Home ರಾಷ್ಟ್ರೀಯ ನಾಳೆ ‘ರೈತ ಮಹಿಳಾ ದಿನ’ ಆಚರಣೆ; ಜಾಥಾ ನಡೆಸಲಿರುವ ನಾರಿಯರು

ನಾಳೆ ‘ರೈತ ಮಹಿಳಾ ದಿನ’ ಆಚರಣೆ; ಜಾಥಾ ನಡೆಸಲಿರುವ ನಾರಿಯರು

ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ದೇಶದ ವಿವಿಧ ಮಹಿಳಾ ರೈತ ಸಂಘಟನೆಗಳು ಸೇರಿ ಜನವರಿ 18 ಅನ್ನು ರೈತ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿವೆ.
ಸಾಮಾನ್ಯವಾಗಿ ಅಕ್ಟೋಬರ್ 15 ಅನ್ನು ಪ್ರತಿವರ್ಷ ರೈತ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬಿರುಸು ನೀಡುವ ಹಿನ್ನೆಲೆಯಲ್ಲಿ ಸೋಮವಾರ ಜಾಥಾ ನಡೆಸುವ ಮೂಲಕ ರೈತ ಮಹಿಳಾ ದಿನವನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.
ಕಳೆದ 52 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿಯೂ ಮಹಿಳಾ ರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಜನವರಿ 26 ರಂದು ನಡೆಯಲಿರುವ ಟ್ರ್ಯಾಕ್ಟರ್ ಪರೇಡ್ ನಲ್ಲಿಯೂ ರೈತ ಮಹಿಳೆಯರು ಟ್ರ್ಯಾಕ್ಟರ್ ಪರೇಡ್ ನಡೆಸಲು ಸಜ್ಜಾಗುತ್ತಿದ್ದಾರೆ.
ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದು, ಸಾಲ ಮನ್ನಾ, ಆರೋಗ್ಯ ಸೇವೆಗಳು, ಕಿರು ಬಂಡವಾಳ ಸಂಸ್ಥೆಗಳ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತ ಹೋರಾಟಕ್ಕೆ ಬೆಂಬಲ ಸೂಚಿಸುವುದು ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ಜಾಥಾ ನಡೆಸಲಿದ್ದಾರೆ.
ಜಾಥಾದಲ್ಲಿ ಭಾರತೀಯ ಮಹಿಳಾ ಒಕ್ಕೂಟ (ಎನ್ ಎಫ್ ಐಡಬ್ಯೂ), ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ (ಎಐಡಿಡಬ್ಲ್ಯೂಎ), ಅಖಿಲ ಭಾರತ ಮಹಿಳಾ ಪ್ರಗತಿಶೀಲ ಸಂಘ (ಎಐಪಿಡಬ್ಲ್ಯೂಎ) ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಭಾಗವಹಿಸುತ್ತಿವೆ.
ಎಐಡಿಡಬ್ಲ್ಯೂಎ ಅಧ್ಯಕ್ಷರಾದ ಮರಿಯಂ ದವಾಲೆ, ’ನಾವು ದೇಶಾದ್ಯಂತ ಪ್ರತಿಭಟನೆಯನ್ನು ಆಯೋಜಸುತ್ತಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿದ್ದು, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಿಳಾ ಪ್ರತಿಭಟನಕಾರರು ರಾಜಭವನದತ್ತ ಮೆರವಣಿಗೆ ನಡೆಸಲಿದ್ದಾರೆ’ ಎಂದಿದ್ದಾರೆ.

ಅಖಿಲ ಭಾರತ ಕಿಸಾನ್‌ ಸಭಾದ (ಎಐಕೆಎಸ್) ಅಧ್ಯಕ್ಷರಾದ ಅಶೋಕ್‌ ದವಾಲೆ ಮಾತನಾಡಿ ’ನಾಳೆ ನಡೆಯಲಿರುವ ಜಾಥದಲ್ಲಿ ಪುರುಷರು ಮತ್ತು ಮಹಿಳೆಯರೆಲ್ಲರೂ ಭಾವಹಿಸಲಿದ್ದು, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಲಿದ್ದಾರೆ’ ಎಂದರು.

Join Whatsapp
Exit mobile version