►ಇತಿಹಾಸದಲ್ಲಿ ಮುಖ ಹುದುಗಿಸಿ ವರ್ತಮಾನಕ್ಕೆ ಕುರುಡಾಗುವುದು ಬೇಡ, ಜಾಗೃತರಾಗೋಣ
ನಾ ದಿವಾಕರ
ಜನವರಿ 30 2023ಕ್ಕೆ ಭಾರತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಇಲ್ಲದ 75 ವಸಂತಗಳನ್ನು ಪೂರೈಸಲಿದೆ. ಹಂತಕನ ಗುಂಡಿಗೆ ಬಲಿಯಾದ ಬಾಪು ತಮ್ಮ ಅಂತಿಮ ವಿದಾಯ ಹೇಳಿದ ದಿನವನ್ನು ಹುತಾತ್ಮದಿನ ಎಂದು ಇಡೀ ದೇಶವೇ ಆಚರಿಸುತ್ತದೆ. ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ವಸಾಹತು ಆಳ್ವಿಕೆಯ ದಬ್ಬಾಳಿಕೆಗೆ ನಲುಗಿ ಭಾರತ ಹಲವು ಹುತಾತ್ಮರನ್ನು ಕಂಡಿದ್ದರೂ, ಸ್ವತಂತ್ರ ಭಾರತದ ಪ್ರಪ್ರಥಮ ಹುತಾತ್ಮರಾಗಿ ಗಾಂಧಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈ 75 ವರ್ಷಗಳಲ್ಲಿ ಬಾಪು ಜಂಗಮ ರೂಪದಲ್ಲಿರುವುದಕ್ಕಿಂತಲೂ ಸ್ಥಾವರ ರೂಪದಲ್ಲಿ ಉಳಿದಿರುವುದನ್ನೇ ಹೆಚ್ಚಾಗಿ ಕಾಣಬಹುದು. ಬಹುಶಃ ಭಾರತದಲ್ಲಿ ಗಾಂಧಿ ಪ್ರತಿಮೆ ಇಲ್ಲದ ಸಣ್ಣ ಪಟ್ಟಣವನ್ನೂ ಊಹಿಸಿಕೊಳ್ಳಲಾಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ 70ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧಿ ಸ್ಥಾವರ ರೂಪದಲ್ಲಿ ಸ್ಥಾಪನೆಯಾಗಿದ್ದಾರೆ.
ವರ್ತಮಾನದ ರಾಜಕೀಯ ಬೆಳವಣಿಗೆಗಳು ಮತ್ತು ಭಾರತ ಹಾದು ಹೋಗುತ್ತಿರುವ ವಿಭಿನ್ನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆ ಹೆಚ್ಚಿನ ಮಟ್ಟಿಗೆ ಸಾಂಕೇತಿಕವಾಗಿಯೇ ಉಳಿದಿರುವುದನ್ನೂ ಗಮನಿಸಬಹುದು. ಸ್ಥಾಪಿತ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸುವ ವಿಕೃತಿ ಹಲವು ದಶಕಗಳಿಂದಲೇ ಚಾಲ್ತಿಯಾಗಿದ್ದು, ಇದೀಗ ಶಿಲ್ಪಕಲೆಯ ಹಂತಕ್ಕೂ ತಲುಪಿರುವುದು, ಬದಲಾದ ಸನ್ನಿವೇಶಗಳ ಸಂಕೇತವೇ ಆಗಿದೆ. ಪ್ರತಿಮೆಯ ರೂಪದಲ್ಲಿ ಗಾಂಧಿ ಹೇಗಿರಬೇಕು ಎನ್ನುವ ಸ್ಪಷ್ಟ ತಿಳುವಳಿಕೆ ಇರುವ ಭಾರತೀಯ ಸಮಾಜದಲ್ಲಿ, ತಾತ್ವಿಕ ನೆಲೆಯಲ್ಲಿ, ಸೈದ್ಧಾಂತಿಕವಾಗಿ ಗಾಂಧಿಯನ್ನು ಹೇಗೆ ಸ್ಥಾಪಿಸುವುದು ಎಂಬ ಪ್ರಶ್ನೆ ಸದಾ ಸಂಕೀರ್ಣವಾಗಿಯೇ ಇದೆ.
