Home ಅಂಕಣಗಳು 2ಬಿ ಮೀಸಲಾತಿ ರದ್ದು: ಅತಂತ್ರ ಸ್ಥಿತಿಯಲ್ಲಿ ಮುಸ್ಲಿಂ ಸಮುದಾಯ

2ಬಿ ಮೀಸಲಾತಿ ರದ್ದು: ಅತಂತ್ರ ಸ್ಥಿತಿಯಲ್ಲಿ ಮುಸ್ಲಿಂ ಸಮುದಾಯ

►ನುಸೈಬಾ ಕಲ್ಲಡ್ಕ


ಸರ್ಕಾರದ ಯೋಜನೆಗಳು, ಯೋಚನೆಗಳು ಜನಪರವಾಗಿರಬೇಕೆ ಹೊರತು ಸ್ವಾರ್ಥ ಹಿತಾಸಕ್ತಿಯಿಂದ ಕೂಡಿರಬಾರದು. ರಾಜ್ಯವಾಳುವ ಮುಖ್ಯಮಂತ್ರಿ ರಾಜ್ಯದ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವ, ಸಾಮರಸ್ಯದಿಂದ ಮುನ್ನಡೆಸುವ ಜವಾಬ್ದಾರಿ ಹೊತ್ತಿರಬೇಕು. ಆದರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನೆಲ್ಲ ಮರೆತು ಆರ್ ಎಸ್ ಎಸ್ ನ ಯೋಜನೆ, ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶತಾಗತಾಯ ಪ್ರಯತ್ನಿಸುತ್ತಿದ್ದಾರೆ. ದಿನಬೆಳಗಾದರೆ ಸಾಕು, ಮುಸ್ಲಿಮರನ್ನು ಗುರಿಯಾಗಿಸಿ ಅವರನ್ನು ಮುಖ್ಯವಾಹಿನಿಯಿಂದ ದೂರ ತಳ್ಳುವ ಒಂದಿಲ್ಲೊಂದು ಹುನ್ನಾರಗಳನ್ನು ಹುಟ್ಟುಹಾಕುತ್ತಲೇ ಇದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಸಾಧನೆಗಳನ್ನು ಕಂಡು ಕಣ್ಣು ಕೆಂಪಾಗಿಸಿದ ರಾಜ್ಯ ಸರ್ಕಾರ ಹಿಜಾಬನ್ನು ನೆಪವಾಗಿಸಿ ಅವರ ಶಿಕ್ಷಣ ಮೊಟಕುಗೊಳಿಸಲು ಪ್ರಯತ್ನಿಸಿದ ಬೆನ್ನಲ್ಲೇ ಇದೀಗ ಮುಸ್ಲಿಮರಿಗೆ 2ಬಿ ಪ್ರವರ್ಗದ ಮೀಸಲಾತಿಯನ್ನು ರದ್ದು ಪಡಿಸಿ ದ್ವೇಷ ರಾಜಕಾರಣದ ಹಾದಿಯಲ್ಲಿ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಮುಸ್ಲಿಮರ ತಟ್ಟೆಯಲ್ಲಿದ್ದ 4% ಮೀಸಲಾತಿಯನ್ನು ಕಸಿದುಕೊಂಡು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಉಣಬಡಿಸಲು ಹೊರಟಿರುವುದು ಸರ್ಕಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.


ಶೈಕ್ಷಣಿಕವಾಗಿ ಹಿಂದುಳಿದ ಸಾಮಾಜಿಕವಾಗಿ ಶೋಷಿತಗೊಂಡ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮೀಸಲಾತಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅಂತೆಯೇ ಹಲವು ವೈಜ್ಞಾನಿಕ ವರದಿಗಳ ಆಧಾರದಲ್ಲಿ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ 2ಬಿ ಪ್ರವರ್ಗದಡಿ 4% ಮೀಸಲಾತಿ ಒದಗಿಸಲಾಗಿದೆ. 1920 ರ ಮಿಲ್ಲರ್ ಸಮಿತಿ, 1961 ರ ನಾಗನಗೌಡ ಸಮಿತಿ, 1990ರ ಚೆನ್ನಪ್ಪ ರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗ, ಸಾಚಾರ್ ವರದಿಯ ಶಿಫಾರಸುಗಳೆಲ್ಲವೂ ಇದನ್ನು ನ್ಯಾಯೀಕರಿಸಿದೆ. ಆದಾಗ್ಯೂ ಇಂದಿನ ಬಿಜೆಪಿ ಸರ್ಕಾರ ಏಕಾಏಕಿ ಯಾವುದೇ ವೈಜ್ಞಾನಿಕ ವರದಿಯನ್ನು ಮಂಡಿಸದೆ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕಿರುವುದು ನೀಚ ರಾಜಕೀಯಕ್ಕೆ ಹಿಡಿದ ಕನ್ನಡಿಯಾಗಿದೆ. ಧರ್ಮಾಧಾರಿತ ಮೀಸಲಾತಿ ಸಲ್ಲದು ಎಂದು ಸಬೂಬು ಹೇಳಿರುವ ಸರ್ಕಾರಕ್ಕೆ ‘ಮುಸ್ಲಿಂ ‘ ಒಂದು ಸಮುದಾಯವೇ ಹೊರತು ಧರ್ಮ ಅಲ್ಲ ಎಂಬ ಸಾಮಾನ್ಯ ಅರಿವೂ ಇಲ್ಲದಂತಾಗಿದೆ. ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲವೆಂದಾದರೆ, ಯಾವ ಆಧಾರದ ಮೇಲೆ ಕ್ರೈಸ್ತ, ಬೌದ್ಧ, ಜೈನರ ಮೀಸಲಾತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದಿರಿಸಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ. ತನ್ನದೇ ನಿಲುವಿನಲ್ಲಿ ಸ್ಪಷ್ಟತೆ ಇಲ್ಲದ, ಕೇವಲ ಮುಸ್ಲಿಮರ ವಿರುದ್ಧದ ತಾರತಮ್ಯ ನೀತಿಯ ಸರ್ಕಾರದ ನಿರ್ಧಾರಗಳು ಕೋಮುಪ್ರಚೋದಿತವಲ್ಲದೆ ಇನ್ನೇನು? 2ಬಿ ರದ್ದತಿಯಿಂದ ಮುಸ್ಲಿಮ್ ಅಭ್ಯರ್ಥಿಗಳು ವೈದ್ಯಕೀಯ – 300, ಇಂಜಿನಿಯರಿಂಗ್ – 1700, ದಂತ ವೈದ್ಯಕೀಯ – 50 ಸೀಟುಗಳು ಕಳೆದುಕೊಳ್ಳುತ್ತವೆ. ಮಾತ್ರವಲ್ಲ ಸರ್ಕಾರಿ ಉದ್ಯೋಗದಲ್ಲಿ ವರ್ಷಕ್ಕೆ ಕನಿಷ್ಠ 600 ರಿಂದ 2000 ವರೆಗಿನ ಉದ್ಯೋಗಗಳು ನಷ್ಟವಾಗುತ್ತವೆ ಎಂದು ವರದಿಗಳು ಹೇಳುತ್ತವೆ. ಇದು ಮುಸ್ಲಿಮರನ್ನು ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಮೂಲೆಗುಂಪಾಗಿಸುವ ಷಡ್ಯಂತ್ರವಾಗಿದೆ.


