Home ಕರಾವಳಿ ಸುಹಾಸ್ ಶೆಟ್ಟಿ ಮೇಲೆ‌ ರೌಡಿಶೀಟರ್ ತೆರೆದಿದ್ದು ಬಿಜೆಪಿ ಸರ್ಕಾರ : ಮಂಜುನಾಥ್ ಭಂಡಾರಿ ತಿರುಗೇಟು

ಸುಹಾಸ್ ಶೆಟ್ಟಿ ಮೇಲೆ‌ ರೌಡಿಶೀಟರ್ ತೆರೆದಿದ್ದು ಬಿಜೆಪಿ ಸರ್ಕಾರ : ಮಂಜುನಾಥ್ ಭಂಡಾರಿ ತಿರುಗೇಟು

0

►’ಪೇಜಾವರ ಶ್ರೀ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು

ಮಂಗಳೂರು : ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ನಡೆದಾಗ ಆತನನ್ನು ಹಿಂದೂ ನಾಯಕ ಎಂದು ವೈಭವೀಕರಣ ಮಾಡಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟರ್ ತೆರೆದಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ತಿರುಗೇಟು ನೀಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸುಹಾಸ್ ಶೆಟ್ಟಿ ಹಿಂದೂ ನಾಯಕನಾಗಿದ್ದರೆ ಆತನ ಮೇಲೆ ರೌಡಿಶೀಟರ್ ತೆರೆಯಲು ಬಿಜೆಪಿ ಸರ್ಕಾರ ಅವಕಾಶ ಕೊಟ್ಟಿದ್ಯಾಕೆ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರವೇ ರೌಡಿಶೀಟರ್ ಓಪನ್ ಮಾಡಿ ಈಗ ಆತನಿಗೆ ಹಿಂದೂ ನಾಯಕನ ಪಟ್ಟ ಕಟ್ಟಿದ್ದಾರೆ, ಅಂದು ರೌಡಿಶೀಟರ್ ತೆರೆಯುವಾಗ ತುಟಿ ಬಿಚ್ಚದವರು ಇಂದು ವೈಭವೀಕರಣ ಮಾಡುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸುಹಾಸ್ ಶೆಟ್ಟಿ ಮೇಲೆ‌ ಐದು ಕ್ರಿಮಿನಲ್ ಪ್ರಕರಣಗಳಿದ್ದು, ಕೀರ್ತಿ ಎಂಬ ಹಿಂದೂ ಯುವಕನನ್ನು ಕೊಂದಿರುವ ಕೇಸ್ ಕೂಡ ಇದೆ. ಕೊಲೆಯಾದ ದಲಿತ ಯುವಕ ಹಿಂದೂ ಅಲ್ಲವೇ? ಹಿಂದೂಗಳನ್ನು ಕೊಂದವನನ್ನು ಹಿಂದೂ ಕಾರ್ಯಕರ್ತ ಎಂದು ವೈಭವೀಕರಿಸುವುದು ಸರಿಯಲ್ಲ ಎಂದರು.

ಬಿಜೆಪಿಯವರು ಕೊಲೆಗಳಾಗುವುದನ್ನು ಕಾಯುತ್ತಿರುತ್ತಾರೆ, ಕೊಲೆ ಸಂಭವಿಸಿದಾಗ ಬಿಜೆಪಿ ರಾಜಕೀಯ ಮಾಡುತ್ತೆ, ಬಿಜೆಪಿಯ ಅಧಿಕಾರ ದಾಹಕ್ಕಾಗಿ ಕೋಮು ಗಲಾಟೆಗಳು ನಡೆಯುತ್ತಿದೆ, ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣವನ್ನು ಬಿಜೆಪಿ ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಂಡಿತ್ತು ಎಂದರು.

ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ, ಹಿಂದೂ ಯುವಕರಿಗೆ ರಕ್ಷಣೆ ಇಲ್ಲ ಎಂದಿರುವ ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದ ಮಂಜುನಾಥ್ ಭಂಡಾರಿ, ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಮೋದಿ‌ ಸರಕಾರ ಅಧಿಕಾರಕ್ಕೆ ಬಂದಿದ್ದು ಅವರ ಸರ್ಕಾರ ಇರುವಾಗ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದಾದರೆ ಶ್ರೀಗಳು ಮೋದಿಯವರ ರಾಜೀನಾಮೆ ಕೇಳಲಿ ಎಂದರು. ಪೇಜಾವರ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆ ಓದಬೇಕು ಎಂದು ಮನವಿ ಮಾಡುತ್ತೇನೆ, ಶ್ರೀಗಳು ಕ್ಷುಲ್ಲಕ‌ ಹೇಳಿಕೆ ನೀಡಬಾರದು, ರಾಜಕೀಯ ಮಾಡುವುದನ್ನು ಬಿಡಬೇಕು ಎಂದರು.

ಕೊಲೆಗಳು ಖಂಡನೀಯ, ನಿಷ್ಪಕ್ಷಪಾತ ತನಿಖೆ ನಡೆದು ಮತೀಯ ಕೊಲೆಗಳ ಹಿಂದಿನ ಶಕ್ತಿಗಳನ್ನು ಗುರುತಿಸಿ ಶಿಕ್ಷಿಸಬೇಕು, ಯಾವ ಒತ್ತಡಕ್ಕೂ‌ ಮಣಿಯದೆ ಪೊಲೀಸರು ತನಿಖೆ ನಡೆಸಬೇಕು, ಕೊಲೆಗಳು ನಡೆದಾಗ ಯಾರೂ ಕೋಮು ಪ್ರಚೋದನೆ ಮಾಡಬಾರದು ಎಂದು ಮಂಜುನಾಥ್ ಭಂಡಾರಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಪದ್ಮರಾಜ್ ಪೂಜಾರಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ ಬಾವ, ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಮಹಿಳಾ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆನ್ ಪಿಂಟೋ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮತ್ತಿತರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version