Home ಕರಾವಳಿ ಎಸ್ಸಿಪಿ, ಟಿಎಸ್ಪಿ ಯೋಜನೆಗಳಡಿ ಇದುವರೆಗೆ ಶೇ.34ರಷ್ಟು ಅನುದಾನ ವೆಚ್ಚ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಎಸ್ಸಿಪಿ, ಟಿಎಸ್ಪಿ ಯೋಜನೆಗಳಡಿ ಇದುವರೆಗೆ ಶೇ.34ರಷ್ಟು ಅನುದಾನ ವೆಚ್ಚ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಹಂಚಿಕೆಯಾದ 29,165.81 ಕೋಟಿ ರೂ.ಗಳ ಅನುದಾನದಲ್ಲಿ ಇದುವರೆಗೆ (ಅಕ್ಟೋಬರ್ ಅಂತ್ಯ) 9,936 ಕೋಟಿ ರೂ.ಗಳು (ಶೇಕಡ 34% ರಷ್ಟು) ವೆಚ್ಚವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಸಚಿವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ವಿಶೇಷ ಕಾರ್ಯಕ್ರಮಗಳಿಗೆ ವಿವಿಧ ಇಲಾಖೆಗಳಿಗೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಒಟ್ಟು 29,165.81 ಕೋಟಿ ರೂ.ಹಂಚಿಕೆ ಮಾಡಿದೆ. ಈ ಮೊತ್ತದಲ್ಲಿ 2022ರ ನವೆಂಬರ್ 29ರ ವರೆಗೆ ಬಿಡುಗಡೆಯಾಗಿರುವ ಸುಮಾರು 13,702.45 ಕೋಟಿಗಳಲ್ಲಿ ರೂ.ಗಳಲ್ಲಿ 12,227 ಕೋಟಿ ವೆಚ್ಚವಾಗಿದ್ದು, ಶೇ. 42% ಪ್ರಗತಿ ಸಾಧಿಸಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಹೋಲಿಕೆ ಮಾಡಿದ್ದಲ್ಲೀ ಶೇ.89% ಪ್ರಗತಿ ಸಾಧಿಸಲಾಗಿದೆ ಎಂದರು.


ಈ ಅಂಕಿಅಂಶಗಳನ್ನು ಪ್ರತೀ ತಿಂಗಳು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ವೆಬ್’ಸೈಟ್’ನಲ್ಲಿಯೂ ಪ್ರಕಟಿಸಲಾಗುತ್ತಿದೆ. ಸಾರ್ವಜನಿಕರು ಈ ವೆಬ್’ಸೈಟ್’ಲ್ಲಿ ಅಂಕಿಅಂಶಗಳನ್ನು ಪರಿಶೀಲಿಸಬಹುದಾಗಿದೆ, ಕೃಷಿ ಇಲಾಖೆಯಲ್ಲಿ 16%, ಅರಣ್ಯ ಇಲಾಖೆ 12%, ಯುವ ಸಬಲೀಕರಣ 23%, ಆಹಾರ ಸರಬರಾಜು ಇಲಾಖೆ 28%, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 28%, ಉನ್ನತ ಶಿಕ್ಷಣ 6%, ಪ್ರಾಥಮಿಕ ಶಿಕ್ಷಣ 18%, ಆರೋಗ್ಯ ಇಲಾಖೆ 27%, ಕೌಶಲ್ಯಾಭಿವೃದ್ಧಿ ಇಲಾಖೆ 5%, ಯೋಜನಾ ಇಲಾಖೆ 29%, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ. 24%. ಅನುದಾನವನ್ನು ಇದೂವರೆಗೆ ವೆಚ್ಚ ಮಾಡಲಾಗಿರುತ್ತದೆ ಎಂಬ ಮಾಹಿತಿ ನೀಡಿದರು.
ಕೇಂದ್ರ ಪುರಸ್ಕೃತ ಯೋಜನೆಯಡಿ ಸುಮಾರು 7,962 ಕೋಟಿ ರೂ.ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಹಂಚಿಕೆಯಾಗಿದ್ದು, ಕೆಲವು ಇಲಾಖೆಗಳಿಗೆ ಕಡಿಮೆ ಅನುದಾನ ಬಿಡುಗಡೆಯಾಗಿದೆ. ಪೂರ್ಣ ಅನುದಾನ ಬಿಡುಗಡೆಗೆ ನಿರೀಕ್ಷೆಯಿದ್ದು, ಕಡಿಮೆ ಅನುದಾನ ಬಿಡುಗಡೆಯಾಗಿರುವ ಇಲಾಖೆಗಳು ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಿ ಒಟ್ಟು ಹಂಚಿಕೆಯಾಗಿರುವ ಅನುದಾನವನ್ನು ಬಿಡುಗಡೆ ಮಾಡಲು ಪ್ರಯತ್ನಿಸುವಂತೆ 2022ರ ಡಿ.1ರಂದು ನಡೆದ ನೋಡಲ್ ಏಜೆನ್ಸಿ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ, ಕಡಿಮೆ ಅನುದಾನ ವೆಚ್ಚ ಮಾಡಿರುವ ಇಲಾಖೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲು ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ಕಡಿಮೆ ಅನುದಾನ ವೆಚ್ಚ ಮಾಡಿರುವ ಇಲಾಖೆಗಳಿಂದ ಹೆಚ್ಚುವರಿ ಅನುದಾನ ಕೋರಿರುವ ಇಲಾಖೆಯ ಯೋಜನೆಗಳಿಗೆ ಅನುದಾನವನ್ನು ಮರುಹಂಚಿಕೆ ಮಾಡುವ ಬಗ್ಗೆ ನೋಡಲ್ ಏಜೆನ್ಸಿ ಸಭೆಯಲ್ಲಿ ತೀರ್ಮಾನಿಸಿದ್ದು, ಆರ್ಥಿಕ ಇಲಾಖೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.


ಈ ಹಿಂದೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿಯಡಿ ನೀಡಿರುವ ಅನುದಾನವನ್ನು ನಿಗದಿತ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ವೆಚ್ಚ ಮಾಡಿರುವ ಬಗ್ಗೆ ದೂರುಗಳು ಬಂದಿದ್ದು, 5 ಪ್ರಕರಣಗಳಲ್ಲಿ (ನಗರಾಭಿವೃದ್ಧಿ-3, ಲೋಕೋಪಯೋಗಿ-1, ಆರ್.ಡಿ.ಪಿಆರ್-1) ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ತಿಳಿಸಲಾಗಿದೆ. ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಅನರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗೆ 2.40 ಲಕ್ಷ ರೂ.ಗಳ ವೆಚ್ಚ ಮಾಡಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದ್ದು, ಸಂಬಂಧಿಸಿದವರಿಂದ ಸದರಿ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Join Whatsapp
Exit mobile version