Home ಅಂಕಣಗಳು ಗೋ ಹತ್ಯೆ ನಿಷೇಧ ರೈತಾಪಿಗಳ ಮರಣ ಶಾಸನ

ಗೋ ಹತ್ಯೆ ನಿಷೇಧ ರೈತಾಪಿಗಳ ಮರಣ ಶಾಸನ

-ನಾ.ದಿವಾಕರ

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ವೈದಿಕ ಆಧಿಪತ್ಯ ಮತ್ತು ಬ್ರಾಹ್ಮಣ್ಯದ ಪ್ರಾಧಾನ್ಯತೆಗೆ ಮೂಲ ನೆಲೆ ಇರುವುದೇ ಆಹಾರ ಪದ್ಧತಿಯಲ್ಲಿ. ಮಾನವನ ಸಾತ್ವಿಕತೆ, ತಾತ್ವಿಕತೆ, ರಜೋಗುಣ, ತಮೋಗುಣಗಳಿಗೆ ಅವನ ಆಹಾರ ಪದ್ಧತಿಯೇ ಕಾರಣ ಎಂಬ ನಂಬಿಕೆ ಈ ದೇಶದಲ್ಲಿ ಪರಂಪರಾನುಗತವಾಗಿ ಬಂದಿದೆ. ಪುರಾಣ ಕಥನಗಳಲ್ಲೂ ಸಹ, ಜಾತಿ ಸ್ಪರ್ಶ ಇಲ್ಲದೇ ಹೋದರೂ ದೇವಾಸುರರ ಸಂಘರ್ಷದಲ್ಲಿ ಆಹಾರ ಪದ್ಧತಿಯೂ ಒಂದು ಅಂಗವಾಗಿ ಬರುವುದನ್ನು ಕಾಣಬಹುದು. ಕೆಲವು ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸಿದರೆ ಮಾತ್ರವೇ ಮಾನವನಲ್ಲಿ ಸಾತ್ವಿಕತೆ ಬೆಳೆಯುತ್ತದೆ ಎಂಬ ನಂಬಿಕೆ ವೈದಿಕ ಪರಂಪರೆಗೆ ಬುನಾದಿಯಾದರೆ, ಮಾಂಸಾಹಾರ ಸೇವನೆಯಿಂದ ಕ್ರೌರ್ಯ ಹೆಚ್ಚಾಗುತ್ತದೆ ಎಂಬ ಪ್ರತೀತಿ ಮತ್ತು ಗಾಢ ನಂಬಿಕೆ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬುನಾದಿಯಾಗಿದೆ.

ಹಾಗಾಗಿಯೇ 21ನೆಯ ಶತಮಾನದ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಭಾರತದ ಸುಶಿಕ್ಷಿತ ಸಮಾಜದಲ್ಲಿ ಅಗ್ರಹಾರ ಸಂಸ್ಕೃತಿ ಆಹಾರ ಸೇವನೆಯ ಚೌಕಟ್ಟಿನಲ್ಲಿ ಭದ್ರವಾಗಿ ನೆಲೆಯೂರಿದೆ. ಭಾರತದ ಯಾವುದೇ ನಗರದಲ್ಲಿ ಒಬ್ಬ ವ್ಯಕ್ತಿಯ ಅಸ್ಮಿತೆಗೂ ಅವನ/ಅವರ ಆಹಾರ ಸಂಸ್ಕೃತಿ ಭೂಮಿಕೆಯಾಗುವುದನ್ನೂ ಕಾಣುತ್ತಿದ್ದೇವೆ. ”ನೀವು ಯಾವ ಜಾತಿ ಅಥವಾ ಯಾವ ಜನ” ಎಂದು ಕೇಳುವುದಿಲ್ಲ. ಮನುಷ್ಯನನ್ನು ಜಾತಿ ಆಧಾರದ ಮೇಲೆ ಗುರುತಿಸಬಾರದು ಎಂಬ ಪ್ರಜ್ಞೆ ಅಥವಾ ಮನೋಭಾವ ಇದಕ್ಕೆ ಕಾರಣವಲ್ಲ. ಕಾನೂನಿನ ಭಯ ಅಷ್ಟೆ. ಆದರೂ ”ನೀವು ವೆಜ್ಜಾ ನಾನ್ ವೆಜ್ಜಾ” ಎಂಬ ಪ್ರಶ್ನೆ ರಿಂಗಣಿಸಿದಾಗ ಇದೇ ಅಸ್ಮಿತೆಯ ಪ್ರಶ್ನೆ ಉದ್ಭವಿಸುತ್ತದೆ. ವೈದಿಕ ಮನೋಭಾವದಿಂದ ಹೊರತಾಗಿ ನೋಡಿದರೂ ಕೆಲವು ಪ್ರಾಣಿಗಳ ಮಾಂಸ ತಿನ್ನುವವರು ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾರೆ. ಅವಕೃಪೆಗೊಳಗಾಗುವುದೂ ಉಂಟು. ಗೋಮಾಂಸ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ದಾದ್ರಿ ಘಟನೆ, ಅಕ್ಲಾಖ್‌ ನ ಹತ್ಯೆ ಒಂದು ನಿದರ್ಶನ.

