➤ ಮೋದಿಯಿಂದ ಆರ್ಥಿಕತೆ ನಾಶ
ಹೋಸದಿಲ್ಲಿ: ರಾಜ್ಯಗಳಿಗೆ ಜಿ.ಎಸ್.ಟಿ ಪರಿಹಾರ ನೀಡಲು ವಿಫಲವಾಗಿರುವ ಬಿ.ಜೆ.ಪಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯನ್ನು ನಾಶಗೊಳಿಸುತ್ತಿದ್ದಾರೆ ಎಂದು ಕಿಡಿಗಾರಿದ್ದಾರೆ.
ನರೇಂದ್ರ ಮೋದಿಗೆ ರಾಜ್ಯ ಸರಕಾರಗಳಿಗೆ ಪಾವತಿ ಮಾಡಲು ಹಣವಿಲ್ಲ. ಆದರೆ ಕೆಲವು ಬೆರಳಣಿಕೆಯಷ್ಟು ಕಾರ್ಪೊರೇಟ್ ಕಂಪೆನಿಗಳಿಗೆ 1.4 ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ವಿನಾಯಿತಿ ನೀಡಿದ್ದಾರೆ. ಈ ರೀತಿಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
“ಕೇಂದ್ರವು ಜಿ.ಎಸ್.ಟಿ ಆದಾಯವನ್ನು ನೀಡುವ ಭರವಸೆ ನೀಡುತ್ತದೆ. ಪ್ರಧಾನ ಮಂತ್ರಿಗಳು ಮತ್ತು ಕೋವಿಡ್ ನಿಂದಾಗಿ ಆರ್ಥಿಕತೆಯು ನಾಶಗೊಂಡಿದೆ. ಕಾರ್ಪೊರೇಟ್ ಕಂಪೆನಿಗಳಿಗೆ 1.4 ಲಕ್ಷ ತೆರಿಗೆ ವಿನಾಯಿತಿ ನೀಡುತ್ತಾರೆ. ತನಗಾಗಿ 8400 ಕೋಟಿ ರೂಪಾಯಿಗಳ ವಿಮಾನಗಳನ್ನು ಖರೀದಿಸುತ್ತಾರೆ. ಆದರೆ ರಾಜ್ಯಗಳಿಗೆ ಪಾವತಿ ಮಾಡಲು ಕೇಂದ್ರದ ಬಳಿ ಹಣವಿಲ್ಲ. ಹಣಕಾಸಿನ ಮಂತ್ರಿಗಳು ರಾಜ್ಯಗಳಿಗೆ ಸಾಲ ಪಡೆಯುವಂತೆ ಹೇಳುತ್ತಿದ್ದಾರೆ. “ಮೋದಿಗಾಗಿ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನು ಯಾಕೆ ಅಡವಿಡುತ್ತಿದ್ದಾರೆ” ಎಂದು ಅವರು ಕೇಳಿದರು.