ಪಾಟ್ನ: ಭಾರತದಲ್ಲಿರುವ ಶೇಕಡಾ 90ರಷ್ಟು ಮುಸ್ಲಿಮರು ಮತಾಂತರಗೊಂಡವರಾಗಿದ್ದಾರೆ. ಮೇಲ್ಜಾತಿಯ ಜಾತಿವಾದದ ಕಿರುಕುಳ ಸಹಿಸಲಾಗದೆ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದು ಜೆಡಿಯು ಹಿರಿಯ ನಾಯಕ ಹಾಗೂ ಕಟ್ಟಡ ನಿರ್ಮಾಣ ಖಾತೆ ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.
ಭೀಮ್ ಚೌಪಾಲ್ ಸಂದರ್ಭದಲ್ಲಿ ಬಿಹಾರದ ನಳಂದಾ ಜಿಲ್ಲಾ ಕೇಂದ್ರ ಬಿಹಾರ ಶರೀಫ್’ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯು ಯಾವಾಗಲೂ ಹಿಂದು-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಾತಿವಾದದ ದೌರ್ಜನ್ಯಗಳಿಂದ ಪಾರಾಗಲು ದಲಿತರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಮತ್ತು ಈಗ ಭಾರತದ ಮುಸ್ಲಿಮರ ಪೈಕಿ ಶೇಕಡಾ 90 ಕ್ಕಿಂತ ಹೆಚ್ಚು ಮತಾಂತರ ಹೊಂದಿದವರು ಎಂದು ಚೌಧರಿ ಇದೇ ವೇಳೆ ಹೇಳಿದರು.
ರಂಝಾನ್ ಹಿನ್ನೆಲೆಯಲ್ಲಿ ಬಿಹಾರದ ಮುಸ್ಲಿಂ ನೌಕರರಿಗೆ ರಾಜ್ಯ ಸರ್ಕಾರವು ವಿಶೇಷ ಸವಲತ್ತು ನೀಡಿದೆ. ಮುಸ್ಲಿಂ ನೌಕರರು ಕಚೇರಿಗೆ ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಬಂದು ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಕಚೇರಿಯಿಂದ ತೆರಳಬಹುದು ಎಂಬುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಬಿಜೆಪಿ ಹಾಗೂ ಜೆಡಿಯು ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.