►ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಯಹುದಿಕೇರಿಯಲ್ಲಿ ಘಟನೆ
ಮಡಿಕೇರಿ: ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದ 34 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿರುವ ಘಟನೆ ನೆಲ್ಯಹುದಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಒಟ್ಟು 50 ಮುಸ್ಲಿಂ ವಿದ್ಯಾರ್ಥಿನಿಯರಿದ್ದು 34 ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದಿದ್ದರು. ಹೈಕೋರ್ಟ್ ಆದೇಶ ಇರುವುದರಿಂದ ಶಿರವಸ್ತ್ರ ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ ಹಾಗಾಗಿ ಶಿರವಸ್ತ್ರ ಕಳಚಿ ಕಾಲೇಜು ಪ್ರವೇಶಿಸುವಂತೆ ಪ್ರಾಂಶುಪಾಲರು ವಿದ್ಯಾರ್ಥಿನಿಗಳಲ್ಲಿ ಮನವಿ ಮಾಡಿದರು.
ನಾವು ಇದುವರೆಗೂ ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದಿದ್ದು, ನಾವು ಬುರ್ಖಾ ಧರಿಸಲಿಕ್ಕೆ ಅವಕಾಶ ಕೇಳುತ್ತಿಲ್ಲ. ಕೇವಲ ಶಿರವಸ್ತ್ರ ಧರಿಸಲು ಮಾತ್ರ ಅವಕಾಶ ನೀಡಿ ಎಂದರೆ ಅವಕಾಶ ನೀಡುತ್ತಿಲ್ಲ. ನಮಗೆ ವಿದ್ಯಾಭ್ಯಾಸದ ಜೊತೆಗೆ ಶಿರವಸ್ತ್ರ ಧರಿಸಲು ಅವಕಾಶ ಬೇಕು ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಬಳಿಕ 34 ವಿದ್ಯಾರ್ಥಿನಿಯರು ಮನೆಗೆ ವಾಪಸಾದರು.