Home ಟಾಪ್ ಸುದ್ದಿಗಳು ಗಾಝಾದಲ್ಲಿ 3 ದಿನ ಯುದ್ಧವಿರಾಮ: ನಾಳೆಯಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭ

ಗಾಝಾದಲ್ಲಿ 3 ದಿನ ಯುದ್ಧವಿರಾಮ: ನಾಳೆಯಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭ

ಜೆರುಸಲೇಂ: ಗಾಝಾ ಪ್ರದೇಶದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಲು ಅಲ್ಲಿ ಮೂರು ದಿನಗಳ ಮಾನವೀಯ ವಿರಾಮಕ್ಕೆ ಇಸ್ರೇಲ್ ಸಮ್ಮತಿಸಿದೆ. ಕೇಂದ್ರ ಗಾಝಾದಲ್ಲಿ 3 ಸೆಪ್ಟಂಬರ್ 1ರಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭವಾಗಲಿದೆ.

ಈ ಕುರಿತು ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ಯಾಲೆಸ್ತೀನ್ ಪ್ರಾಂತಗಳ ಪ್ರತಿನಿಧಿ ರಿಕ್ ಪೀಪರ್ಕಾರ್ನ್, ಲಸಿಕೆ ಅಭಿಯಾನದ ಸಂದರ್ಭ ಮಾನವೀಯ ವಿರಾಮ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಅಗತ್ಯ ಬಿದ್ದರೆ ಹೆಚ್ಚುವರಿ ದಿನವನ್ನೂ ಬಳಸಿಕೊಳ್ಳಲು ಇಸ್ರೇಲ್ ಒಪ್ಪಿದೆ. 10 ವರ್ಷದೊಳಗಿನ 6,40,000ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಪೋಲಿಯೊ ಪ್ರಕರಣ ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಅಂತಾರಾಷ್ಟ್ರೀಯ ಹರಡುವಿಕೆಯನ್ನು ತಡೆಯಲು ಪ್ರತೀ ಸುತ್ತಿನಲ್ಲೂ ಕನಿಷ್ಠ 90%ದಷ್ಟು ಕವರೇಜ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಸಹಾಯಕ ಪ್ರಧಾನ ನಿರ್ದೇಶಕ ಮೈಕಲ್ ರಿಯಾನ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಹೇಳಿದ್ದಾರೆ.

ಸೆಪ್ಟಂಬರ್ 1ರಿಂದ ಆರಂಭವಾಗುವ ಪೋಲಿಯೊ ಲಸಿಕೆ ಅಭಿಯಾನಕ್ಕೆ ಪೂರಕವಾಗಿ ಗಾಝಾಕ್ಕೆ ಈಗಾಗಲೇ 1 ಕೋಟಿ 26 ಲಕ್ಷ ಪೋಲಿಯೊ ಲಸಿಕೆ ಡೋಸ್‍ಗಳನ್ನು ವಿತರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ರಿಕ್ ಪೀಪರ್ಕಾರ್ನ್ ಹೇಳಿದ್ದಾರೆ.

ಪೋಲಿಯೊ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು ಹೆಚ್ಚಾಗಿ ಕೊಳಚೆ ಮತ್ತು ಕಲುಷಿತ ನೀರಿನಿಂದ ಹರಡುತ್ತದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‍ನ ದಾಳಿಯಿಂದ ಗಾಝಾದ ಮೂಲಸೌಕರ್ಯಗಳು ನಾಶಗೊಂಡಿರುವುದರಿಂದ ಇಂತಹ ವಾತಾವಾತಣ ಹೆಚ್ಚಿದೆ. ಈ ರೋಗವು ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪಾಶ್ರ್ವವಾಯುವಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.

Join Whatsapp
Exit mobile version