ಬೆಂಗಳೂರು: ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ 40 ಪರ್ಸೆಂಟ್ ಕಮಿಷನ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ಐಟಿ ರಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಗುತ್ತಿಗೆದಾರರ ಸಂಘದ ಆರೋಪ ಬಗ್ಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ನಾಗಮೋಹನ್ ದಾಸ್ ಅವರು ವಿಚಾರಣಾ ವರದಿ ಸಲ್ಲಿಸಿದ ಬಳಿಕ ಸಂಪುಟದಲ್ಲಿ ಮಂಡಿಸಲಾಗಿದೆ. ಕೆಲವು ವಿವರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಇನ್ನಷ್ಟು ವಿವರವಾಗಿ ಚರ್ಚೆಯ ಅಗತ್ಯವಿದೆ ಎಂದು ಹೇಳಿದರು.
ದೂರುಗಳ ಮಾಹಿತಿ ಕಲೆ ಹಾಕಿ ವರದಿಯನ್ನು ನೀಡಲಾಗಿದೆ. 3 ಲಕ್ಷ ಕಾಮಗಾರಿಗಳ ಪೈಕಿ 1729 ಕಾಮಗಾರಿಗಳ ಬಗ್ಗೆ ಆಪಾದನೆಗಳಿವೆ. ಯೋಜನೆ, ಹಣ ಬಿಡುಗಡೆ, ಎಲ್ಒಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಇಲ್ಲ. ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚೆ ನಡೆಸಿದ್ದೇವೆ. ಅನುದಾನಕ್ಕಿಂತ ಹೆಚ್ಚು ಬಿಲ್ ಆಗಿದೆ, ಕಾಮಗಾರಿಗಳ ಬಗ್ಗೆ ಸಂಶಯಗಳಿವೆ. ಕೆಲವು ಕಡೆ ಟೆಂಡರ್ ಹಂಚಿಕೆ ವೇಳೆಯೇ ಮಧ್ಯವರ್ತಿಗಳ ಕೆಲಸ ಆಗಿದೆ. ಗಂಭೀರವಾದ ವರದಿಯಾದ ಹಿನ್ನೆಲೆಯಲ್ಲಿ ಎಸ್ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಎರಡ್ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು – ಮೈಸೂರು ಮೂಲಸೌಲಭ್ಯ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನೈಸ್ ಸಂಸ್ಥೆಯ ಕಾರ್ಯನಿರ್ವಹಣೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟದ ಉಪಸಮಿತಿ ರಚಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
ನೈಸ್ ಯೋಜನೆ ವಿಳಂಬದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟಕ್ಕೆ ಅನುಕೂಲವಾಗುವಂತೆ ಶಿಫಾರಸುಗಳನ್ನು ಮಾಡಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಯೋಜನೆಗಳ ಜಮೀನುಗಳಿಗೆ ಭೂ ವ್ಯಾಜ್ಯ ಕುರಿತು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇವೆ. ಎಂಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ತೀರ್ಪು ನೀಡಿ ಭೂಸ್ವಾಧೀನವನ್ನು ರದ್ದುಗೊಳಿಸಿವೆ ಎಂದು ವಿವರಿಸಿದರು.