಪೊಲೀಸರು ಮತ್ತು ಗುಪ್ತಚರ ಇಲಾಖೆ ತ್ವರಿತವಾಗಿ ಕಾರ್ಯ ನಿರ್ವಹಿಸಿದ್ದರೆ ಈ ದುರಂತಮಯ ಘಟನೆ ತಪ್ಪಿಸಬಹುದಿತ್ತು. ನಿಂದನಾತ್ಮಕ ಮತ್ತು ಅವಮಾನಕಾರಿ ಹೇಳಿಕೆಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಅಹಿತಕರ ಸನ್ನಿವೇಶಗಳನ್ನು ತಪ್ಪಿಸಲು, ಯಾವುದೇ ವಿಷಯಕ್ಕೆ ಸಂಬಂಧಿಸಿ ಪ್ರಜಾಸತ್ತಾತ್ಮಕ ಮತ್ತು ಕಾನೂನು ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬೇಕೆಂಬ ಅರಿವನ್ನು ಯುವ ಜನಾಂಗಕ್ಕೆ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.