Home ಟಾಪ್ ಸುದ್ದಿಗಳು ಹೊಸ ಒಂದು ಸಾವಿರ ಅಂಗನವಾಡಿಗಳು ಮಂಜೂರು: ಹಾಲಪ್ಪ ಆಚಾರ್

ಹೊಸ ಒಂದು ಸಾವಿರ ಅಂಗನವಾಡಿಗಳು ಮಂಜೂರು: ಹಾಲಪ್ಪ ಆಚಾರ್

ಹಾಸನ: ರಾಜ್ಯದಲ್ಲಿ ಹೊಸದಾಗಿ ಒಂದು ಸಾವಿರ ಅಂಗನವಾಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ತಾಲೂಕುಗಳಿಗೆ ಒಂದು ಸಾವಿರ ಅಂಗನವಾಡಿ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅಂಗನವಾಡಿಗಳಲ್ಲಿ ಗರ್ಬಿಣಿ ಹಾಗೂ ಬಾಣಂತಿಯರಿಗೆ  ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ ಮಲೆನಾಡು ಭಾಗದ ಐದಾರು ಜಿಲ್ಲೆಗಳಲ್ಲಿ ಈ ಯೋಜನೆ ಸದುಯೋಗವಾಗುತ್ತಿಲ್ಲ. ಈ ಹಿನ್ನೆಲೆ ಐದಾರು ಜಿಲ್ಲೆಗಳಲ್ಲಿ ಬಿಸಿಯೂಟದ ಬದಲು ಮನಗೆ ಆಹಾರ ಧಾನ್ಯ ನೀಡಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಅಪೌಷ್ಟಿಕತೆ ಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ಹಾಗೂ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿತ್ತು. ಈ ಯೋಜನೆಯನ್ನು ರಾಜ್ಯದ ಎಲ್ಲಾ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದರು.

ಜಿಲ್ಲೆಯ ಹಲವೆಡೆ ಅಂಗನವಾಡಿಗಳಿಗೆ ಕಳಪೆ ಹಾಗೂ ಅವಧಿ ಮೀರಿದ ಪೌಷ್ಟಿಕ ಆಹಾರ ಸರಬರಾಜು ಮಾಡಿರುವ ಸಂಬಂಧ ತನಿಕೆ ನಡೆಯುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ನಾನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಬಳಿಕ, ಜಲ್ಲಿ, ಮರಳು, ಪೂರಕ ಸಾಮಗ್ರಿಗಳನ್ನು ಪೂರೈಸಲು ಸಾಕಷ್ಟು ಬದಲಾವಣೆ ತರಲಾಗುತ್ತಿದೆ.

ಹೊಸ ಮರಳು ನೀತಿ ಜಾರಿಗೆ ತಂದು ಮರಳು ಬ್ಲಾಕ್ ಗಳನ್ನು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಗೆ ವಹಿಸಿ ಒಂದು ಟನ್ ಮರಳನ್ನು 700 ರಿಂದ 800 ರೂ.ಗೆ ನೀಡಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಶಾಸಕರಿಂದ ದೂರುಗಳು ಬಂದಿವೆ. ಪೊಲೀಸರೇ ಮರಳು ದಂಧೆಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Join Whatsapp
Exit mobile version