ಮಹಾತ್ಮ ಗಾಂಧಿಯನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ಪ್ರಶ್ನೆ. ಗಾಂಧಿಯ ವ್ಯಕ್ತಿತ್ವ, ತತ್ವ, ಸಿದ್ಧಾಂತ, ಅನುಸರಿಸಿದ ರಾಜಕೀಯ ಮಾರ್ಗ, ಅವರ ಆರ್ಥಿಕ ಚಿಂತನೆಗಳು, ಸಾಮಾಜಿಕ-ಸಾಂಸ್ಕೃತಿಕ ನಿಲುಮೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಮುಂಚೂಣಿ ಪಾತ್ರ ಇವೆಲ್ಲವೂ ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿಚಾರ. ಇಂದಿಗೂ ಸಹ ಯಾವುದೇ ಸ್ವಾತಂತ್ರ್ಯಪೂರ್ವ ನಾಯಕರ ಬಗ್ಗೆ ಚರ್ಚಿಸುವಾಗಲೂ ಬೌದ್ಧಿಕ ಪರಾಮರ್ಶೆಯ ತಕ್ಕಡಿಯಲ್ಲಿ ಮಹಾತ್ಮ ಗಾಂಧಿಯನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ತುಲನಾತ್ಮಕವಾಗಿ ನೋಡಲಾಗುತ್ತದೆ. ಈ ಬೌದ್ಧಿಕ ಪ್ರವೃತ್ತಿಯನ್ನು ನಿರಾಕರಿಸುವ ಅವಶ್ಯಕತೆಯೂ ಇಲ್ಲ. ಏಕೆಂದರೆ ಸ್ವಾತಂತ್ರ್ಯ ಪೂರ್ವ ಭಾರತದ ಇತರ ಯಾವುದೇ ಮಹಾನ್ ನಾಯಕರಂತೆ ಗಾಂಧಿ ಸಹ ಪ್ರಶ್ನಾತೀತರಾಗುವುದಿಲ್ಲ. ಪ್ರಮಾದಗಳಿಂದ ಹೊರತಾದವರೂ ಅಲ್ಲ. ಆದರೆ ಪ್ರತಿಮೆಯ ರೂಪದಲ್ಲಿರುವ ಗಾಂಧಿಯನ್ನೂ ವಿರೂಪಗೊಳಿಸುವ ವಿಕೃತ ಸಂಸ್ಕೃತಿಗೆ ಭಾರತ ಬಲಿಯಾಗಿರುವುದು ವರ್ತಮಾನದ ದುರಂತ.
ತಾತ್ವಿಕವಾಗಿ, ಸೈದ್ಧಾಂತಿಕ ನೆಲೆಯಲ್ಲಿ ಇಂದು ಭಾರತದಲ್ಲಿ ಚಾಲ್ತಿಯಲ್ಲಿರುವ ಅಂಬೇಡ್ಕರ್’ವಾದ, ಮಾರ್ಕ್ಸ್’ವಾದ, ಲೋಹಿಯಾವಾದ, ಹಿಂದುತ್ವವಾದ ಇವುಗಳ ನಡುವೆಯೇ ಗಾಂಧಿ ಪ್ರಣೀತ ಸೈದ್ಧಾಂತಿಕ ಸೂಕ್ಷ್ಮಗಳೂ ಪ್ರವಹಿಸುತ್ತಲೇ ಇರುತ್ತವೆ. ಈ ಎಲ್ಲ ವಾದಗಳ ಚೌಕಟ್ಟಿನಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದರೂ, ಗಾಂಧೀಜಿಯ ಚಿಂತನೆಗಳು ಪರ ಅಥವಾ ವಿರೋಧದ ನೆಲೆಯಲ್ಲಿ ಮುನ್ನೆಲೆಗೆ ಬರುತ್ತವೆ. ಗಾಂಧಿ ಪ್ರಣೀತ ಧರ್ಮದರ್ಶಿತ್ವ ತತ್ವವಾಗಲೀ, ಗಾಂಧಿ ಪ್ರತಿಪಾದಿಸಿದ ಗ್ರಾಮೀಣ ಆರ್ಥಿಕತೆಯಾಗಲೀ ನವ ಉದಾರವಾದದ ಸಂದರ್ಭದಲ್ಲಿ ಅಪ್ರಸ್ತುತ ಎನ್ನಿಸುವಷ್ಟು ಮಟ್ಟಿಗೆ ಹಿಂದೆ ಸರಿದಿವೆ. ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವುದೆಂದರೆ, ಗ್ರಾಮೀಣ ಕೃಷಿಯನ್ನು ಕಾರ್ಪೋರೇಟಿಕರಣಗೊಳಿಸಿ, ಗ್ರಾಮ ಜೀವನವನ್ನು ನಗರ ಜೀವನದಂತೆ ಆಧುನಿಕೀರಣಗೊಳಿಸಿ, ಗ್ರಾಮೀಣ ಮಟ್ಟದ ಉತ್ಪಾದಕೀಯ ಶಕ್ತಿಗಳನ್ನು ಬಂಡವಾಳಶಾಹಿ ವ್ಯವಸ್ಥೆಯ ಕಚ್ಚಾವಸ್ತುವನ್ನಾಗಿ ಮಾಡುವ ಒಂದು ಹಂತದಲ್ಲಿ ಭಾರತ ಮುನ್ನಡೆಯುತ್ತಿದೆ.
