ಮಂಗಳೂರು : ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಒಮನ್ ದೇಶದ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ ಹಾಗೂ ಹಿಮಾಚಲ ಪ್ರದೇಶದ ರಾಮ್ ಎಂದು ಗುರುತಿಸಲಾಗಿದೆ.
ಒಮನ್ ಪ್ರಜೆ ಅಹ್ಮದ್ ಮುಸಬಾ 6 ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ. ಈ ಮಧ್ಯೆ ಮಂಗಳೂರು ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಹಾಗೂ ಒಮನ್ ಪ್ರಜೆಯ ಪಾಸ್‌ಪೋರ್ಟ್ ಅವಧಿ ಮುಗಿದು ಅಕ್ರಮವಾಗಿ ನೆಲೆಸಿದ್ದರಿಂದ ಆ ನೆಲೆಯಲ್ಲಿಯೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಧಿತರಿಂದ 51 ಗ್ರಾಂ ಗಾಂಜಾ ಹಾಗೂ 2 ಗ್ರಾಂನಷ್ಟು ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಗೆ ಗಾಂಜಾ ಹಾಗೂ ಎಂಡಿಎಂಎ ಹೇಗೆ ಬಂತು ಹಾಗೂ ಗೋವಾದಿಂದ ಡ್ರಗ್ಸ್ ತಂದು ಇಲ್ಲಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ರಾ ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.