ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಸಂಘಪರಿವಾರ ಮತ್ತು ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳ ಪ್ರಚೋದನಕಾರಿ ಹೇಳಿಕೆಗಳು ಹಾಗೂ ಕನ್ನಡ ಮಾಧ್ಯಮಗಳ ಕೋಮು ವೈಷಮ್ಯ ತುಂಬಿದ ವರದಿಗಳೇ ಕಾರಣ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಾರೆಯ ಕಳಂಜದಲ್ಲಿ ಸಂಘಪರಿವಾರ ಕಾರ್ಯಕರ್ತರು ಮಸೂದ್ ಅವರನ್ನು ಹತ್ಯೆ ಮಾಡಿದ ನಂತರದ ಘಟನಾವಳಿಗಳಿಗೆ ಸರ್ಕಾರವೇ ನೇರ ಹೊಣೆ. ಪ್ರವೀಣ್ ಕುಟುಂಬವನ್ನು ಭೇಟಿಯಾಗಲು ಬಂದು ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಒಂದೂವರೆ ತಿಂಗಳ ಹಿಂದೆ ಮತ್ತು ಒಂದು ವಾರದ ಹಿಂದೆ ಸಂಘಪರಿವಾರ ಗೂಂಡಗಳಿಂದ ಹತ್ಯೆಗೊಳಗಾದ ಪೆರ್ಲಂಪಾಡಿ ಚರಣ್ ರಾಜ್ ಮತ್ತು ಕಳಂಜ ಮಸೂದ್ ಮನೆಗೆ ಭೇಟಿ ನೀಡದೆ ರಾಜ ಧರ್ಮಕ್ಕೆ ದ್ರೋಹ ವೆಸಗಿದ್ದಾರೆ. ಇದೀಗ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಇರುವಾಗಲೇ ಸಂಘಪರಿವಾರದ ಗೂಂಡಾಗಳು ಸುಳ್ಯ ತಾಲೂಕಿನ ಹಲವೆಡೆ ಮುಸ್ಲಿಮರ ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೈದಿದ್ದಾರೆ ಹಾಗೂ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಮುಸ್ಲಿಂ ಯುವಕನನ್ನು ಯಾವುದೇ ಕಾರಣವಿಲ್ಲದೆ ಹತ್ಯೆ ಮಾಡಿದ್ದಾರೆ. ಮುಖ್ಯಮಂತ್ರಿಯವರು ದ.ಕ ಜಿಲ್ಲೆಗೆ ಆಗಮಿಸಿರುವುದರ ಉದ್ದೇಶ ಪ್ರವೀಣ್ ಹತ್ಯೆಯಿಂದ ಪಕ್ಷದ ವರ್ಚಸ್ಸಿಗಾದ ಡ್ಯಾಮೇಜ್ ಅನ್ನು ನಿಯಂತ್ರಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲೇ ಹೊರತು ಜಿಲ್ಲೆಯ ಶಾಂತಿ, ಸುವ್ಯವಸ್ಥೆಯ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಅಲ್ಲ ಎಂಬುದು ಸ್ಪಷ್ಟ. ಕಳೆದ ಒಂದು ವಾರದಿಂದ ನಿರಂತರವಾಗಿ ಅಲ್ಲಲ್ಲಿ ಗಲಭೆ ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಹಲವು ನಾಯಕರ ಕೋಮು ವೈಷಮ್ಯ ತುಂಬಿದ ಬೇಜವಾಬ್ದಾರಿ ಹೇಳಿಕೆಗಳನ್ನು ಗಮನಿಸುವಾಗ ಸರ್ಕಾರದ ಹಲವಾರು ಹಗರಣಗಳ ದಿಕ್ಕು ತಪ್ಪಿಸಲು ಸರ್ಕಾರವೇ ಸಂಘಪರಿವಾರದೊಂದಿಗೆ ಸೇರಿಕೊಂಡು ಈ ರೀತಿಯ ಗಲಭೆಗಳನ್ನು ಹಾಗೂ ಹತ್ಯೆಗಳನ್ನು ನಡೆಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ.
ಸುರತ್ಕಲ್ ನಲ್ಲಿ ಫಾಝಿಲ್ ರನ್ನು ಹತ್ಯೆ ನಡೆಸಿದ ಕೃತ್ಯದ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರನ್ನು ಹಾಗೂ ಕೊಲೆ ನಡೆದ ಕೂಡಲೇ ಸಂಘಪರಿವಾರದಂತೆ ಸುಳ್ಳು ಮಾಹಿತಿ ವರದಿ ಮಾಡಿ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದ ಟಿವಿ ಮಾಧ್ಯಮಗಳ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಉಪಸ್ಥಿತರಿದ್ದರು.