ಆಡಳಿತ ಪರಿಭಾಷೆಯಲ್ಲಿ ಇದನ್ನು ಕಾಲದ ಅವಶ್ಯಕತೆ ಎಂದೇ ಪರಿಭಾವಿಸಿದರೂ, ಭಾರತದ ಗ್ರಾಮಗಳು ನಗರ ಜೀವನದ ಐಷಾರಾಮಿ ಬದುಕನ್ನು ಮತ್ತು ಔದ್ಯಮಿಕ ಜಗತ್ತನ್ನು ಪೋಷಿಸುವ ಸಂಪನ್ಮೂಲ ನೆಲೆಗಳಾಗಿ ಪರಿಣಮಿಸುತ್ತಿರುವುದನ್ನು ಅಭಿವೃದ್ಧಿ ಪಥದ ಪ್ರತಿಯೊಂದು ಮಗ್ಗುಲಲ್ಲೂ ಗುರುತಿಸಬಹುದು. ಈ ಪರಿಸ್ಥಿತಿಯಲ್ಲಿ ಗಾಂಧಿ ಎಲ್ಲಿ ನಿಲ್ಲುತ್ತಾರೆ ಎಂಬ ಪ್ರಶ್ನೆ ಎದುರಾದಾಗ ಮತ್ತೊಮ್ಮೆ ಹಾರ ತುರಾಯಿಗಳೊಡನೆ ಅವರ ಪ್ರತಿಮೆಯತ್ತ ಧಾವಿಸಬೇಕಾಗುತ್ತದೆ. ಮತ್ತೊಂದೆಡೆ ತಮ್ಮದೇ ಆದ ತಾತ್ವಿಕ ನಿಲುವುಗಳನ್ನು ಕೊನೆಯುಸಿರು ಇರುವವರೆಗೂ ಪ್ರತಿಪಾದಿಸಿ, ದ್ವೇಷ ರಾಜಕಾರಣಕ್ಕೆ ತುತ್ತಾದ ಗಾಂಧಿ ಮಾರ್ಕ್ಸ್, ಅಂಬೇಡ್ಕರ್ ಅಥವಾ ಹಿಂದುತ್ವವಾದದ ನೆಲೆಗಳಲ್ಲಿ ಭಿನ್ನವಾಗಿಯೇ ನಿಲ್ಲುತ್ತಾರಾದರೂ, ಬಾಪುವಿನ ಜೀವನದಲ್ಲಿ ದ್ವೇಷದ ಸೂಕ್ಷ್ಮ ಎಳೆಯನ್ನೂ ಶೋಧಿಸಲಾಗುವುದಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ಭಿನ್ನಾಭಿಪ್ರಾಯ ಅಥವಾ ಸೈದ್ಧಾಂತಿಕ ವಿರೋಧವನ್ನು ದ್ವೇಷದ ನೆಲೆಯಲ್ಲಿ ಪರಿಭಾವಿಸುವ ವರ್ತಮಾನದ ವಾತಾವರಣದಲ್ಲಿ ಗಾಂಧಿ ಈ ಕಾರಣಕ್ಕಾಗಿಯೇ ಭಿನ್ನವಾಗಿ ಕಾಣುತ್ತಾರೆ.
