Home ಟಾಪ್ ಸುದ್ದಿಗಳು ಸಂತ್ರಸ್ತ ಯುವಕನಿಗೆ ನ್ಯಾಯ ಕೇಳಲು ಠಾಣೆಗೆ ಹೋದ SDPI ಮುಖಂಡರ ವಿರುದ್ಧ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ...

ಸಂತ್ರಸ್ತ ಯುವಕನಿಗೆ ನ್ಯಾಯ ಕೇಳಲು ಠಾಣೆಗೆ ಹೋದ SDPI ಮುಖಂಡರ ವಿರುದ್ಧ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಒತ್ತಾಯ

ರಾಯಚೂರು: ಸಂತ್ರಸ್ತ ಯುವಕನೊಬ್ಬನ ಪರವಾಗಿ ಧ್ವನಿ ಎತ್ತಿದ ಇಬ್ಬರು ಎಸ್ ಡಿಪಿಐ ಮುಖಂಡರ ಮೇಲೆ ರಾಯಚೂರು ಸಬ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ರಾಯಚೂರು ಎಸ್ ಡಿಪಿಐ ಜಿಲ್ಲಾಧ್ಯಕ್ಷ ತೌಸೀಫ್ ಅಹ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿಲಾನಿ ಅವರಿಗೆ ಜಾಮೀನು ದೊರೆತಿದೆ.


ಘಟನೆಯ ಹಿನ್ನೆಲೆ
ಬಿಲಾಲ್ ಎಂಬ ಯುವಕನ ಮನೆಯಲ್ಲಿ ಕೌಟುಂಬಿಕ ಸಮಸ್ಯೆ ಉಂಟಾಗಿತ್ತು. ವಿಚಾರಣೆ ವೇಳೆ ಪದವಿ ಕಲಿಯುತ್ತಿರುವ ಬಿಲಾಲ್ ನ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಂದು ವಾರವಾದರೂ ಮೊಬೈಲ್ ಅನ್ನು ವಿದ್ಯಾರ್ಥಿಗೆ ಕೊಡದ ಹಿನ್ನೆಲೆಯಲ್ಲಿ ಬಿಲಾಲ್ ತನ್ನ ಸಂಬಂಧಿಯೂ ಆಗಿರುವ ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಜೀಲಾನಿ ಬಳಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ವಿಚಾರಿಸಲು ಜೀಲಾನಿ ಅವರು ಪಕ್ಷದ ಜಿಲ್ಲಾಧ್ಯಕ್ಷ ತೌಸೀಫ್ ಅಹ್ಮದ್ ಅವರೊಂದಿಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ತೆರಳಿದ್ದಾರೆ.


ಮೊಬೈಲ್ ಠಾಣೆಯಲ್ಲಿ ಇರಿಸಿರುವುರಿಂದ ವಿದ್ಯಾರ್ಥಿಯ ಕಲಿಕೆಗೆ ತೊಂದರೆಯಾಗಿದೆ. ಆದ್ದರಿಂದ ಮೊಬೈಲ್ ಹಸ್ತಾಂತರಿಸುವಂತೆ ಎಸ್ ಡಿಪಿಐ ನಾಯಕರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರಲ್ಲಿ ಮನವಿ ಮಾಡಿದ್ದಾರೆ.

ಇಷ್ಟಕ್ಕೆ ಸಿಟ್ಟಿಗೆದ್ದ ಮಂಜುನಾಥ್ ಅವರು, ಇದನ್ನು ಕೇಳಲು ನೀವ್ಯಾರು ಎಂದು ಪ್ರಶ್ನಿಸಿ, ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಿ ಇಬ್ಬರನ್ನು ಠಾಣೆಯ ಸೆಲ್ ಗೆ ಕೂಡಿ ಹಾಕಿದ್ದರು. ಅದೇ ಸೆಲ್ ನಲ್ಲಿ ಇಬ್ಬರು ಕೊಲೆ ಆರೋಪಿಗಳು ಕೂಡ ಇದ್ದರು. ಅವರೊಂದಿಗೆ ಎಸ್ ಡಿಪಿಐ ನಾಯಕರನ್ನು ಕೂಡ ಕೂಡಿಹಾಕಿದ್ದರು. ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ಎಸ್ ಡಿಪಿಐನ ಮತ್ತೋರ್ವ ಕಾರ್ಯಕರ್ತ ಬುರ್ಹಾನುದ್ದೀನ್ ಅವರ ಮೇಲೆಯೂ ಹಲ್ಲೆ ನಡೆಸಿ ಮೂವರ ವಿರುದ್ಧವೂ ಐಪಿಸಿ 110 ಸೆಕ್ಷನ್ ನಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಎಸ್ ಡಿಪಿಐ ಮುಖಂಡರು ತಿಳಿಸಿದ್ದಾರೆ.


ಆರೋಪ ನಿರಾಕರಿಸಿರುವ ಮಂಜುನಾಥ್
ತಮ್ಮ ವಿರುದ್ಧ ಕೇಳಿ ಬಂದ ಆರೋಪ ಸತ್ಯಕ್ಕೆ ದೂರವಾದುದು. ಮೊಬೈಲ್ ವಿಚಾರಿಸಲು ಬಂದ ಇಬ್ಬರಿಗೂ ಬಿಲಾಲ್ ಎಂಬವರಿಗೂ ಸಂಬಂಧವೇ ಇರಲಿಲ್ಲ. ಬಿಲಾಲ್ ಎಂಬ ಯುವಕನಿಗೆ ತಂದೆ, ತಾಯಿ ಇದ್ದಾರೆ. ಅವರು ಮೊಬೈಲ್ ತೆಗೆದುಕೊಳ್ಳಲು ಬರಲಿ ಎಂದು ಹೇಳಿದ್ದೇನೆ ಅಷ್ಟೇ ಎಂದು ರಾಯಚೂರು ವೆಸ್ಟ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ “ಪ್ರಸ್ತುತ ನ್ಯೂಸ್’ಗೆ ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version