2015ರಲ್ಲಿ ಈ ಘಟನೆಯಲ್ಲಿ 52 ವರ್ಷದ ಮುಹಮ್ಮದ್ ಅಕ್ಲಾಖ್ ಎಂಬ ವ್ಯಕ್ತಿ ತನ್ನ ಮನೆಯಲ್ಲಿ ಗೋಮಾಂಸವನ್ನು ಇಟ್ಟಿದ್ದ ಎಂಬ ಕಾರಣಕ್ಕೆ ಆತನ ಮನೆಯ ಮೇಲೆ ಹತ್ತಾರು ಜನ ಆಕ್ರಮಣ ನಡೆಸಿ ಅಕ್ಲಾಖ್ ನನ್ನು ಕೊಲೆ ಮಾಡಿದ್ದರು. ಸತ್ತ ಅಕ್ಲಾಖ್ ಮತ್ತು ಗಾಯಗೊಂಡ ಆತನ ಮಗನ ವಿರುದ್ಧ ಗೋಮಾಂಸ ಶೇಖರಣೆ ಮತ್ತು ಗೋ ಹತ್ಯೆಯ ಆರೋಪ ಹೊರಿಸಿ ಎಫ್‌.ಐ.ಆರ್ ದಾಖಲಾಗಿತ್ತು. ಸತ್ತ ವ್ಯಕ್ತಿಯ ವಿರುದ್ಧ ಎಫ್‌.ಐ.ಆರ್ ಸಲ್ಲಿಸುವ ಪರಂಪರೆಗೆ ಅಗೋಚರ ಗೋವು ಮತ್ತು ಸತ್ತ ವ್ಯಕ್ತಿಯ ಆಹಾರ ಸಾಕ್ಷಿಯಾಗಿತ್ತು. ಈ ಘಟನೆಯಲ್ಲಿ ಬಂಧನಕ್ಕೊಳಗಾದ 18 ಜನರ ಪೈಕಿ 17 ಆರೋಪಿಗಳಿಗೆ ಜಾಮೀನು ದೊರೆತಿದೆ. ಒಬ್ಬ ಮೃತಪಟ್ಟಿದ್ದಾನೆ. ಐದು ವರ್ಷ ಕಳೆದರೂ ಪ್ರಕರಣ ಇತ್ಯರ್ಥವಾಗಿಲ್ಲ. ಈ ಪ್ರಕರಣ ನೆನಪಾಗುವ ಕಾರಣ ಎಂದರೆ ಇನ್ನು ಮುಂದೆ ಕರ್ನಾಟಕದಲ್ಲೂ ಅಖ್ಲಾಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಏಕೆಂದರೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ.

