Home ಟಾಪ್ ಸುದ್ದಿಗಳು ದೇಶದಲ್ಲಿ ಶೇ.79ರಷ್ಟು ಮಂದಿ ಮಾಂಸಾಹಾರಿಗಳು, ಅನೇಕ ದೇವಾಲಯಗಳಲ್ಲಿ ಮಾಂಸ ನೇವೇದ್ಯ ಮಾಡಿ ಪೂಜೆ ಮಾಡುತ್ತಾರೆ: ಎಚ್.ಎಂ.ರೇವಣ್ಣ

ದೇಶದಲ್ಲಿ ಶೇ.79ರಷ್ಟು ಮಂದಿ ಮಾಂಸಾಹಾರಿಗಳು, ಅನೇಕ ದೇವಾಲಯಗಳಲ್ಲಿ ಮಾಂಸ ನೇವೇದ್ಯ ಮಾಡಿ ಪೂಜೆ ಮಾಡುತ್ತಾರೆ: ಎಚ್.ಎಂ.ರೇವಣ್ಣ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವಿಸಿ ದೇವಾಲಯ ಪ್ರವೇಶಿಸಿದರು ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ದೇಶದಲ್ಲಿ ಶೇ.79ರಷ್ಟು ಮಂದಿ ಮಾಂಸಾಹಾರಿಗಳು ಇದ್ದಾರೆ. ಹಿಂದಿನಿಂದ ಅನೇಕ ದೇವಾಲಯಗಳಲ್ಲಿ ಮಾಂಸ ನೇವೇದ್ಯ ಮಾಡಿ ಪೂಜೆ ಮಾಡುತ್ತಾರೆ. ಪಾಂಡವಪುರದಲ್ಲಿ ಆಲತಿಹುತ್ತ ದೇವಾಲಯ, ಭೈರವೇಶ್ವರ ದೇವಾಲಯದಲ್ಲಿ ಬ್ರಾಂದಿ ಹಾಗೂ ಮಾಂಸ ನೇವೇದ್ಯ ಮಾಡುತ್ತಾರೆ. ಕೇರಳದ ಕನ್ನೂರು ಜಿಲ್ಲೆಯ ಇರ್ಕೂರಿನ ದೇವಾಲಯವೊಂದರಲ್ಲಿ ಕೋಳಿ ಹಾಗೂ ಮದ್ಯವನ್ನು ಇಟ್ಟು ಪೂಜೆ ಮಾಡಿ ಪ್ರಸಾದವಾಗಿ ನೀಡುತ್ತಾರೆ. ಹಾಗಾದರೆ ಇದರ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಹೆಚ್.ಎಂ ರೇವಣ್ಣ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪೀಡಿತ ಕೊಡಗು ಜಿಲ್ಲೆ ಜನರ ಸಂಕಷ್ಟಗಳನ್ನು ಆಲಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೆರಳಿದಾಗ ಕಾರಿಗೆ ಮೊಟ್ಟೆ ಹೊಡೆದು, ಗೋ ಬ್ಯಾಕ್ ಸಿದ್ದರಾಮಯ್ಯ ಎಂಬ ಘೋಷಣೆ ಕೂಗಿರುವುದಕ್ಕೆ ರಾಜ್ಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದೆ.  ವಿಷಯಾಂತರಕ್ಕೆ ಬಿಜೆಪಿ ನಿಸ್ಸೀಮರು. ಆ ಭಾಗದ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆಯುವುದು ತಪ್ಪು, ಆದರೆ, ಅವರ ಮಾತಿನಿಂದ ಉದ್ರೇಕಗೊಂಡು ಈ ಕೃತ್ಯ ಎಸಗಲಾಗಿದೆ ಎಂಬ ಸಮರ್ಥನೆಯನ್ನು ನೀಡಿದ್ದಾರೆ. ಇನ್ನು ಇಂಧನ ಸಚಿವ ಸುನೀಲ್ ಕುಮಾರ್, ರೇಣುಕಾಚಾರ್ಯ ಅವರು ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಘಟನೆ ಎಷ್ಟು ಸರಿ ಎಂಬುದನ್ನು ಚರ್ಚೆ ಮಾಡುವ ಬದಲು ಅದನ್ನು ತಿರುಚಲು ಈ ಕೃತ್ಯ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುತ್ತಿದ್ದಾರೆ. ಆದರೆ ಆತ ಆರ್ ಎಸ್ಎಸ್ ಹಾಗೂ ಬಿಜೆಪಿ ಸದಸ್ಯ ಎಂಬುದಕ್ಕೆ ದಾಖಲೆ ಇದೆ. ಆದರೂ ಈ ರೀತಿ ತಿರುಚುವುದು ಎಷ್ಟು