Home ಟಾಪ್ ಸುದ್ದಿಗಳು ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ತಮಿಳುನಾಡು ಸರಕಾರ

ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ತಮಿಳುನಾಡು ಸರಕಾರ

ತೆಂಕಾಶಿ(ತಮಿಳುನಾಡು): ಪೌರತ್ವ ಕಾನೂನಿನ ತಿದ್ದುಪಡಿಯ ವಿರೋಧಿ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ. ತೆಂಕಾಶಿ ಕಡಯನೆಲ್ಲೂರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಈ ಘೋಷಣೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಎಐಎಡಿಎಂಕೆಯ ಮುಖ್ಯಮಂತ್ರಿಯ ಈ ಘೋಷಣೆಯು ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಪೌರತ್ವ ಕಾನೂನಿನ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ರದ್ದುಪಡಿಸಬೇಕು ಮತ್ತು ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವುದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಪದೇ ಪದೇ ಒತ್ತಾಯಿಸುತ್ತಿದ್ದರು.

ಮುಖ್ಯಮಂತ್ರಿಗಳ ಪ್ರಕಾರ, ತಮಿಳುನಾಡಿನಲ್ಲಿ ಪೌರತ್ವ ಪ್ರತಿಭಟನಾಕಾರರ ವಿರುದ್ಧ ಸುಮಾರು 1,500 ಪ್ರಕರಣಗಳು ದಾಖಲಾಗಿವೆ. ಪೊಲೀಸರ ಕರ್ತವ್ಯಕ್ಕೆ ಅಡಚಣೆ ಅಥವಾ ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಲಾಗಿದೆ ಎಂದು ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಈ ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕುಡಂಕುಳಂ ಪರಮಾಣು ಸ್ಥಾವರ ವಿರುದ್ಧ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಹೇಳಿದ್ದಾರೆ.

Join Whatsapp
Exit mobile version