ಆಹಾರಕ್ಕಾಗಿ ಅಪರಾಧ ಮಾಡುವುದು ಸಾಮಾನ್ಯ ವಿದ್ಯಮಾನ, ಆದರೆ ತಿನ್ನುವ ಆಹಾರವೇ ಅಪರಾಧದ ಸಂಕೇತವಾಗುವುದು ಒಂದು ನಿರ್ದಯಿ, ಅಮಾನುಷ, ಅನಾಗರಿಕ ಸಮಾಜದಲ್ಲಿ ಮಾತ್ರ ಸಾಧ್ಯ. ದುರದೃಷ್ಟವಶಾತ್ ಭಾರತ ಈ ಸ್ಥಿತಿಗೆ ತಲುಪಿದೆ. ಭಾರತದಲ್ಲಿ ಪಾರಂಪರಿಕವಾಗಿ ಗೋವು ಒಂದು ಪವಿತ್ರ ಪ್ರಾಣಿ ಎಂದೇ ಪೂಜಿಸಲ್ಪಡುತ್ತದೆ. ಆದರೆ ಗೋ ಸಾಕಾಣಿಕೆ ಪೂಜನೀಯವಾಗಿ ಕಾಣುವುದಿಲ್ಲ. ವೈದಿಕ ಸಂಪ್ರದಾಯದ ಆಚರಣೆಗಳಲ್ಲಿ ಮತ್ತು ಕೆಲವು ಧಾರ್ಮಿಕ ಆಚರಣೆಗಳಲ್ಲಿ ಗೋವು ಪೂಜಿಸಲ್ಪಡುತ್ತದೆ, ಗೋವಿನ ಈ ಪಾವಿತ್ರತೆ ಅಥವಾ ಪೂಜನೀಯ ಸ್ಥಾನಮಾನ ಎಂದಿಗೂ ಪ್ರಶ್ನಾರ್ಹವಾಗಿಲ್ಲ.

ಅದೇ ರೀತಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ, ವಿವಿಧ ಸಮುದಾಯಗಳ ನಡುವೆ ಗೋ ಮಾಂಸ ಸೇವನೆ ಇತರ ಮಾಂಸಾಹಾರದಂತೆಯೇ ಸ್ವೀಕೃತವಾಗಿದೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ, ಕೇರಳದಲ್ಲಿ ಮತ್ತು ದಲಿತ ಸಮುದಾಯಗಳಲ್ಲಿ ಗೋಮಾಂಸ ಸೇವನೆ ಒಂದು ಆಹಾರ ಪದ್ಧತಿಯಂತೆಯೇ ನಡೆದುಬಂದಿದೆ .ಮುಸಲ್ಮಾನರಲ್ಲೂ ಸಹ ಗೋಮಾಂಸ ಖಾದ್ಯಗಳು ಬಳಕೆಯಲ್ಲಿವೆ. ಇದು ಶತಮಾನಗಳಿಂದ ನಡೆದುಬಂದಿರುವ ಒಂದು ಆಹಾರ ಪದ್ಧತಿಯಾಗಿದೆ. ಗೋವುಗಳ ತಳಿಗಳು ಹೆಚ್ಚಾಗಿವೆ ಆದರೆ ಗೋವಿನ ಸ್ವರೂಪ ಬದಲಾಗಿಲ್ಲ. ಆದರೆ ಗೋಮಾಂಸ ಸೇವನೆ ಕಳೆದ ಎರಡು ಮೂರು ದಶಕಗಳಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಪರಿಣಾಮ, ಗೋ ಹತ್ಯೆ ಅಧಿಕಾರ ರಾಜಕಾರಣದ ಒಂದು ಅಸ್ತ್ರವಾಗಿ ಪರಿಣಮಿಸಿದೆ.

