ಜಾರ್ಖಂಡ್: 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್’ಒಂದು ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್’ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 16 ಮಂದಿ ಸಾವನ್ನಪ್ಪಿದ್ದು, 26 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಾರ್ಖಂಡ್’ನ ಪಾಕುರ್ ಜಿಲ್ಲೆಯ ಸಾಹೆಬ್’ಗಂಜ್ –ಗೋಬಿಂದ್’ಪುರ್ ಹೆದ್ದಾರಿಯಲ್ಲಿ ನಡೆದಿದೆ.
ಬರ್ಹರ್ವಾದಿಂದ ದಿಯೋಘರ್ ಜಿಲ್ಲೆಯ ಜಸಿದಿಹ್‌ಗೆ ತೆರಳುತ್ತಿದ್ದ ನತದೃಷ್ಟ ಬಸ್, ಲಿಟ್ಟಿಪಾಡ-ಅಮ್ಡಪಾರ ರಸ್ತೆಯ ಪಾಡೇರಕೋಳ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. 40ಕ್ಕೂ ಹೆಚ್ಚು ಮಂದಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ ಎರಡೂ ವಾಹನಗಳು ನುಜ್ಜುಗುಜ್ಜಾಗಿವೆ. ಡಿಕ್ಕಿಯ ರಭಸಕ್ಕೆ ಟ್ರಕ್’ನಲ್ಲಿದ್ದ ಹಲವು ಸಿಲಿಂಡರ್’ಗಳು ಸ್ಫೋಟಗೊಂಡಿದ್ದು, ಬಸ್ಸಿನ ಮೇಲ್ಬಾವಣಿ ಕತ್ತರಿಸಿ ಹೋಗಿದೆ. ಮೃತರೆಲ್ಲರೂ ಧನ್’ಬದ್,ದುಮ್ಕಾ ಹಾಗೂ ಪಾಟ್ನಾ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಜಿಲ್ಲಾಡಳಿತದ ವತಿಯಿಂದ ತಲಾ ಒಂದು ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಪಾಕುರ್ ಜಿಲ್ಲಾಧಿಕಾರಿ ವರುಣ್ ರಂಜನ್ ತಿಳಿಸಿದ್ದಾರೆ