ಕಲಬುರಗಿ: ರಾಮಮಂದಿರ ನಿರ್ಮಾಣಕ್ಕಾಗಿ ನಾನು 2 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿರುವೆ. ಆದರೆ ನನಗೆ ಉದ್ಘಾಟನೆಗೆ ಆಹ್ವಾನ ನೀಡಿಲ್ಲ. ನಾನು ರಾಮಮಂದಿರ ಉದ್ಘಾಟನೆಗೆ ಹೋಗಲ್ಲ ಎಂದು ಎಂಎಲ್ಸಿ, ಮಾಜಿ ಬಿಜೆಪಿಗ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ವಿಚಾರವಾಗಿ ಯಾರೂ ರಾಜಕೀಯ ಮಾಡಬಾರದು ಎಂದಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಹೇಳಿದಾಗ ನಾನು ಎರಡು ಕೋಟಿ ರೂಪಾಯಿಯಷ್ಟು ಹಣವನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಆದರೂ ನನಗೆ ಆಹ್ವಾನ ನೀಡಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕ್ರಮ ಮುಗಿದನಂತರವೇ ನಾನು ರಾಮನ ದರ್ಶನ ಪಡೆಯುತ್ತೇನೆ ಎಂದರು ಮುಂದುವರಿದು, ರಾಮ ಮಂದಿರ ಅನ್ನುವುದು ಧಾರ್ಮಿಕತೆ, ಧರ್ಮದ ಸಂಕೇತ, ಧರ್ಮ ಜಾಗೃತಿ ಮಾಡಲು, ದೇಶವನ್ನು ಒಂದು ಮಾಡಲು ಇರುವಂಥದ್ದು, ಹೀಗಾಗಿ ರಾಮ ಮಂದಿರದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಬರಬಾರದು. ಆಹ್ವಾನ ಬಂದಿರುವವರು ಅಯೋಧ್ಯೆಗೆ ಹೋಗುವುದು ಬಿಡುವುದು ಅವರವರ ಇಷ್ಟ. ಆದರೆ ನನಗೆ ವೈಯಕ್ತಿಕವಾಗಿ ಆಹ್ವಾನ ಬಂದಿಲ್ಲ ಎಂದರು.
ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ, ಹಿಂದೂ ವಿರೋಧಿ ಇದ್ದರೆ ರಾಜ್ಯದಲ್ಲಿ 135 ಸ್ಥಾನ ಹೇಗೆ ಬರುತ್ತಿತ್ತು ಎಂದು ಇದೇ ಸಂದರ್ಭ ಅವರು ಪ್ರಶ್ನಿಸಿದರು.