Home ಟಾಪ್ ಸುದ್ದಿಗಳು ರಸ್ತೆ ಅಪಘಾತ: 11 ಮಂದಿ ದಾರುಣ ಸಾವು

ರಸ್ತೆ ಅಪಘಾತ: 11 ಮಂದಿ ದಾರುಣ ಸಾವು

ಬಲೋದ್ (ಛತ್ತೀಸ್ ​ಗಢ): ಕಾರು ಹಾಗೂ  ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ 11 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಮ್ತಾರಿ ಜಿಲ್ಲೆಯ ಜಾಗತ್ರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತರಲ್ಲಿ ಐವರು ಮಹಿಳೆಯರು ಹಾಗು ಇಬ್ಬರು ಮಕ್ಕಳು ಸೇರಿದ್ದು ಉಳಿದವರು ಪುರುಷರಾಗಿದ್ದಾರೆ. ಸುದ್ದಿ ತಿಳಿದ ‌ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

ಧಮ್ತಾರಿ ಜಿಲ್ಲೆಯ ರುದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊರೆಮ್ ಗ್ರಾಮದ ಸಾಹು ಕುಟುಂಬ ಕಂಕೇರ್‌ ನಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದರು.

ಮಾರ್ಗ ಮಧ್ಯದ ಬಲೋದ್ ​ನ ಜಾಗತ್ರ ಎಂಬಲ್ಲಿ ಸಂಚರಿಸುತ್ತಿದ್ದಾಗ ಎದುರಾದ ಟ್ರಕ್, ಬೊಲೆರೊಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಬೊಲೆರೊ ಕೆಲವು ಮೀಟರ್ ​ಗಳಷ್ಟು ದೂರ ಹಾರಿ ಬಿದ್ದಿದೆ.

ಬೊಲೆರೊ ವಾಹನದಲ್ಲಿ ಪ್ರಯಾಣಿಸುತ್ತಿದ್ದ 11 ಜನರ ಪೈಕಿ 10 ಮಂದಿ ಸ್ಥಳದಲ್ಲೇ ಮೃತಪಟ್ಟರು. ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಮೃತರೆಲ್ಲರೂ ಧಮ್ತಾರಿ ಜಿಲ್ಲೆಯ ಸೋರಂ ಭಟಗಾಂವ್ ನಿವಾಸಿಗಳು ಎಂದು ಹೇಳಲಾಗುತ್ತಿದೆ.ಅಪಘಾತದ ನಂತರ ಸ್ಥಳೀಯರು ಮತ್ತು ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದರು.

Join Whatsapp
Exit mobile version