Home ಟಾಪ್ ಸುದ್ದಿಗಳು ಹರಿಯಾಣದಲ್ಲಿ ಶಾಲೆ ತೊರೆದ ಖಾಸಗಿ ಶಾಲೆಯ ಬರೋಬ್ಬರಿ 12.5 ಲಕ್ಷ ವಿದ್ಯಾರ್ಥಿಗಳು!

ಹರಿಯಾಣದಲ್ಲಿ ಶಾಲೆ ತೊರೆದ ಖಾಸಗಿ ಶಾಲೆಯ ಬರೋಬ್ಬರಿ 12.5 ಲಕ್ಷ ವಿದ್ಯಾರ್ಥಿಗಳು!

ಚಂಡೀಗಡ:‌ ಹರಿಯಾಣದ ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ನೋಂದಾಯಿಸಿಕೊಂಡಿಲ್ಲ. ಶಾಲಾ ಶಿಕ್ಷಣ ನಿರ್ದೇಶನಾಲಯವು ಈ ಕುರಿತು ನಿರ್ದೇಶನವನ್ನು ಕಳುಹಿಸಿಕೊಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಆದೇಶಿಸಿದ್ದು, ಅವರು ಶಾಲೆಯನ್ನ ಕೈಬಿಟ್ಟಿರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಜೂನ್ 28ರ ವೇಳೆಗೆ 2021-22ರ ಶೈಕ್ಷಣಿಕ ವರ್ಷದಲ್ಲಿ 17.31 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಖಾಸಗಿ ಶಾಲೆಗಳು ಹರಿಯಾಣ ಶಿಕ್ಷಣ ಇಲಾಖೆಗೆ ವರದಿ ಮಾಡಿದೆ. ಆದರೆ, ಕಳೆದ ವರ್ಷ 29.43 ಲಕ್ಷ ವಿದ್ಯಾರ್ಥಿಗಳಿದ್ದರು. ರಾಜ್ಯದಲ್ಲಿ 14,500 ಸರ್ಕಾರಿ ಶಾಲೆಗಳು ಮತ್ತು 8,900 ಖಾಸಗಿ ಶಾಲೆಗಳಿವೆ.

 ಈ 12.51 ಲಕ್ಷ ವಿದ್ಯಾರ್ಥಿಗಳ ದಾಖಲಾತಿಗಾಗಿ ಖಾಸಗಿ ಶಾಲೆಗಳ ಮುಖ್ಯಸ್ಥರು/ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸುವಂತೆ ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಈ ಮೂಲಕ ಅಷ್ಟೊಂದು ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಇಲಾಖೆ ನಿರ್ಧರಿಸಿದೆ.

“ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಬರುವ ವಿಧ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಕಷ್ಟವಾಗಿರಬಹುದು. ಇದಲ್ಲದೆ, ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿಧ್ಯಾರ್ಥಿಗಳ ಪೋಷಕರು ಕೆಲಸ ಕಳೆದುಕೊಂಡಿರುವುದರಿಂದ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರಬಹುದು” ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹರಿಯಾಣ ಶಿಕ್ಷಣ ಸಚಿವ ಕನ್ವರ್ ಪಾಲ್ ಗುರ್ಜರ್, “ಈ ವರ್ಷ ದಾಖಲಾದವರ ಸಂಖ್ಯೆಯು ಕಳೆದ ಶೈಕ್ಷಣಿಕ ವರ್ಷದಲ್ಲಿ ದಾಖಲಾದವರ ಸಂಖ್ಯೆಗೆ ಭಾರಿ ಅಂತರವಿರುವುದರಿಂದ ಆಶ್ಚರ್ಯವಾಗುತ್ತಿದೆ. ‘ನಾವು ಸಮಸ್ಯೆಯನ್ನು ಪರಿಶೀಲಿಸುತ್ತೇವೆ” ಎಂದು ಹೇಳಿದ್ದಾರೆ.

Join Whatsapp
Exit mobile version