ಹುತಾತ್ಮರಾದ 75 ವರ್ಷಗಳ ನಂತರವೂ ಗಾಂಧಿ ಇಂದಿನ ಭಾರತಕ್ಕೆ ಪ್ರಸ್ತುತವೋ ಇಲ್ಲವೋ ಎಂಬ ಜಿಜ್ಞಾಸೆಯೊಂದಿಗೇ ದೇಶ ಹುತಾತ್ಮ ದಿನಾಚರಣೆಯನ್ನೂ ಆಚರಿಸುತ್ತಿದೆ. ಸ್ವಚ್ಚ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಒಂದು ರೂಪಕವಾಗಿ ಗಾಂಧಿ ನಮ್ಮ ನಡುವೆ ಜೀವಂತವಾಗಿದ್ದಾರೆ. ಭೌತಿಕ ಅಥವಾ ಲೌಕಿಕ ಸ್ವಚ್ಚತೆಯಿಂದಾಚೆಗೆ ನೋಡಿದಾಗ, ಬೌದ್ಧಿಕವಾಗಿ ಮಲಿನವಾಗಿರುವ ವರ್ತಮಾನದ ಚಿಂತನೆಗಳು, ಆಲೋಚನಾ ಮಾರ್ಗಗಳು ಮತ್ತು ತಾತ್ವಿಕ ನೆಲೆಗಳು ಗಾಂಧಿಯ ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳಿಗೆ ನಿಲುಕುವಂತಿವೆಯೇ ಎನ್ನುವುದೂ ಮುಖ್ಯವಾಗುತ್ತದೆ. ದ್ವೇಷಾಸೂಯೆಗಳಿಲ್ಲದ, ವ್ಯಕ್ತಿಗತ ಮತ್ಸರವಿಲ್ಲದ, ಹಿಂಸೆಗೆ ಅವಕಾಶವಿಲ್ಲದ, ಎಲ್ಲರನ್ನೂ ಒಳಗೊಳ್ಳುವಂತಹ ಶಾಂತಿ-ಅಹಿಂಸೆ ಮತ್ತು ಸಹಿಷ್ಣುತೆಯ ಮಾರ್ಗವನ್ನೇ ಉಸಿರಾಡಿ ಕೊನೆಯುಸಿರೆಳೆದ ಗಾಂಧಿ ನಮ್ಮ ನಡುವೆ ಇರುವುದೇ ಆದರೆ, ನಾವು ವಿರೋಧ ಮತ್ತು ದ್ವೇಷದ ನಡುವೆ ಇರುವ ಅಪಾರ ಅಂತರವನ್ನೂ, ಎರಡರ ನಡುವಿನ ಸೂಕ್ಷ್ಮ ಎಳೆಗಳನ್ನೂ ಅರ್ಥಮಾಡಿಕೊಳ್ಳುವುದು ಅತ್ಯವಶ್ಯ.
ಇತಿಹಾಸವನ್ನು ಬಗೆದು ಚಾರಿತ್ರಿಕ ವ್ಯಕ್ತಿ, ವ್ಯಕ್ತಿತ್ವ ಮತ್ತು ಘಟನೆಗಳನ್ನು ಹೆಕ್ಕಿ ತೆಗೆದು, ವರ್ತಮಾನದ ಸ್ವ-ರೂಪಿತ ಚೌಕಟ್ಟುಗಳೊಳಗಿಟ್ಟು ತುಲನಾತ್ಮಕವಾಗಿ ನೋಡುವ ಒಂದು ಪರಂಪರೆಯನ್ನು ಆಧುನಿಕ ಭಾರತ ರೂಢಿಸಿಕೊಂಡಿದ್ದು ಇದು ಟಿಪ್ಪು ಸುಲ್ತಾನನಿಂದ ಗಾಂಧಿಯವರೆಗೂ ವ್ಯಾಪಿಸಿದೆ. ಈ ಚರಿತ್ರೆಯ ಶೋಧ ಮತ್ತು ಪರಿಶೋಧದ ನಡುವೆಯೇ ಕಂಡುಬರಬಹುದಾದ ತಾತ್ವಿಕ ಭಿನ್ನ ನೆಲೆಗಳು, ಸೈದ್ಧಾಂತಿಕ ವೈರುಧ್ಯ ಮತ್ತು ವಿರೋಧಾಭಾಸಗಳು ಹಾಗೂ ಅಂದಿನ ಕಾಲಘಟ್ಟದ ಅನಿವಾರ್ಯತೆಗಳು ಈ ಹೊತ್ತಿನ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ವಾತಾವರಣದೊಡನೆ ಮುಖಾಮುಖಿಯಾಗುತ್ತಾ, ಪರ-ವಿರೋಧದ ನೆಲೆಗಳಲ್ಲಿ ಚರ್ಚೆಗೊಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಂಕಥನಗಳ ಸಿಕ್ಕುಗಳಲ್ಲಿ ಗಾಂಧಿ ಸಹ ಸಿಲುಕಿದ್ದಾರೆ. ಸಮಾಜ ಬದಲಾಗುತ್ತಾ, ಮುಂದುವರೆಯುತ್ತಾ ಬೌದ್ಧಿಕ ನೆಲೆಯಲ್ಲಿ ಜ್ಞಾನ ವಿಸ್ತಾರದ ಹಲವು ಕವಲುಗಳನ್ನು ಕಂಡುಕೊಳ್ಳುತ್ತಿರುವಾಗ ಈ ರೀತಿಯ ಮುಖಾಮುಖಿ, ಅನುಸಂಧಾನ ನಡೆಯುವುದು ಸಹಜ, ಸ್ವಾಭಾವಿಕ.
ಆದಾಗ್ಯೂ ಭಾರತ ಸಾಗುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ದೇಶದ ಸಂವಿಧಾನವು ಬಯಸುವಂತಹ ಸಾಮಾಜಿಕಾರ್ಥಿಕ ಸಮಾನತೆಯ, ಸಮನ್ವಯದ, ಸಹಬಾಳ್ವೆಯ, ಭ್ರಾತೃತ್ವದ, ಸೌಹಾರ್ದತೆಯ, ಸಹಿಷ್ಣುತೆಯ ಸಮಾಜವನ್ನು ಕಟ್ಟಬೇಕಾದಲ್ಲಿ, ಡಾ ಬಿ ಆರ್ ಅಂಬೇಡ್ಕರ್ ಅವರೊಂದಿಗೇ ಗಾಂಧಿ ಸಹ ಅವಶ್ಯವಾಗಿ ಬೇಕಾಗುತ್ತಾರೆ. ಸೌಹಾರ್ದ ಸಮಾಜದ ಅತ್ಯಾಧುನಿಕ ಪರಿಕಲ್ಪನೆಯಲ್ಲೂ ಸಹ ಗಾಂಧಿಯನ್ನು ಹೊರಗಿಟ್ಟು ನೋಡಲಾಗುವುದಿಲ್ಲ ಎನ್ನುವುದಕ್ಕೆ, ದೇಶಾದ್ಯಂತ ಜನವರಿ 30ರಂದು ಆಚರಿಸಲಾಗುತ್ತಿರುವ ಹುತಾತ್ಮ ದಿನವೇ ಸಾಕ್ಷಿ. ತಾತ್ವಿಕವಾಗಿ, ಸೈದ್ಧಾಂತಿಕ ನೆಲೆಯಲ್ಲಿ ಗಾಂಧಿ ತತ್ವಗಳನ್ನು, ಗಾಂಧಿಯ ಹೆಜ್ಜೆಗಳನ್ನು ಮತ್ತು ಗಾಂಧಿ ತುಳಿದ ಹಾದಿಯನ್ನು ಒಪ್ಪದಿರುವ ಸಿದ್ಧಾಂತಿಗಳೂ ಸಹ ಹುತಾತ್ಮ ದಿನವನ್ನು ಸೌಹಾರ್ದತೆಯ ನೆಲೆಯಲ್ಲಿ ಆಚರಿಸುವ ಮೂಲಕ, ಗಾಂಧಿಗೆ ತಾತ್ವಿಕ ಮರುಜೀವ ಕೊಡುತ್ತಾರೆ.
ಇದಕ್ಕೆ ಕಾರಣ, ಗಾಂಧಿಯಲ್ಲಿ ದ್ವೇಷ ಕಾಣಲಾಗುವುದಿಲ್ಲ. ವಿರೋಧಗಳು ಕಾಣುತ್ತವೆ, ವಿರೋಧಾಭಾಸಗಳು ಢಾಳಾಗಿ ಕಂಡುಬರುತ್ತವೆ. ವೈರುಧ್ಯಗಳು ಅಗಾಧವಾಗಿ ಗೋಚರಿಸುತ್ತವೆ. ಆದರೆ ಎಲ್ಲಿಯೂ, ಯಾರ ಬಗ್ಗೆಯೂ ದ್ವೇಷ ಮತ್ತು ಅಸೂಯೆಯನ್ನು ಕಾಣಲಾಗುವುದಿಲ್ಲ. ವರ್ತಮಾನದ ಸಮಾಜಕ್ಕೆ ಈ ಸಾತ್ವಿಕ ಗುಣದ ಅವಶ್ಯಕತೆ ಹೆಚ್ಚಾಗಿದೆ. ಮನುಷ್ಯ ಮನುಷ್ಯನ ನಡುವೆ ಗೋಡೆಗಳನ್ನು ಎತ್ತರಿಸಲು ಜಾತಿ, ಧರ್ಮ, ಭಾಷೆ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ಕವಚಗಳಂತೆ ಬಳಸಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಸಂವಿಧಾನಬದ್ಧತೆಯಿಂದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಬೇಕಾದ ರಾಜಕೀಯ ಕ್ಷೇತ್ರವೂ ಬಂಡವಾಳ, ಮಾರುಕಟ್ಟೆ ಮತ್ತು ಅಸ್ಮಿತೆಗಳಿಗೆ ಬಲಿಯಾಗುತ್ತಿರುವಾಗ, ಗಾಂಧಿ ಸಮಸ್ತ ದೇಶವನ್ನು ಮತ್ತು ದೇಶದ ಕಟ್ಟಕಡೆಯ ಮನುಷ್ಯನನ್ನೂ ಪ್ರತಿನಿಧಿಸುವ ಶಾಂತಿಧೂತನಾಗಿ ಕಂಡರೆ ಅಚ್ಚರಿ ಪಡಬೇಕಿಲ್ಲ. ಮನುಜ ಸಮಾಜವನ್ನು ಬಂಧಿಸುವ ಶಾಂತಿ, ಸಹನೆ ಮತ್ತು ಮಾನವತೆಯ ಸೂಕ್ಷ್ಮ ಎಳೆಗಳು ಅಲ್ಲಲ್ಲಿ ತುಂಡರಿಸಿಹೋಗುತ್ತಿರುವ ಈ ಸಂದರ್ಭದಲ್ಲಿ, ಭಾವನಾತ್ಮಕವಾಗಿಯಾದರೂ ಈ ಎಳೆಗಳನ್ನು ಬೆಸೆದು ಗಟ್ಟಿಯಾಗಿಸುವ ಒಂದು ಸಾತ್ವಿಕ ಶಕ್ತಿಯಾಗಿ ಗಾಂಧಿ ಕಂಡುಬರುತ್ತಾರೆ.
ವರ್ತಮಾನದ ರಾಜಕೀಯ ಬಿಕ್ಕಟ್ಟುಗಳಿಗೆ, ಆರ್ಥಿಕ ಸವಾಲುಗಳಿಗೆ, ಸಾಮಾಜಿಕ ಸಿಕ್ಕುಗಳಿಗೆ, ಸಾಂಸ್ಕೃತಿಕ ಜಿಜ್ಞಾಸೆಗಳಿಗೆ ಮಹಾತ್ಮ ಗಾಂಧಿ ಎಷ್ಟರ ಮಟ್ಟಿಗೆ ಪರಿಹಾರದ ಸೂತ್ರಗಳನ್ನು ಒದಗಿಸಬಲ್ಲರು ಎಂಬ ಪ್ರಶ್ನೆ ಬಹಳ ವಿಶಾಲವಾದದ್ದು. ಈ ಎಲ್ಲ ನೆಲೆಗಳಲ್ಲೂ ಅವರ ಚಿಂತನೆಗಳು ಈ ಹೊತ್ತಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಪ್ತಸ್ತುತವೋ ಅಥವಾ ಅಪ್ರಾಸಂಗಿಕವೋ ಆಗಿ ಕಾಣಲು ಸಾಧ್ಯ. ಸೈದ್ಧಾಂತಿಕ ನೆಲೆಯಲ್ಲಿ ಅನಗತ್ಯ ಎನಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಗಾಂಧಿ ತಮ್ಮ ಚಿಂತನೆಗಳನ್ನು ರೂಢಿಸಿಕೊಂಡ ಕಾಲದಲ್ಲೂ ಸುತ್ತಲಿನ ಎಲ್ಲ ವ್ಯತ್ಯಯಗಳತ್ತ ಗಮನಹರಿಸಿದ್ದಾರೆ ಎಂದು ಹೇಳಲಾಗುವುದಿಲ್ಲ. ಅವರ ಬರಹಗಳಲ್ಲಿ ರಷ್ಯಾದ ಕ್ರಾಂತಿ, ಭಾರತದಲ್ಲೇ ನಡೆದ ತೆಲಂಗಾಣ ಸಶಸ್ತ್ರ ಹೋರಾಟ, ಚೀನಾದಲ್ಲಿ ಉಲ್ಬಣಿಸುತ್ತಿದ್ದ ಕ್ರಾಂತಿಕಾರಕ ಉತ್ಕರ್ಷ ಇವಾವುದೂ ಪ್ರತಿಫಲನವಾಗುವುದನ್ನು ಕಾಣಲಾಗುವುದಿಲ್ಲ.
ಹಾಗಾಗಿ 21ನೆಯ ಶತಮಾನದ ಮಾನವ ಜಗತ್ತು ಎದುರಿಸುತ್ತಿರುವ ಜಟಿಲ ಸಮಸ್ಯೆಗಳಿಗೆ ಮತ್ತು ಭಾರತದಲ್ಲಿ ತಳಮಟ್ಟದ ಶೋಷಿತ ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಹಾಗೂ ಸಂಕೀರ್ಣ ಸವಾಲುಗಳಿಗೆ ಹುತಾತ್ಮನ ಪುಟಗಳಲ್ಲಿ ಉತ್ತರ ದೊರೆಯದಿರಬಹುದು. ದೊರೆತರೂ ಅಂತಹ ಉತ್ತರಗಳು ಪ್ರಸ್ತುತ ಸಂದರ್ಭಕ್ಕೆ ಅನಪೇಕ್ಷಿತ ಅಥವಾ ಅನಗತ್ಯವಾಗಿ ತೋರಬಹುದು. ಈ ಒಂದು ತಾತ್ವಿಕ ಕಾರಣಕ್ಕಾಗಿ, ಏಳು ದಶಕಗಳ ಹಿಂದಿನ ಭಿನ್ನ ತಾತ್ವಿಕ ನೆಲೆಗಳನ್ನಾಧರಿಸಿ, ಇಂದು ಗಾಂಧಿಯನ್ನು ನಿರಾಕರಿಸುವುದು ನಮ್ಮೊಳಗಿನ ಚಾರಿತ್ರಿಕ ಪ್ರಜ್ಞೆಯ ಕೊರತೆಯನ್ನಷ್ಟೇ ತೋರಲು ಸಾಧ್ಯ. ಮಹಾತ್ಮ ಗಾಂಧಿಯ ಪ್ರಸ್ತುತತೆಯನ್ನು ಕುರಿತು ಚರ್ಚಿಸುವ ಪ್ರತಿಯೊಂದು ಸಂದರ್ಭದಲ್ಲೂ ನಮಗೆ ಕಾಣಬೇಕಿರುವುದು ಅವರ ಕಾಲಘಟ್ಟದ ಜಾಗತಿಕ ಸಂದರ್ಭ ಮತ್ತು ಭಾರತದ ಆಂತರಿಕ ಸಾಮಾಜಿಕ ಸನ್ನಿವೇಶಗಳು. ಅಲ್ಲಿ ಕಾಣುವ ಪ್ರಮಾದಗಳಾಗಲೀ ತಪ್ಪು ಹೆಜ್ಜೆಗಳಾಗಲೀ, ಅವರ ವ್ಯಕ್ತಿತ್ವದ ನಿರಾಕರಣೆಯಲ್ಲಿ ಕೊನೆಯಾಗಬೇಕಿಲ್ಲ.
ಭಾರತೀಯ ಸಮಾಜದ ಆಂತರ್ಯದಲ್ಲಿ ಈ ಸುಪ್ತ ಪ್ರಜ್ಞೆ ಇರುವುದರಿಂದಲೇ, ಯಾವುದೋ ಒಂದು ಕೋನದಲ್ಲಿ ಗಾಂಧಿ ನಮ್ಮ ನಡುವೆ ಇದ್ದಾರೆ ಎನಿಸುತ್ತಲೇ ಇರುತ್ತದೆ. ಗಾಂಧಿಯ ಚಿಂತನೆಗಳನ್ನು ಉತ್ತೇಜಿಸಿದ ಸಮಾಜ ಬದಲಾಗಿರುವಂತೆಯೇ ಅವರನ್ನು ಹತ್ಯೆಗೈದ ಚಿಂತನೆಗಳೂ ರೂಪಾಂತರ ಹೊಂದಿವೆ. 1948ರ ಜನವರಿ 30ರಂದು ಮಹಾತ್ಮ ಗಾಂಧಿ ಮನುಜ ದ್ವೇಷದ ಕ್ರೌರ್ಯಕ್ಕೆ ಬಲಿಯಾದಾಗ ಭಾರತದಲ್ಲಿ ಹಣಕಾಸು ಬಂಡವಾಳ ಮತ್ತು ಮಾರುಕಟ್ಟೆಯ ಕೊರತೆ ಇತ್ತು. ಆದರೆ ಸಮಾನತೆ ಮತ್ತು ಶಾಂತಿಯನ್ನು ಸಾರುವ ಸಂಯಮ, ಸಂವೇದನೆ, ಮನುಜ ಸೂಕ್ಷ್ಮತೆಗಳು ವಿಪುಲವಾಗಿದ್ದವು. ಗಾಂಧಿ ಹತ್ಯೆಗೊಳಗಾದ 75 ವರ್ಷಗಳ ನಂತರದ ಭಾರತದಲ್ಲಿ ಕೊಂಚ ಅದಲುಬದಲಾಗಿದೆ. ಇಂದು ಭಾರತಕ್ಕೆ ಹಣಕಾಸು ಬಂಡವಾಳ ಅಥವಾ ಮಾರುಕಟ್ಟೆಯ ಆರ್ಥಿಕ ಕೊರತೆ ಇಲ್ಲ ಆದರೆ ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಸಂವೇದನೆ ಮತ್ತು ಸೂಕ್ಷ್ಮತೆಗಳ ಕೊರತೆ ಅಗಾಧವಾಗಿದೆ.
ಭಾರತದ ಬಹುತ್ವ ಸಂಸ್ಕೃತಿ, ಮಾನವತೆಯ ಸಮಾಜ ಮತ್ತು ಸಾಂವಿಧಾನಿಕ ಆಶಯಗಳನ್ನು ಈಡೇರಿಸಲು ಇವೆಲ್ಲವೂ ಅತ್ಯವಶ್ಯ. ಈ ಕೊರತೆಯನ್ನು ನೀಗಿಸಿಕೊಳ್ಳುವ ಪ್ರತಿ ಹೆಜ್ಜೆಯಲ್ಲೂ ಗಾಂಧಿ ನಮ್ಮೊಡನೆ ಇರಲು ಸಾಧ್ಯ. ಗಾಂಧಿಯೊಡನೆ ತಾತ್ವಿಕ-ಸೈದ್ಧಾಂತಿಕ ಕಲಹ ಹೂಡುತ್ತಲೇ ಅವರನ್ನು ನಮ್ಮ ನಡುವೆ ಇಟ್ಟುಕೊಂಡರೆ ಅಪರಾಧವೇನೂ ಆಗಲಾರದು. ಅಂಬೇಡ್ಕರ್ ಮತ್ತು ಮಾರ್ಕ್ಸ್ ಅವರೊಡನೆ ಅವರೂ ನಮ್ಮ ಹೆಜ್ಜೆಗೆ ತಾತ್ವಿಕ ಹೆಜ್ಜೆ ಹಾಕುತ್ತಲೇ ಇರುತ್ತಾರೆ. ಈ ಸದ್ಭಾವನೆಯೊಂದಿಗೇ ಹುತಾತ್ಮ ದಿನಾಚರಣೆಯನ್ನು ಆಚರಿಸೋಣ ಸೌಹಾರ್ದಯುತ ಮಾನವ ಸಮಾಜದತ್ತ ನಡೆಯೋಣ.