ಹಲವು ಸುತ್ತಿನ ಮಾತುಕತೆಯ ಬಳಿಕವೂ ರೈತರನ್ನು ಮನವೊಲಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ ರೈತರ ಒಗ್ಗಟ್ಟಿನ ಮುಂದೆ ತಲೆಬಾಗಲೇಬೇಕಾಯಿತು. ಗಣರಾಜ್ಯೋತ್ಸವ ದಿನದಂದು ರೈತರ ಉದ್ದೇಶಿತ ಟ್ರ್ಯಾಕ್ಟರ್ ಪರೇಡ್ ಗೆ ದೆಹಲಿ ಪೊಲೀಸರು ಕೊನೆಗೂ ಅನುಮತಿ ನೀಡಿದ್ದಾರೆ.
ಆದರೆ ರಾಜಪಥ್ ನಲ್ಲಿ ನಡೆಯುವ ಸರ್ಕಾರದ ಅಧಿಕೃತ ಪರೇಡ್ ನ ಬಳಿಕವೇ ರೈತರ ಟ್ರ್ಯಾಕ್ಟರ್ ಜಾಥಾ ನಡೆಯಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.
ರೈತರು ಮತ್ತು ಪೊಲೀಸರ ನಡುವೆ ನಡೆದ ಮಾತುಕತೆಯ ಪ್ರಕಾರ, ಕಳೆದ ಎರಡು ತಿಂಗಳುಗಳಿಂದ ಪ್ರಸಕ್ತ ಪ್ರತಿಭಟನೆ ನಡೆಸುತ್ತಿರುವ ಮೂರು ಗಡಿಗಳಿಂದ ದೆಹಲಿಗೆ ಪ್ರವೇಶಿಸಲಿದ್ದಾರೆ. ಆದರೆ ದೆಹಲಿಯ ಕೇಂದ್ರ ಭಾಗಕ್ಕೆ ಬರುವುದಿಲ್ಲ ಎಂದು ನಿರ್ಧಾರವಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಲು ಸಾವಿರಾರು ಟ್ರ್ಯಾಕ್ಟರುಗಳು ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಗೆ ತೆರಳಲಿವೆ. ಸುಮಾರು 2ರಿಂದ 3 ಲಕ್ಷ ಟ್ರ್ಯಾಕ್ಟರುಗಳು ಪ್ರತಿಭಟನೆ ಜಾಥಾದಲ್ಲಿ ಭಾಗವಹಿಸಲಿವೆ. ಮೆರವಣಿಗೆ ಸಂಪೂರ್ಣವಾಗಿ ಶಾಂತಿಯುತವಾಗಿರುತ್ತದೆ ಎಂದು ಪಂಜಾಬ್ ಜಮ್ಹೂರಿ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಮಂಚ್‌ನ ಪಂಜಾಬ್ ಅಧ್ಯಕ್ಷ ಬುಟಾ ಸಿಂಗ್ ಶಾದಿಪುರ್ ಮಾತನಾಡಿ, ನಾವು ಇನ್ನೂ ಜಾಥಾದ ಮಾರ್ಗ ಮತ್ತು ಸ್ಥಳಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಜನವರಿ 26 ರಂದು ವಾಹನಗಳು ನಿರ್ದಿಷ್ಟ ಮಾರ್ಗಗಳಲ್ಲಿ ಮಾತ್ರ ಮೆರವಣಿಗೆ ನಡೆಸಿ ಮತ್ತೆ ಗಡಿಗಳಿಗೆ ಹಿಂದಿರುಗಲಿವೆ ಎಂದು ತಿಳಿಸಿದರು.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ದೆಹಲಿ ಪೊಲೀಸರು ರೈತರ ಟ್ರ್ಯಾಕ್ಟರ್ ಜಾಥಾ ರದ್ದುಗೊಳಿಸಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದ್ದರು.