ಸಮಂಜಸ. ಬಿಜೆಪಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಇಂತಹ ವಿಚಾರಗಳಿಗೆ ಆದ್ಯತೆ ನೀಡುತ್ತಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ವಿಚಾರವಾಗಿ ಪ್ರಧಾನಿಗಳಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಆದರೆ ಗೋವಿಂದ ಕಾರಜೋಳ ಅವರು ದಾಖಲೆ ಕೊಡಿ ಎಂದು ಕೇಳುತ್ತಾರೆ. ಅವರ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ದಾಖಲೆ ಕೇಳುತ್ತಿದ್ದಾರೆ. ಪಿಎಸ್ ಐ ಹಗರಣದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಶ್ನೆ ಮಾಡಿದಾಗ ಗೃಹ ಸಚಿವರು ಯಾವುದೇ ತನಿಖೆ ನಡೆದಿಲ್ಲ ಎಂದು ಹೇಳಿದ್ದರು. ಆದರೆ ಇಂದು ಎಡಿಜಿಪಿ ಅಧಿಕಾರಿಯೇ ಬಂಧನವಾಗಿದ್ದಾರೆ. ಇಂತಹ ವಿಚಾರವಾಗಿ ಚರ್ಚೆ ಮಾಡುವ ಬದಲು ಮಾಂಸಹಾರ ಹಾಗೂ ಸಸ್ಯಹಾರ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ ಎಂದು ಹೆಚ್.ಎಂ ರೇವಣ್ಣ ಹರಿಹಾಯ್ದರು.

ಸರ್ಕಾರ ಪ್ರಚಲಿತ ವಿಚಾರ, ಜನರ ಸಮಸ್ಯೆ ಬಿಟ್ಟು, ಚುನಾವಣೆ ವರ್ಷಗಳಲ್ಲಿ ಇಂತಹ ನಾಟಕವನ್ನು ಮಾಡುತ್ತಾರೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳ ಚುನಾವಣೆ ಸಮಯದಲ್ಲೂ ಇಂತಹ ವಿಚಾರಗಳನ್ನು ಚರ್ಚೆಗೆ ತಂದರು. ಆದರೆ ಯಾವುದೇ ಸಹಾಯ ಆಗಲಿಲ್ಲ. ಕರ್ನಾಟಕದಲ್ಲೂ ಇಂತಹ ವಿಚಾರಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಸರ್ಕಾರ ಇಂತಹ ಗಿಮಿಕ್ ಅನ್ನು ಜನ ಒಪ್ಪುವುದಿಲ್ಲ ಎಂದು ಎಚ್.ಎಂ.ರೇವಣ್ಣ ಹೇಳಿದರು.

ಎರಡು ರೀತಿ ಮಾತನಾಡುವ ಪ್ರತಾಪ್ ಸಿಂಹ ಅವರನ್ನು ಗುಳ್ಳೆನರಿ ಸಿಂಹ ಎಂದು ಕರೆಯಬೇಕು. ರಾಜಕೀಯದಲ್ಲಿ ಜನಪರ ಕಾರ್ಯಕ್ರಮ ಕೊಟ್ಟು ಮತ ಕೇಳಬೇಕೆ ವಿನಃ ಇಂತಹ ವಿಚಾರಗಳಿಂದ ಕೇಳಬಾರದು ಎಂದು ಅವರು ಟೀಕಿಸಿದರು.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಿಭಾಯಿಸುತ್ತಿದ್ದು, ಸರಿಯಾದ ಆಡಳಿತ ಇಲ್ಲ ಎಂದು ಸಂಪುಟ ಸಚಿವ ಮಾಧುಸ್ವಾಮಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. 2021ರ ಜುಲೈ ನಲ್ಲಿ ನಾಖಾವೂಂಗಾ ನಾ ಖಾನೇದೂಂಗಾ ಎನ್ನುವ ಪ್ರಧಾನಿಗಳಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದಲ್ಲಿನ ಭ್ರಷ್ಟಾಚಾರ ಕುರಿತು ಪತ್ರ ಬರೆದಿದ್ದಾರೆ. ಈಗ ಎರಡನೇ ಪತ್ರವೂ ಸಿದ್ಧವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದೆ. ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪ್ರವಾಹದಿಂದ 74 ಜನ ಸತ್ತಿರುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ಸರ್ಕಾರದ್ದಾಗಿದೆ. ಆದರೆ ಸರ್ಕಾರ ಎಲ್ಲ ರೀತಿ ವಿಫಲವಾಗಿರುವ ಸಮಯದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಹೇಗಿ ಅಲ್ಲಿನ ಸಮಸ್ಯೆ ಆಲಿಸಲು ಹೋದಾಗ ಜನರ ದಾರಿ ತಪ್ಪಿಸಲು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಆಹಾರ ವ್ಯವಸ್ಥೆ ಮೇಲೆ ಪುಂಖಾನುಪುಂಖವಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರು ಮಂತ್ರಿ, ಶಾಸಕರಾಗಬೇಕಾದರೆ ನೀವು ಸಂವಿಧಾನ ರೀತಿ ನಡೆದುಕೊಳ್ಳುವುದಾಗಿ ನಡೆದುಕೊಂಡು ಅದರ ಆಶಯ ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡುತ್ತಾರೆ. ಸಂವಿಧಾನದ ಆರ್ಟಿಕಲ್ 21ರಲ್ಲಿ ಬದುಕುವ ಸ್ವಾತಂತ್ರ್ಯದ ಹಕ್ಕು ನೀಡಲಾಗಿದೆ. ಅದರ ಪ್ರಕಾರ ಕಾನೂನಿನಲ್ಲಿ ನಿಷೇಧವಾಗಿರುವ ಆಹಾರ ಹೊರತಾಗಿ ಉಳಿದ ಯಾವುದೇ ಆಹಾರವನ್ನು ಸೇವಿಸುವ ಅಧಿಕಾರವನ್ನು ನೀಡಲಾಗಿದೆ. ದೇಶದಲ್ಲಿ ಅಗೋರಿಗಳು, ನಾಗಸಾಧುಗಳು, ಋಷಿಮುನಿಗಳ ಆಹಾರ ಪದ್ಧತಿ ಬೇರೆ ಇದೆ. ಸಂವಿಧಾನದಲ್ಲಿ ಇರುವ ಅವಕಾಶ ಬಳಸಿಕೊಳ್ಳು ಸಾಧ್ಯವಿಲ್ಲ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯ ಆಧುನಿಕ ರಾಮಭಕ್ತರು ಎಷ್ಟು ಜನನನ ರಾಮಾಯಣ ಓದಿದ್ದಾರೆ. ರಾಮಾಯಣದಲ್ಲಿ ರಾಮ, ಲಕ್ಷ್ಮಣ, ಸೀತಿ ಅರಣ್ಯಕ್ಕೆ ಹೋದಾಗ ಗಂಗಾ ನದಿ ದಾಟುವಾಗ ಸೀತೆಯು ಗಂಗಾ ಮಾತೆಗೆ ಒಂದು ಮಾತು ಹೇಳುತ್ತಾಳೆ. ತಾಯಿ ನೀನು 14 ವರ್ಷ ನಮ್ಮನ್ನು ರಕ್ಷಣೆ ನೀಡು ನಾವು ಹಿಂತಿರುಗಿದ ನಂತರ ನಿಮಗೆ ತೃಪ್ತಿಯಾಗುವಷ್ಟು ಮಾಂಸ ಹಾಗೂ ಮದ್ಯದ ನೇವೇದ್ಯ ನೀಡುತ್ತೇನೆ ಎಂದು ಹೇಳುತ್ತಾಳೆ. ಭಾರಧ್ವಜರ ಆಶ್ರಮಕ್ಕೆ ಹೋದಾಗ ಮಹರ್ಷಿ ಭಾರಧ್ವಜರು ಶ್ರೀರಾಮನಿಗೆ ಹೇಳುತ್ತಾರೆ, ನೀನು ಕ್ಷತ್ರೀಯ. ನೀನು, ಲಕ್ಷ್ಮಣ ಹಾಗೂ ನಿನ್ನ ಮಡದಿ ಸೀತೆ ಮಾಂಸಾಹಾರಿಯಾಗಿದ್ದು, ನಿಮಗೆ ಮಾಂಸಾಹಾರ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಶಿವನಿಗೆ ಬೇಡರ ಕಣ್ಣಪ್ಪ ಮಾಂಸದ ನೇವೇದ್ಯ ನೀಡುತ್ತಾರೆ. ತಿರುಪತಿ ತಿಮ್ಮಪ್ಪನ ಒಕ್ಕಲಿನವರು ಶ್ರಾವಣ ಶನಿವಾರದಲ್ಲಿ ಮಾಂಸದ ನೇವೇದ್ಯ ನೀಡುತ್ತಾರೆ. ತುಮಕೂರಿನ ಲಕ್ಷ್ಮಿ ನರಸಿಂಹ ದೇವರಿಗೆ ಮಾಂಸದ ನೇವೇದ್ಯ ನೀಡುತ್ತಾರೆ.

