ವಾಶಿಂಗ್ಟನ್: ಚುನಾವಣೆಯಲ್ಲಿ ವಂಚನೆ ನಡೆದಿದೆಯೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಆಧಾರ ರಹಿತ ಪ್ರತಿಪಾದನೆಗಳನ್ನು ಬೆಂಬಲಿಸಿ ನಡೆದ ರ್ಯಾಲಿ ಸಂಘರ್ಷಕ್ಕೆ ತಿರುಗಿದ್ದು ನಾಲ್ಕು ಮಂದಿ ಚೂರಿ ಇರಿತಕ್ಕೊಳಗಾಗಿದ್ದಾರೆ ಮತ್ತು ಓರ್ವ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆದಿದೆ.
ನವೆಂಬರ್ 3ರ ಚುನಾವಣೆಯಲ್ಲಿ ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಡೊನಾಲ್ಡ್ ಟ್ರಂಪ್ ಸೋಲನ್ನಪ್ಪಿದ್ದರೂ ಇದುವರೆಗೆ ಅದನ್ನು ಒಪ್ಪಿಕೊಂಡಿಲ್ಲ. ಇದೀಗ ಟ್ರಂಪ್ ಪರ ಅವರ ಬೆಂಬಲಿಗರು ರ್ಯಾಲಿ ನಡೆಸುತ್ತಿರುವ ವೇಳೆ ವಿರೋಧಿ ಪ್ರತಿಭಟನಕಾರರೊಂದಿಗೆ ಘರ್ಷಣೆ ನಡೆದಿದೆ.
ಒಲಿಂಪಿಯಾದಲ್ಲಿ ಕ್ಯಾಪಿಟಲ್ ಕಟ್ಟಡದ ಬಳಿ ನಡೆದ ಸಂಘರ್ಷದ ಬಳಿಕ ಗುಂಡಿನ ದಾಳಿ ನಡೆದಿದ್ದು, ಶಂಕಿತನೋರ್ವನನ್ನು ಬಂಧಿಸಲಾಗಿದೆ ಎಂದು ವಾಶಿಂಗ್ಟನ್ ಪೋಸ್ಟ್ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ನಾಲ್ವರನ್ನು ಚೂರಿಯಿಂದ ಇರಿಯಲಾಗಿದ್ದು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರಾಜಧಾನಿಯ ಡಿಸಿ ಫಯರ್ ಮತ್ತು ಇಎಂಎಸ್ ಇಲಾಖೆಯ ಸಂವಹನ ಮುಖ್ಯಸ್ಥ ಡಗ್ ಬುಚನನ್ ಎ.ಎಫ್.ಪಿಗೆ ತಿಳಿಸಿದ್ದಾರೆ. ದಿನದುದ್ದಕ್ಕೂ 23 ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಯಾವುದೇ ಸಂತ್ರಸ್ತರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರೇ ಎಂಬುದು ತಿಳಿದುಬಂದಿಲ್ಲ. ಫಲಿತಾಂಶಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬಳಿಕ ಅಧ್ಯಕ್ಷರಿಗೆ ಬೆಂಬಲ ಸೂಚಿಸಿ ಸಾವಿರಾರು ಮಂದಿ ಕೆಂಪು ಟೋಪಿಗಳನ್ನು ಹಾಕಿದ ಪ್ರತಿಭಟನಕಾರರು ವಾಶಿಂಗ್ಟನ್ ಬೀದಿಗಳಲ್ಲಿ ತುಂಬಿದ್ದರು.