ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಸಿ.ಡಿ.ವಿಚಾರ ಪ್ರಸ್ತಾಪಿಸಿದ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವೈಯಕ್ತಿಕ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯತ್ನಾಳ, ಇದೊಂದು ಕೀಳುಮಟ್ಟದ ಕಾರ್ಯವೈಖರಿ, ಸೇಡಿನ ರಾಜಕೀಯಕ್ಕೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಶಾಸಕ, ‘ಮುಂದಿನ ದಿನಗಳಲ್ಲಿ ತನಗೆ ಏನಾದರೂ ತೊಂದರೆಗಳಾದರೆ ಅಥವಾ ಅನಾಹುತಗಳೇನಾದರೂ ಆದಲ್ಲಿ ಅದಕ್ಕೆ ಆಡಳಿತ ನಡೆಸುತ್ತಿರುವ ತಾವು ಮತ್ತು ಸರ್ಕಾರ ಹೊಣೆಯಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.
ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದೀರಿ, ನನ್ನ ಹೋರಾಟದ ನಿಲುವಿನಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ಸರ್ಕಾರ ಮೊದಲೇ ನನಗೆ ಪೊಲೀಸ್ ರಕ್ಷಣೆಯನ್ನು ಒದಗಿಸಿತ್ತು. ಆದರೆ ದಿಢೀರನೆ ನನಗೆ ಕೊಟ್ಟ ಪೊಲೀಸ್ ರಕ್ಷಣೆಯನ್ನು ಹಿಂಪಡೆದಿರುವ ಹಿಂದಿನ ದುರುದ್ದೇಶ ಗೊತ್ತು. ಇದು ತಮ್ಮ ಹಳೆಯ ಮತ್ತು ವಿಕೃತ ಮನಸ್ಸನ್ನು ಬಿಂಬಿಸುತ್ತದೆ ಎಂದು ಯತ್ನಾಳ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.