ಇನ್ನು EWS ಅಡಿಯಲ್ಲಿ ಮುಸ್ಲಿಮರಿಗೆ ಒಳಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಮಜಾಯಿಷಿ ನೀಡಿದ್ದಾರೆ. EWS (ECONOMICALLY WEEK SECTION) ಎಂಬುದು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮೀಸಲಾತಿಯಾಗಿದ್ದು, ಇಲ್ಲಿ ಬಲಾಢ್ಯ ಬ್ರಾಹ್ಮಣರ ಜೊತೆ ಸ್ಪರ್ಧಿಸಿ ಅವಕಾಶಗಳನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ಹಲವಾರು ತಜ್ಞರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅತ್ತ 2ಬಿ ಮೀಸಲಾತಿಯೂ ಇಲ್ಲ, ಇತ್ತ EWS ಮೀಸಲಾತಿಯೂ ಇಲ್ಲದೆ ಮುಸ್ಲಿಮರು ಅತಂತ್ರರಾಗುತ್ತಾರೆ. ಇದು ಮುಖ್ಯಮಂತ್ರಿಗಳಿಗೆ ತಿಳಿಯದ ವಿಚಾರವೇನಲ್ಲ. ಆದರೂ ಬೊಮ್ಮಾಯಿಯವರು ಪೊಳ್ಳು ವಾದಗಳನ್ನು ಮುಂದಿಟ್ಟು ಮುಸ್ಲಿಮರನ್ನು ಮರಳು ಮಾಡುವ ಪ್ರಯತ್ನದಲ್ಲಿದ್ದಾರೆ.


ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಘಂಟಾಘೋಷವಾಗಿ ಸಾರಿದವರು ಈಗ ಮೀಸಲಾತಿಯನ್ನು ಬದಲಾಯಿಸ ಹೊರಟಿರುವುದು, ಫ್ಯಾಶಿಸ್ಟ್ ಮನೋಸ್ಥಿತಿಯನ್ನು ಆಳವಾಗಿ ಮನನ ಮಾಡಿಕೊಂಡವರಿಗೆ ಅನಿರೀಕ್ಷಿತವಾಗಿರಲಿಲ್ಲ. ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಂಡು ಆವರ ಅಸ್ತಿತ್ವವನ್ನೇ ಇಲ್ಲವಾಗಿಸುವ ಆರ್ ಎಸ್ ಎಸ್ ನ ಹಿಡನ್ ಆಜೆಂಡಾವನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿರುವ ಬಿಜೆಪಿ ಸರ್ಕಾರದ ಕಾರ್ಯ ತಂತ್ರಗಳು ಈಗ ತೆರೆಮರೆಯಲ್ಲಿ ಉಳಿದಿಲ್ಲ. ಚುನಾವಣೆ ಸಂದರ್ಭಗಳಲ್ಲಿ ಜನರನ್ನು ಪರಸ್ಪರ ಎತ್ತಿ ಕಟ್ಟಿ ರಾಜಕೀಯ ಲಾಭ ಪಡೆಯುವ ಬಿಜೆಪಿಯ ದುರಾಲೋಚನೆ ಇಂದು ನಿನ್ನೆಯದಲ್ಲ.
ಈಗಾಗಲೇ ಚಿಂತಕರು, ಸಾಮಾಜಿಕ ಹೋರಾಟಗಾರರು 2ಬಿ ಮೀಸಲಾತಿ ರದ್ದತಿಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಾಡಿನ ಪ್ರಬುದ್ಧ ನಾಗರಿಕರು ಸಂಘಟನಾ ಭಿನ್ನತೆಗಳನ್ನು ಬದಿಗಿಟ್ಟು ಕಸಿಯಲ್ಪಡುತ್ತಿರುವ ಹಕ್ಕುಗಳನ್ನು ಮರಳಿ ಪಡೆಯಲು ಒಕ್ಕೊರಲಿನಿಂದ ಒಂದಾಗಬೇಕಿದೆ.

Join Whatsapp
Exit mobile version