Home ಟಾಪ್ ಸುದ್ದಿಗಳು ‘ನಿಮಗೆ ಬಾಗಿಲು ತೆರೆದಿದೆ’ ಎಂದ ಲಾಲು ಯಾದವ್​ಗೆ ನಿತೀಶ್ ಕುಮಾರ್‌ ಹೇಳಿದ್ದೇನು?

‘ನಿಮಗೆ ಬಾಗಿಲು ತೆರೆದಿದೆ’ ಎಂದ ಲಾಲು ಯಾದವ್​ಗೆ ನಿತೀಶ್ ಕುಮಾರ್‌ ಹೇಳಿದ್ದೇನು?

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಇಂಡಿಯಾ ಬಣದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು “ಬಾಗಿಲು ತೆರೆದಿದೆ” ಎಂದು ಹೇಳಿದ್ದರು. ಆದರೆ, ಪ್ರತಿಪಕ್ಷವಾದ ಇಂಡಿಯಾ ಬಣವನ್ನು ಮತ್ತೆ ಸೇರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ನೀವು ಏನು ಹೇಳುತ್ತಿದ್ದೀರಿ? ಎಂದು ನಗುತ್ತಾ ಆ ಪ್ರಶ್ನೆಯನ್ನು ಅಲ್ಲೇ ಮೊಟಕುಗೊಳಿಸಿದ್ದಾರೆ.

“ನಿತೀಶ್ ಕುಮಾರ್‌ಗಾಗಿ ಇಂಡಿಯಾ ಬಣದ ಬಾಗಿಲುಗಳು ತೆರೆದಿವೆ. ನಿತೀಶ್ ಕುಮಾರ್ ಅವರು ತಮ್ಮ ಗೇಟ್‌ಗಳನ್ನು ಸಹ ತೆರೆಯಬೇಕು. ಆಗ ಇಬ್ಬರ ಸಂಚಾರವೂ ಸುಗಮವಾಗಲಿದೆ” ಎಂದು ಲಾಲು ಯಾದವ್ ಹೇಳಿದ್ದರು. ಯಾದವ್ ಅವರ ಹೇಳಿಕೆಯು ಬಿಹಾರದ ರಾಜಕೀಯ ವಲಯಗಳಲ್ಲಿ “ಬಡಾ ಭಾಯಿ, ಚೋಟಾ ಭಾಯಿ” ಎಂದು ಕರೆಯಲ್ಪಡುವ ಇಬ್ಬರು ಹಿರಿಯ ನಾಯಕರ ನಡುವೆ ಮತ್ತೊಂದು ಮೈತ್ರಿಯ ಸಾಧ್ಯತೆಯ ಬಗ್ಗೆ ಬಿಹಾರದಲ್ಲಿ ಊಹಾಪೋಹಗಳಿಗೆ ಉತ್ತೇಜನ ನೀಡಿತ್ತು.

ನೂತನ ರಾಜ್ಯಪಾಲರ ಪ್ರಮಾಣ ವಚನ ಕಾರರ್ಯಕ್ರಮದ ವೇಳೆ, ಲಾಲು ಪ್ರಸಾದ್‌ ಆಫರ್‌ ಕುರಿತ ಮಾಧ್ಯಮಗಳ ಪ್ರಶ್ನೆಗೆ ನಿತೀಶ್‌, “ನೀವೇನು ಹೇಳುತ್ತಿದ್ದೀರಿ..” ಎಂದು ಪ್ರತಿಕ್ರಿಯಿಸುವ ಮೂಲಕ ತಮಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸಿದರು. ಕೈ ಮುಗಿಯುತ್ತಾ ನಗುತ್ತಲೇ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲು ಇದೇ ವೇಳೆ ನಿತೀಶ್‌ ಕುಮಾರ್‌ ನಿರಾಕರಿಸಿದರು.

ಕಳೆದ ವರ್ಷ ಇಂಡಿಯಾ ಬಣವನ್ನು ಅದರ ರಚನೆಯ ನೇತೃತ್ವದ ನಂತರ ತೊರೆದಿದ್ದ ನಿತೀಶ್ ಕುಮಾರ್ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರ್ಪಡೆಗೊಂಡರು.

Join Whatsapp
Exit mobile version