Home ಟಾಪ್ ಸುದ್ದಿಗಳು ಮುಖ್ಯಮಂತ್ರಿಗಳೇ ಕನಿಷ್ಠ ಪಕ್ಷ ಚಾಮರಾಜನಗರ ಸಂತ್ರಸ್ತರನ್ನು ಭೇಟಿ ಮಾಡಿ, ಅವರ ಗೋಳು ಕೇಳಿ; ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿಗಳೇ ಕನಿಷ್ಠ ಪಕ್ಷ ಚಾಮರಾಜನಗರ ಸಂತ್ರಸ್ತರನ್ನು ಭೇಟಿ ಮಾಡಿ, ಅವರ ಗೋಳು ಕೇಳಿ; ಡಿ.ಕೆ. ಶಿವಕುಮಾರ್

ಬೆಂಗಳೂರು: ‘ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಠ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.


ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇ ಇದೆ.
ನಿನ್ನೆ ಕೂಡ ಸುಪ್ರೀಂ ಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಚಾಮರಾಜನಗರ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರಕ್ಕೆ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಎಂದು ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ? ಎಂದು ಪ್ರಶ್ನಿಸಿದರು.
ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಎಂದ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲ್ಲ. ಕೊರತೆ ಇದ್ದ ಕಾರಣ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ. ನಾನು ಚಾಮರಾಜನಗರ ನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡಾಗ ಮನಸಿಗೆ ಬಹಳ ಬೇಸರವಾಯಿತು. ರಾಷ್ಟ್ರೀಯ ಮಟ್ಟದ ಶೂಟರ್ ಮಡಿಲಿನಲ್ಲೇ ತಾಯಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಕೆಲವು ಕಡೆ ವೈದ್ಯರು, ನರ್ಸ್ ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಜನರಿಗೆ ಗೊತ್ತಾಗಬಾರದು ಎಂದು ಸತ್ತವರನ್ನು ಅಲ್ಲಿಂದ ಬೆರೆ ಕಡೆಗೆ ಸಾಗಿಸಿದ್ದಾರೆ ಎಂದು ದುರಂತದ ಭೀಕರತೆಯನ್ನು ವಿವರಿಸಿದರು.
36 ಮೃತರ ಪೈಕಿ 80% ರಷ್ಟು ಜನ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು.

ಎಲ್ಲ ವಿಚಾರವನ್ನು ನಾನು ಇಲ್ಲಿ ಮಾತನಾಡುವುದಿಲ್ಲ, ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್ ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ?. ಒಬ್ಬ ಯುವಕನ ದೇಹವನ್ನು ಬೇರೆಯವರಿಗೆ ನಿಮ್ಮ ಕಡೆಯವರು ತೆಗೆದುಕೊಂಡು ಹೋಗಿ ಎಂದು ಬಲವಂತ ಮಾಡಿದ್ದಾರೆ. ಆಮೇಲೆ ಅವರು ನಮ್ಮವರಲ್ಲ ಎಂದು ಮತ್ತೆ ವಾಪಸ್ ತಂದುಕೊಟ್ಟಿದ್ದಾರೆ. ನಂತರ ಆತನನ್ನು ಅವನ ಸ್ನೇಹಿತರು ಗುರುತಿಸಿ, ಆತನ ತಾಯಿಗೆ ಶವ ಹಸ್ತಾಂತರ ಮಾಡಿದ್ದಾರೆ. ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡ ಮತ್ತೊಂದು ಹೆಣ್ಣು ಮಗಳಿಗೆ ಚಿಕ್ಕ ಮಕ್ಕಳು ಹಾಗೂ ಅತ್ತೆ, ಮಾವನ ಜವಾಬ್ದಾರಿ ಇದೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ.
ಸರ್ಕಾರಿ ವೆಬ್ ಸೈಟ್ ನಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ. ಆದರೆ ಸರ್ಕಾರ ಹೇಳುತ್ತಿರುವುದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರ್ಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ?
ಆಸ್ಪತ್ರೆಗೆ ಸೇರುವಾಗಲೂ ಹಣ, ಸತ್ತ ಮೇಲೆ ಹೆಣ ಪಡೆಯಲು ಹಣ. ರಾಜ್ಯಕ್ಕೆ ಇದೇನು ಗ್ರಹಚಾರ ಬಂತು ಮುಖ್ಯಮಂತ್ರಿಗಳೇ? ಆರೋಗ್ಯ ಸಚಿವರೇ? ನಾನು ಮಂತ್ರಿಗಳನ್ನು ಕಳಿಸಿ ಎಂದು ಹೇಳಿದ ನಂತರ ಮಂತ್ರಿಗಳನ್ನು ಕಳಿಸುತ್ತೀರಿ. ಅಲ್ಲಿಯವರೆಗೂ ಯಾರೂ ಹೋಗುವುದಿಲ್ಲ? ದೊಡ್ಡವರು ಸತ್ತರೆ, ಅವರ ಮನೆಗೆ ಹೋಗಿ ನಿಮ್ಮ ಜತೆ ಇದ್ದೇವೆ ಎಂದು ಹೇಳುತ್ತೀರಿ. ಆದರೆ ಬಡವರು ಸತ್ತಾಗ, ಯಾರೂ ಹೋಗಿ ನೋಡುವುದಿಲ್ಲ. ಸರಕಾರಕ್ಕೆ ಜವಾಬ್ದಾರಿ ಬೇಡವೇ? ಇದನ್ನು ಕೇಳುವುದು ತಪ್ಪಾ? ನಾವು ರಾಜಕೀಯ ಮಾಡುತ್ತಿಲ್ಲ, ಅದರ ಅಗತ್ಯವಿಲ್ಲ. ಹೀಗಾಗಿ ಕೋವಿಡ್ ಸಂತ್ರಸ್ತರು, ರೈತರು, ಕಾರ್ಮಿಕರನ್ನು ಭೇಟಿ ಮಾಡಿ, ಅವರಿಗೆ ಕಷ್ಟ ಆಲಿಸಿ, ಪರಿಹಾರ ದೊರಕಿಸಿಕೊಡಲು ನೆರವಾಗುವಂತೆ ನಮ್ಮ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂತ್ರಸ್ತರ ಪರವಾಗಿ ನಾವು ಹೋರಾಟ ಮಾಡಬೇಕಿದೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಇದಕ್ಕಾಗಿ ನಾವು ನಮ್ಮ ಮುಖಂಡರು ಸೇರಿ ಒಂದು ತಿಂಗಳ ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸೂಚನೆ, ದಾಖಲೆ ಕಳುಹಿಸಿಕೊಟ್ಟಿದ್ದೇನೆ.

