Home ಟಾಪ್ ಸುದ್ದಿಗಳು ಪ್ರತ್ಯೇಕ ಬಣಕ್ಕಾಗಿ 12 ಶಿವಸೇನೆ ಸಂಸದರ ಮನವಿ

ಪ್ರತ್ಯೇಕ ಬಣಕ್ಕಾಗಿ 12 ಶಿವಸೇನೆ ಸಂಸದರ ಮನವಿ

ನವದೆಹಲಿ: ಶಿವಸೇನೆಯ 19 ಲೋಕಸಭಾ ಸದಸ್ಯರಲ್ಲಿ 12 ಜನರು ತಮ್ಮನ್ನು ಪ್ರತ್ಯೇಕ ಬಣವಾಗಿ ಗುರುತಿಸಿ ಮಾನ್ಯ ಮಾಡುವಂತೆ ಸ್ಪೀಕರ್ ಓಂ ಬಿರ್ಲಾರಿಗೆ ಮನವಿ ಮಾಡಿದ್ದಾರೆ.

 ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರ ಜೊತೆ ಅವರು ದಿಲ್ಲಿಯಿಂದಲೇ ವೀಡಿಯೋ ಕಾನ್ಫರೆನ್ಸಿಂಗ್ ನಡೆಸಿ ಈ ಮನವಿ ಮಾಡಿದರು.

ಮುಂಬೈ ದಕ್ಷಿಣ ಕೇಂದ್ರ ಸಂಸದ ರಾಹುಲ್ ಸೆವಾಲೆ ನೇತೃತ್ವದ 12 ಮಂದಿಯ ಪ್ರತ್ಯೇಕ ಬಣ ಮಾಡುವ ಬಗೆಗೆ ಸಭಾಪತಿಗೆ ಪತ್ರ ಬರೆದಿದ್ದಾರೆ. ಯಾವತ್ ಮಲ್ ಸಂಸದೆ ಭಾವನಾ ಗಾವ್ಳಿಯವರನ್ನು ಈ ಗುಂಪಿನವರು ಮುಖ್ಯ ಸಚೇತಕಿಯಾಗಿ ಮಾಡಿದ್ದಾಗಿ ತಿಳಿಸಿದ್ದಾರೆ. ಬಣ ನಾಯಕರಾಗಿ ಸೆವಾಲೆ ಇರುತ್ತಾರೆ.

ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡಿರುವ ಈ ಗುಂಪಿನ ಇಬ್ಬರಿಗೆ ಕೇಂದ್ರ ಸರಕಾರದ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಶಿಂಧೆ ಗುಂಪಿನ ವಕ್ತಾರ ದೀಪಕ್ ಕೇಸರ್ಕರ್ ಅವರು ಈ ಎಲ್ಲ ಸಂಸದರು ಶಿಂಧೆ ಕ್ಯಾಂಪಿನಲ್ಲಿ ಇರುತ್ತಾರೆ ಎಂದು ಹೇಳಿದರು.

ಒಕ್ಕೂಟ ಸರಕಾರದಲ್ಲಿ ಒಂದು ಕ್ಯಾಬಿನೆಟ್ ಸಚಿವ ಸ್ಥಾನ, ಒಂದು ರಾಜ್ಯ ಮಂತ್ರಿಗಿರಿ ಸಿಗುವುದಾಗಿಯೂ ಅವರು ಹೇಳಿದರು. ಆದರೆ ವಿವಾದಿತ ಒಂದೂವರೆ ಡಜನ್ ಶಾಸಕರ ಅನರ್ಹತೆ ಕುರಿತ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ಏನು ಹೇಳುತ್ತದೆ ಎಂಬುದರ ಮೇಲೆ ಈ ಮಂತ್ರಿಗಿರಿ ಹಾಗೂ ಮಹಾರಾಷ್ಟ್ರದ ಸಚಿವ ಸಂಪುಟ ವಿಸ್ತರಣೆ ಆಗಬೇಕಾಗಿದೆ.

Join Whatsapp
Exit mobile version