ಕೇಂದ್ರದ ಮೂರು ಕೃಷಿ ಕಾನೂನುಗಳ ಕುರಿತ ಬಿಕ್ಕಟ್ಟು ಪರಿಹರಿಸಲು ಗುರುವಾರ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಮುಖಂಡರೊಂದಿಗೆ ದೆಹಲಿಯಲ್ಲಿ ನಡೆದ 9ನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ.
ಮುಂದಿನ ಸುತ್ತಿನ ಮಾತುಕತೆ ಜನವರಿ 19 ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ. ಇಂದಿನ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಹಾಗೂ ಸುಮಾರು 40 ರೈತ ಮುಖಂಡರು ಭಾಗವಹಿಸಿದ್ದರು.
ರೈತರು ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಮೂಲ ಬೇಡಿಕೆಗೆ ಪಟ್ಟು ಹಿಡಿದಿದ್ದು, ತಿದ್ದುಪಡಿಗಳನ್ನು ಮಾಡುವ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆ ನಂತರ ಮಾತನಾಡಿದ ಸಚಿವ ನರೇಂದ್ರ ಸಿಂಗ್ ತೋಮರ್, ರೈತ ಸಂಘಟನೆಗಳ ಮುಖಂಡರೊಂದಿಗೆ ಇಂದು ನಡೆಸಿದ ಮಾತುಕತೆ ನಿರ್ಣಾಯಕವಲ್ಲ. ಇದೇ 19ರಂದು ಮತ್ತೆ ಸಭೆ ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದರು.