Home ಟಾಪ್ ಸುದ್ದಿಗಳು 50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ...

50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಬೊಮ್ಮಾಯಿ

➤ರಾಜ್ಯದ ಮಸೀದಿಗಳಲ್ಲಿನ ಮೌಲ್ವಿಗಳ ಮಾಹಿತಿಗಳನ್ನು ಬಹಿರಂಗಪಡಿಸುವುದಿಲ್ಲ ಎಂದ ಮುಖ್ಯಮಂತ್ರಿ

ಶಿವಮೊಗ್ಗ: 50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಆರ್ಥಿಕ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಯ ತಾಂತ್ರಿಕ ತಜ್ಞರನ್ನು ಒಳಗೊಂಡಿರುವ  ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಅವರು ಇಂದು ಶಿವಮೊಗ್ಗದ ಬಿ.ಜೆ.ಪಿ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

 ಉನ್ನತ ಮಟ್ಟದ ಸಮಿತಿಯನ್ನು ಕೆಟಿಟಿಪಿ ಕಾಯ್ದೆಯನ್ವಯ ರಚಿಸಲಾಗಿದೆ . ಸಮಿತಿಯು ಕಾಮಗಾರಿಯ ಅಂದಾಜು ಮೊತ್ತ, ಕೆಟಿಟಿಪಿ ಕಾಯ್ದೆಯನ್ವಯ ಟೆಂಡರ್ ನಿಯಮಗಳು ಇವುಗಳನ್ನು ಪರಿಶೀಲಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕು. ಈ ಸಮಿತಿಯು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸರ್ಕಾರದ ಎಲ್ಲ ಇಲಾಖೆಗಳ 50 ಕೋಟಿ ರೂ. ಮೀರಿದ ಟೆಂಡರ್ ಗಳಿಗೂ ಈ ನಿಯಮ ಜಾರಿಯಾಗುತ್ತದೆ. ಟೆಂಡರ್ ಗಳು ಹೆಚ್ಚಾದ ಸಂದರ್ಭದಲ್ಲಿ ಶೀಘ್ರ ಟೆಂಡರ್ ಪರಿಶೀಲನೆಗೆ ಅನುಕೂಲವಾಗುವಂತೆ ಪರ್ಯಾಯ ಸಮಿತಿಯೊಂದನ್ನೂ ರಚಿಸಲಾಗುವುದು ಎಂದರು.

ಮೌಖಿಕ ಆದೇಶದ ಮೇಲೆ ಕಾಮಗಾರಿಗಳು ಮಾಡುವಂತಿಲ್ಲ:

ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಮೌಖಿಕ ಆದೇಶಗಳ ಮೇಲೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಈ ರೀತಿ ನಡೆದರೆ ಸಂಬಂಧಪಟ್ಟ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಎಇಇ,ಶಾಖಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ  ಪಿಡಿಓ ಮತ್ತು ಇಓಗಳು ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾದ ಲಿಖಿತ ಸೂಚನೆ ನೀಡಲಾಗುವುದು ಎಂದರು.

ಸಂತೋಷ್ ಪಾಟೀಲ್ ಪ್ರಕರಣ-ತನಿಖೆ ನಡೆಯುತ್ತಿದೆ :

ಟೆಂಡರ್ ಪ್ರಕ್ರಿಯೆ ಹಾಗೂ  ಪರ್ಸೆಂಟೇಜ್ ರಹಿತ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಂಡಿದೆಯೇ, ಸಂತೋಷ್ ಪಾಟೀಲ್ ಆತ್ಮಹತ್ಯೆ ಒಂದು ಪಾಠವಾಗಿ ಇವೆಲ್ಲಕ್ಕೆ ಒಂದು ತಾತ್ವಿಕ ಅಂತ್ಯ ಕಾಣಬೇಕು ಎಂಬುದಕ್ಕೆ ಪ್ರತಿಕ್ರಯಿಸಿ ಪರ್ಸಂಟೇಜ್ ಅನ್ನುವಂಥದ್ದು ವ್ಯಾಪಕವಾಗಿ ಮಾತನಾಡುವಂತಹ ವಿಚಾರ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಸಂತೋಷ್ ಪಾಟೀಲ್ ಪ್ರಕರಣ ಪ್ರತ್ಯೇಕವಾದುದು. ಇದರಲ್ಲಿ ಕಾರ್ಯಾದೇಶವಿಲ್ಲದೇ ಕೆಲಸ ಮಾಡಿ ಬಿಲ್ ಕ್ಲೇಮು ಮಾಡಿರುವುದು ಆದ್ದರಿಂದ ಈ ಬಗ್ಗೆ ಆರ್ ಡಿ ಪಿಆರ್ ನಿಂದ ಹಿಡಿದು ಪೊಲೀಸ್ ಇಲಾಖೆವರೆಗೆ ತನಿಖೆ ನಡೆಯುತ್ತಿದೆ. ಇವೆರಡೂ ವಿಷಯಗಳಿಗೆ ಹೋಲಿಕೆ ಇಲ್ಲ ಎಂದರು.  

ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು:

ಸಂತೋಷ್ ಪಾಟೀಲ್ ಅವರ 2 ರಿಂದ 3 ಕೋಟಿ ರೂ.ಗಳ ಕಾಮಗಾರಿ ಪ್ರಕರಣವಾಗಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ 50 ಕೋಟಿ ರೂ. ಕ್ಕಿಂತ ಕಡಿಮೆ ಇರುವ ಟೆಂಡರ್ ಗಳೂ ಪರಿಶೀಲನೆಗೆ ಒಳಪಡಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಉನ್ನತ ಮಟ್ಟದ ಸಮಿತಿ ಕಾರ್ಯನಿರ್ವಹಣೆಯನ್ನು ಗಮನಿಸಿ ನಂತರ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸಮಿತಿಯನ್ನು ರಚಿಸಲಾಗುವುದು. ಅಭಿವೃದ್ಧಿ ಕೆಲಸಗಳ ವೇಗವೂ ಕುಂಠಿತವಾಗಬಾರದು ಎಂದರು.

ಮಲೆನಾಡು ಪ್ರದೇಶದಲ್ಲಿ ಭೂಕುಸಿತ ಸಮಸ್ಯೆಗೆ ಪೂರ್ವಭಾವಿ ಕ್ರಮ:

ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತದ ಸಮಸ್ಯೆಯ ಇರುವ ಬಗ್ಗೆ ಪ್ರಶ್ನಿಸಿದಾಗ, ಪಶ್ಚಿಮಘಟ್ಟ  ದುರ್ಬಲವಾದ ವಲಯವಾಗಿದೆ. ಜಿಯೋ ಫಿಸಿಕಲ್ ಸರ್ವೆ ಮಾಡಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಭೂಕುಸಿತ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಈ ವರದಿಯನ್ನು ಪರಿಶೀಲಿಸಿದ ನಂತರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವಿಶೇಷವಾಗಿ ತಳಮಟ್ಟದಲ್ಲಿ ಇರುವ ಮನೆಗಳಿರುವ ಪ್ರದೇಶಗಳಲ್ಲಿ ವಿಶೇಷ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ದುರ್ಬಲ ವಲಯವಿರುವ ನಿಸರ್ಗವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ತ ಪ್ಲಾನಿಂಗ್ ನ ಅವಶ್ಯಕತೆ ಇದೆ ಎಂದರು.

 ಗ್ರಾಮೀಣ ಭಾಗದಲ್ಲಿ ವಿದ್ಯತ್ಛಕ್ತಿ ವಿತರಣೆ :

ಗ್ರಾಮೀಣ ಭಾಗದಲ್ಲಿ ವಿದ್ಯುತ್ಛಕ್ತಿಯ ಸಮಸ್ಯೆ ಹೆಚ್ಚಿದೆ ಎಂಬುದಕ್ಕೆ ಉತ್ತರಿಸಿ, ಕರ್ನಾಟಕದಲ್ಲಿ ವಿದ್ಯುತ್ ಹೇರಳವಾಗಿದೆ. ಆದರೆ ವಿತರಣೆಯ ಸಮಸ್ಯೆಯಿದೆ. ಬಹಳ ವರ್ಷಗಳಿಂದ ಸರ್ಕಾರಗಳು ವಿತರಣಾ ವ್ಯವಸ್ಥೆ , ಟ್ರಾನ್ಸ್ಮಿಷನ್ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ 100 ವಿದ್ಯುತ್ ಸ್ಟೇಷನ್ ಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ಪ್ರಾರಂಭವಾಗಲಿವೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ವಿದ್ಯುತ್ ವಿತರಣೆಯಲ್ಲಿ ಸಮಸ್ಯೆ ಇದೆ.ಇಂತಹ ಪ್ರದೇಶದಲ್ಲಿ  ಸ್ಟೇಷನ್ ಮತ್ತು ಟ್ರಾನ್ಸ್ ಮಿಷನ್  ವ್ಯವಸ್ಥೆಗೆ ಹೆಚ್ಚಿನ ಅನುದಾನವನ್ನು ನೀಡಿ ಕಾಮಗಾರಿಗಳನ್ನು ಪೂರೈಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳಿಂದ ಕೆಲವೆಡೆ ಸ್ಟೇಷನ್ ಸ್ಥಾಪನೆ ವಿಳಂಬವಾಗುತ್ತಿದ್ದು, ಭೂ ಸ್ವಾಧೀನ ಸೇರಿದಂತೆ ಇತರೆ ಸಮಸ್ಯೆಗಳನ್ನು ತಕ್ಷಣ ನಿವಾರಿಸಿ, ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸೌರ ಪಂಪ್ ಗಳ ಸ್ಥಾಪನೆಗೆ ಸಹಾಯಧನ :

ಕೇಂದ್ರ ಸರ್ಕಾರದ ಯೋಜನೆಯಂತೆ ಯಾವೆಲ್ಲಾ ಗ್ರಿಡ್ ಗಳಲ್ಲಿ ಸೌರಶಕ್ತಿಯ ಬಳಕೆ ಮಾಡಬಹುದು ಅಂತಹ ಗ್ರಿಡ್ ಗಳಲ್ಲಿ ಸೌರಶಕ್ತಿಯ ಸರಬರಾಜಿಗೆ  ಅವಕಾಶ ಕಲ್ಪಿಸಿದ್ದಾರೆ. ಸೋಲಾರ್ ಪಂಪ್ ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ವಿಶೇಷ ರಿಯಾಯಿತಿಯನ್ನು ನೀಡಿದ್ದಾರೆ. ಈ ಸೋಲಾರ್ ವ್ಯವಸ್ಥೆಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುವುದು. ಇವೆಲ್ಲಾ ಕ್ರಮಗಳಿಂದ ವಿದ್ಯುತ್ಛಕ್ತಿ ಸಬರಾಜಿನ ಸಮಸ್ಯೆಯನ್ನು ನಿವಾರಿಸಲಾಗುವುದು  ಎಂದರು.

ಜಾತಿಗಣತಿ ವರದಿ:

ಜಾತಿಗಣತಿ ವರದಿ ಇನ್ನೂ ಬಹಿರಂಗವಾಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗಿಲ್ಲ. ಈ ಬಗ್ಗೆ ಹಿಂದುಳಿದ ವರ್ಗದ ಆಯೋಗಕ್ಕೆ ವರದಿ ಮಂಡನೆಗೆ ಸೂಚನೆ ನೀಡಲಾಗಿದೆ.ದೀರ್ಘಕಾಲೀನ ಪರಿಣಾಮಗಳಿರುವಂತಹ ಇಂತಹ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಪುಟ ಪುನರ್ರಚನೆ :

ಸಂಪುಟ ಪುನರಚನೆ ಅಥವಾ ವಿಸ್ತರಣೆ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ಪರಮಾಧಿಕಾರದ ಪ್ರಶ್ನೆ ಅಲ್ಲ. ರಾಜಕಾರಣದಲ್ಲಿ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರು.

ಭದ್ರಾವತಿಯ ವಿಐಎಸ್ ಎಲ್ ಪುನಶ್ಚೇತನ :

ಭದ್ರಾವತಿಯ ವಿಐಎಸ್ ಎಲ್ ಪುನಶ್ಚೇತನ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರದಲ್ಲಿ ಚರ್ಚಿಸಿದಂತೆ, ವಿಐಎಸ್ಎಲ್ ಖಾಸಗೀಕರಣಕ್ಕೆ  ಕ್ರಮ ಕೈಗೊಳ್ಳಲು ತಿಳಿಸಿದ್ದು, ಕಾರ್ಖಾನೆಗೆ ಸೂಕ್ತ ಸ್ಥಳಾವಕಾಶ ಜಾಗವಿಟ್ಟುಕೊಂಡು, ಉಳಿದ ಜಾಗವನ್ನು ಇತರೆ ಕಾರ್ಖಾನೆಗಳ ಸ್ಥಾಪನೆಗೆ ಬಳಸಿಕೊಳ್ಳಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಎನ್ ಪಿ ಎಂ  ಪುನಶ್ಚೇತನವನ್ನು ರಾಜ್ಯಮಟ್ಟದಲ್ಲಿ ಮಾಡಬೇಕಾಗಿದ್ದು, ಟೆಂಡರ್ ಪ್ರಕ್ರಿಯೆಗೆ ಯಾವುದದೇ ರೆಸ್ಪಾನ್ಸ್ ಬಂದಿಲ್ಲ.ಇದರ ಬಗ್ಗೆ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು ತಿಳಿಸಿದರು.

ರಾಜ್ಯದ ಮಸೀದಿಗಳಲ್ಲಿನ ಮೌಲ್ವಿಗಳ ಮಾಹಿತಿಗಳನ್ನು ಬಹಿರಂಗಗೊಳಿಸಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸುತ್ತಿವೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಗುಪ್ತ ದಳ ಹಾಗೂ ಪೊಲೀಸ್ ಇಲಾಖೆಯವರು ಹಲವಾರು ಕ್ರಮಗಳನ್ನು ಈ ಬಗ್ಗೆ ತೆಗೆದುಕೊಳ್ಳುತ್ತಿದ್ದಾರೆ. ಇವೆಲ್ಲ ಮಾಹಿತಿಯನ್ನು ಸರ್ಕಾರ ಬಹಿರಂಗಗೊಳಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

Join Whatsapp
Exit mobile version