ಆದರೂ ಜನರ ಭಾವನೆ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ದೇಶದಲ್ಲಿ ಈಗ ನಾಗಪುರದ ಚಿತ್ಪವಾನ್ ಬ್ರಾಹ್ಮಿನ್ ಮತ್ತು ಇತರರ ವಿಚಾರಧಾರೆ ನಡುವೆ ಸಂಘರ್ಷ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರು ಮೀನು, ಏಡಿ, ಸಿಗಡಿ ಸೇರಿದಂತೆ ಸಮುದ್ರದ ಆಹಾರ ಸ್ವೀಕರಿಸುತ್ತಿರಲಿಲ್ಲವೇ? ಅವರು ಹಿಂದೂಗಳಲ್ಲವೇ? ದೇವರಿಗೆ ಹೃದಯದಲ್ಲಿ ಭಕ್ತಿ ಇರಬೇಕು ಎಂದು ಹೇಳಿದರು.

ಮಾಂಸಾಹಾರಿಗಳನ್ನು ದ್ವೇಷಿಸುವವರು ಇಂದು ವಂಚನೆಯಲ್ಲಿ ಪೂಜೆ ಮಾಡುತ್ತಿದ್ದಾರೆಯೇ ಹೊರತು ನಿಜವಾದ ಭಕ್ತಿಯಿಂದ ಅಲ್ಲ. ಬಿಜೆಪಿ ಹಾಗೂ ಆರ್ ಎಸ್ಎಸ್ ನವರಿಗೆ ಧಮ್ಮು ತಾಕತ್ತು ಇದ್ದರೆ, ಮೊಟ್ಟೆ, ಮಾಂಸ, ಮೀನು ತಿನ್ನುವವರ ಮತ ಬೇಕಿಲ್ಲ, ಇವರು ನಮ್ಮ ಶಾಖೆಗೆ ಬರುವುದು ಬೇಡ ಎಂದು ಘೋಷಿಸಲಿ. ನೀವು ನಿಮ್ಮ ಜವಾಬ್ದಾರಿ ನಿರ್ವಹಣೆ ವೈಫಲ್ಯ ಅನುಭವಿಸಿರುವಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿದಾಗ ಅವರಿಗೆ ಮಾಹಿತಿ ನೀಡಿ ಇದಕ್ಕೆ ಇಂತಹ ಪರಿಹಾರ ರೂಪಿಸಿದ್ದು, ನಿಮ್ಮ ಸಲಹೆ ಇದ್ದರೆ ನೀಡಿ ಎಂದು ಕೇಳುವ ಬದಲು ಇಂತಹ ವಿಚಾರಗಳನ್ನು ಜನರ ಮುಂದೆ ಇಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಮಾಂಸಾಹಾರಿಗಳು ಅತ್ಯಂತ ಸ್ವಾಭಿಮಾನಿಗಳು, ದೈವ ಭಕ್ತರು. ಮಾಂಸ ತಿಂದ ಮಾತ್ರಕ್ಕೆ ಭಕ್ತಿ ಕಡಿಮೆ ಆಗುವುದಿಲ್ಲ. ಬೇಡರ ಕಣ್ಣಪ್ಪ ಆಗತಾನೆ ಮೊಲ ಬೇಟೆಯಾಡಿ ಶಿವನಿಗೆ ಅದರ ಮಾಂಸದ ನೇವೇದ್ಯ ಮಾಡುತ್ತಾರೆ. ಮಾಹಿತಿ, ವೈಚಾರಿಕತೆ ತಿಳಿದುಕೊಳ್ಳದೆ ಸಮಾಜವನ್ನು ಒಡೆದು ಆಳುವ ಪ್ರಯತ್ನವನ್ನು ಪ್ರಬುದ್ಧ ಜನರು ಗಮನಿಸಲಿದ್ದಾರೆ. ಇಂತಹ ಅವಕಾಶವಾದಿ ಹೇಳಿಕೆ ನೀಡುವ, ಆಹಾರ, ಬಟ್ಟೆ, ಆಚಾರ ವಿಚಾರವಾಗಿ ಸಮಾಜ ಒಡೆಯುವ ಬಿಜೆಪಿಯವರಿಗೆ ರಾಜ್ಯ ಹಾಗೂ ದೇಶದಲ್ಲಿ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Join Whatsapp
Exit mobile version