ಕೋವಿಡ್ ಡೆತ್ ಆಡಿಟ್ ಆಗಿಲ್ಲ. ಅದು ಆಗಬೇಕು. ಸತ್ತಿರುವ ಎಲ್ಲರಿಗೂ ಹೈಕೋರ್ಟ್ ಸೂಚನೆಯಂತೆ ಪರಿಹಾರ ಸಿಗಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಸತ್ತಿರುವ ಎಲ್ಲ 3 ಲಕ್ಷ ಜನರಿಗೂ ಕೋರ್ಟ್ ಆದೇಶದಂತೆ ಪರಿಹಾರ ಸಿಗಬೇಕು. ಇದು ಜನರ ಹಕ್ಕು, ಸರ್ಕಾರದ ಜವಾಬ್ದಾರಿ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಪ್ರತಿ ಮನೆ ಮನೆಗೂ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸೂಚಿಸಲಾಗಿದೆ. ಅವರಿಗೆ ಸಹಾಯ ಹಸ್ತ ನೀಡಬೇಕು, ಅವರಿಂದ ಮಾಹಿತಿ ಪಡೆದು ನಮಗೆ ಕಳುಹಿಸಿಕೊಡಬೇಕು.
ಇದರ ಮೇಲ್ವಿಚಾರಣೆಗೆ ಒಂದೊಂದು ಜಿಲ್ಲೆಗೂ ನಾಯಕರನ್ನು ನೇಮಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸುತ್ತಿದ್ದು, ಅವರು ಅಲ್ಲಿ ಹೋಗಿ ಸಭೆ ಮಾಡಬೇಕು. ಜುಲೈ 7 ರಂದು ಬೆಲೆ ಏರಿಕೆ ವಿರುದ್ಧ ಸೈಕಲ್ ರಾಲಿ ಮಾಡಲಾಗುತ್ತದೆ. ನಂತರ ಕೋವಿಡ್ ವಿಚಾರವಾಗಿ ಸಭೆ ಮಾಡುತ್ತಾರೆ. ನಾನು ನಮ್ಮ ನಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆ ಮಾಡುತ್ತೇವೆ.
ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕ್ರಮ ಅಲ್ಲ. ಇದು ಜನರ ಕಾರ್ಯಕ್ರಮ. ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ರಮ. ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸದಿದ್ದಾಗ, ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.
ಚಾಮರಾಜನಗರ ದುರಂತದಲ್ಲಿ 36 ಮಂದಿ ಸತ್ತಿದ್ದರೂ ಇದರ ಹೊಣೆಯನ್ನು ಯಾರೂ ಹೊತ್ತಿಲ್ಲ. ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಇಷ್ಟು ದೊಡ್ಡ ದುರಂತ ನಡೆದರೂ ಯಾರ ಮೇಲೂ ಕ್ರಮ ಇಲ್ಲ. ಇವರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ ಎಂದರು.


ಈ ವೇಳೆ ಮಾತನಾಡಿದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು,’ಸರ್ಕಾರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಡುತ್ತಿದೆ. ಬೀದರ್ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 557 ಜನ ಸತ್ತಿದ್ದಾರೆ. ಆ ಪಟ್ಟಿ ನನ್ನ ಬಳಿ ಇದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 141 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರು ಹೊರತುಪಡಿಸಿ, ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದು ಕೇವಲ ಬೀದರ್ ಜಿಲ್ಲೆಯ ಲೆಕ್ಕ. ಇಡೀ ರಾಜ್ಯದ ಲೆಕ್ಕ ಪರಿಗಣಿಸಿದರೆ, ನಮ್ಮ ಅಧ್ಯಕ್ಷರು ಹೇಳಿದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

Join Whatsapp
Exit mobile version