ದಾವಣಗೆರೆ: ದಲಿತರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ ಕಾಂಗ್ರೆಸ್ ಪಕ್ಷವು ಆ ಸಮುದಾಯದ ವಿರುದ್ಧವೇ ಹೇಳಿಕೆ ಕೊಡುವಂತೆ ಮಾಡುವುದು ಅಕ್ಷಮ್ಯ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಾಗ ಅದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ ಹಿನ್ನೆಲೆಯಲ್ಲಿ ಚಿಂತಕ ದಿನೇಶ್ ಅಮೀನ್ ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶೇ 10 ಮೀಸಲಾತಿ ಬರುವ ಈ ಸಮಯದಲ್ಲಿ ಬಸವಲಿಂಗಪ್ಪ ಇದ್ದಿದ್ದರೆ ಅವರು ರಾಜ್ಯದ ಬಂದ್ಗೆ ಕರೆ ಕೊಡುತ್ತಿದ್ದರು. ಕಾರಣ, ಇದು ಹೀಗೆ ಮುಂದುವರಿದರೆ ಜಾತಿ ಆಧಾರಿತ ಮೀಸಲಾತಿ ರದ್ದಾಗುತ್ತದೆ. ಸಂವಿಧಾನದ ರಕ್ಷಣೆ ಇಲ್ಲದೇ ಹೋದರೆ ನಾವು ಬೀದಿಗೆ ಬೀಳುತ್ತೇವೆ. ಈ ಮೀಸಲಾತಿ ನಮ್ಮ ಶವದ ಪೆಟ್ಟಿಗೆಗೆ ಹೊಡೆದ ಮೊದಲ ಮೊಳೆ ಎಂದು ಹೇಳಿದರು.
ಖರ್ಗೆ ಅವರ ಬಗ್ಗೆ ಬಹಳ ಕಾಲದಿಂದ ನನಗೆ ತಿಳಿದಿದೆ. ಶೇ 10 ಮೀಸಲಾತಿ ಬಗ್ಗೆ ಇವತ್ತು ಹೋಗಿ ವೈಯಕ್ತಿಕವಾಗಿ ಅವರಲ್ಲಿ ಅಭಿಪ್ರಾಯ ಕೇಳಿದರೆ ಅವರು ಖಂಡಿತ ವಿರೋಧಿಸುತ್ತಾರೆ. ಆದರೆ, ಸ್ವಾಗತಿಸಿ ಹೇಳಿಕೆ ನೀಡುವ ಅನಿವಾರ್ಯತೆ ಯಾಕೆ ಸೃಷ್ಟಿಯಾಯಿತು ಎಂದು ಪ್ರಶ್ನಿಸಿದರು.
398 ಪುಟಗಳ ಈ ತೀರ್ಪನ್ನು ಎಲ್ಲರೂ ಓದಬೇಕು. ಜಾತಿ ಆಧಾರಿತ ಮೀಸಲಾತಿ ರದ್ದು ಮಾಡಲು ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿಯವರೇ ಹೇಳಿದ್ದಾರೆ. ಐವರು ನ್ಯಾಯಮೂರ್ತಿಗಳಲ್ಲಿ ಯು.ಯು ಲಲಿತ್ ಮತ್ತು ರವೀಂದ್ರಭಟ್ ಅವರು ಕೂಡ ಶೇ 10 ಮೀಸಲಾತಿ ಬೇಡ ಎಂದಿಲ್ಲ. ಎಸ್ಸಿ, ಎಸ್ಟಿ, ಒಬಿಸಿ ಒಳಗೊಂಡಿಲ್ಲ ಎಂಬುದಷ್ಟೇ ಅವರ ಆಕ್ಷೇಪವಾಗಿದೆ ಎಂದರು.