Home ಗಲ್ಫ್ ಹಜ್: ಅರ್ಜಿಗಳನ್ನು ಸಲ್ಲಿಸಲು ನಾಳೆ ಕೊನೆಯ ದಿನಾಂಕ

ಹಜ್: ಅರ್ಜಿಗಳನ್ನು ಸಲ್ಲಿಸಲು ನಾಳೆ ಕೊನೆಯ ದಿನಾಂಕ

ಹೊಸದಿಲ್ಲಿ:  2021ರ ಹಜ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆ ಕೊನೆಗೊಳ್ಳಲಿದೆ. ಅರ್ಜಿಗಳನ್ನು ಡಿಸೆಂಬರ್ 10 ರ ಮೊದಲು ಸಲ್ಲಿಸುವಂತೆ ತಿಳಿಸಲಾಗಿತ್ತಾದರೂ ನಂತರ ಅದನ್ನು ಮುಂದೂಡಲಾಗಿತ್ತು. ಯಾತ್ರಾರ್ಥಿಗಳು ಜನವರಿ 10 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ಹಿಂದೆ ಹೇಳಿದ್ದರು.

ಕರೋನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಹಜ್ ಯಾತ್ರೆಗೆ ಎಂಬಾರ್ಕೇಶನ್ ಪಾಯಿಂಟ್ 10 ಕ್ಕೆ ಇಳಿಸಲಾಗಿದೆ. ಅಹಮದಾಬಾದ್, ಬೆಂಗಳೂರು, ಕೊಚ್ಚಿ, ದೆಹಲಿ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಕ್ನೋ, ಮುಂಬೈ ಮತ್ತು ಶ್ರೀನಗರ ದೇಶದ ಎಂಬಾರ್ಕೇಶನ್ ಪಾಯಿಂಟ್ ಗಳು. ಈ ಹಿಂದೆ ದೇಶಾದ್ಯಂತ 21 ಎಂಬಾರ್ಕೇಶನ್ ಪಾಯಿಂಟ್‌ಗಳು (ಹೊರಡುವ ಸ್ಥಳ) ಇದ್ದವು. ಸೌದಿ ಸರಕಾರದ ಪ್ರತಿಕ್ರಿಯೆಯ ಬಳಿಕ ವಿವರವಾದ ಚರ್ಚೆಯ ನಂತರ ಎಂಬಾರ್ಕೇಶನ್ ಪಾಯಿಂಟ್ ಆಧಾರದ ಮೇಲೆ  ಹಜ್ ತೀರ್ಥಯಾತ್ರೆಯ ವೆಚ್ಚವನ್ನು ಸಹ ಕಡಿಮೆ ಮಾಡಲಾಗಿದೆ.

ಅದರಂತೆ ಅಹಮದಾಬಾದ್ ಮತ್ತು ಮುಂಬೈನ ಎಂಬಾರ್ಕೇಶನ್ ಪಾಯಿಂಟ್‌ಗಳಿಂದ 3,30,000 ರೂ, ಬೆಂಗಳೂರು, ಲಕ್ನೋ, ದೆಹಲಿ ಮತ್ತು ಹೈದರಾಬಾದ್‌ನಿಂದ 3,50,000 ರೂ, ಕೊಚ್ಚಿ ಮತ್ತು ಶ್ರೀನಗರದಿಂದ 3,60,000 ರೂ, ಕೋಲ್ಕತ್ತಾದಿಂದ 3,70,000 ರೂ. ಮತ್ತು ಗುವಾಹಟಿಯಿಂದ 4 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ.

ಕೋವಿಡ್ ಸನ್ನಿವೇಶದಿಂದಾಗಿ ಸೌದಿ ಅರೇಬಿಯಾ ಸರಕಾರ ಮತ್ತು ಭಾರತ ಸರಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸಿ ಜೂನ್ ಮತ್ತು ಜುಲೈ 2021 ರ ಯಾತ್ರಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.

Join Whatsapp
Exit mobile version