ಈ ತಾತ್ವಿಕ ಹಿನ್ನೆಲೆಯಲ್ಲೇ ಸಂಘಪರಿವಾರ ಮತ್ತು ಬಿಜೆಪಿ ಗೋಹತ್ಯೆ ನಿಷೇಧವನ್ನು ರಾಮಮಂದಿರದಂತೆಯೇ ಒಂದು ಪ್ರಮುಖ ಬೇಡಿಕೆಯಂತೆ ಪರಿಗಣಿಸಿದ್ದು, ಇಡೀ ದೇಶದಲ್ಲಿ ಗೋ ಹತ್ಯೆ ನಿಷೇಧಿಸಲು ಪ್ರಚಾರ ನಡೆಸುತ್ತಲೇ ಇದೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಬಿಜೆಪಿಯ ಇತ್ತೀಚಿನ ಸಂಸದೀಯ ಪರಂಪರೆಗೆ ಅನುಗುಣವಾಗಿ ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಕರ್ನಾಟಕ ಗೋ ಹತ್ಯಾ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಕ ವಿಧೇಯಕವನ್ನು ಅನುಮೋದಿಸಲಾಗಿದೆ. ಗೋವುಗಳ ಸಾಲಿಗೆ ಎಮ್ಮೆ ಮತ್ತು ಕೋಣಗಳನ್ನೂ ಸೇರಿಸಲಾಗಿದೆ. ವಿಧಾನಮಂಡಲದಲ್ಲಿ ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿರುವುದರಿಂದ ಸರಕಾರ ಮತ್ತೊಮ್ಮೆ ಸುಗ್ರೀವಾಜ್ಞೆಯ ಮೊರೆ ಹೋಗಿದೆ.

 ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳಿಂದ ಒಂದು ಸಮುದಾಯ ಅಥವಾ ಗುಂಪು ಅಥವಾ ಪ್ರದೇಶ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವುದಾದರೆ ಅಂತಹ ಶಾಸನಗಳನ್ನು ಸಭೆಯಲ್ಲಿ ವಿಸ್ತೃತ ಚರ್ಚೆಗೊಳಪಡಿಸಿದ ನಂತರವಷ್ಟೇ ಅಂಗೀಕರಿಸಬೇಕು ಎನ್ನುವ ಸಂಸದೀಯ ನಿಯಮ ಇರುವುದನ್ನೇ ಯಡಿಯೂರಪ್ಪ ಸರಕಾರ ಮರೆತಂತಿದೆ. ಬಿಜೆಪಿ ಅಥವಾ ಸಂಘಪರಿವಾರ ಎಣಿಸಿದಂತೆ ಈ ಕಾಯ್ದೆಯ ವಿರುದ್ಧ ಉಗ್ರ ಹೋರಾಟಗಳೇನೂ ನಡೆಯುವುದಿಲ್ಲ. ತಾತ್ವಿಕ ನೆಲೆಯಲ್ಲಿ, ಸಮಾಜೋ ಆರ್ಥಿಕ ನೆಲೆಯಲ್ಲಿ ಪ್ರತಿರೋಧ ವ್ಯಕ್ತವಾಗಬಹುದು. ಆದರೆ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಜಾರಿಗೊಳಿಸಿರುವ ಈ ಕಾಯ್ದೆ ಅಖ್ಲಾಕ್ ಪ್ರಕರಣದಂತಹ ಘಟನೆಗಳಿಗೆ ನಾಂದಿ ಹಾಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಹಸು, ಕರು, ಎಮ್ಮೆ, ಎತ್ತು ಮತ್ತು ಕೋಣ ಇವಿಷ್ಟನ್ನೂ ಈ ಕಾಯ್ದೆಯ ವ್ಯಾಪ್ತಿಗೊಳಪಡುವ ಜಾನುವಾರುಗಳೆಂದು ಗುರುತಿಸಲಾಗಿದ್ದು, 13 ವರ್ಷದ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಲು ಅವಕಾಶ ನೀಡಲಾಗಿದೆ. ಗೋ ಹತ್ಯೆ ಮಾಡಿದವರಿಗೆ ಕನಿಷ್ಟ 3 ವರ್ಷ ಮತ್ತು ಗರಿಷ್ಟ 7 ವರ್ಷಗಳ ಜೈಲು ವಾಸದ ಶಿಕ್ಷೆಯನ್ನು ನಿಗದಿಪಡಿಸಲಾಗಿದ್ದು, ಒಂದು ಜಾನುವಾರು ಹತ್ಯೆಗೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ ಮತ್ತು ಎರಡಕ್ಕಿಂತ ಹೆಚ್ಚು ಜಾನುವಾರು ಹತ್ಯೆಗೆ 1ರಿಂದ 10 ಲಕ್ಷ ರೂ. ದಂಡ ಮತ್ತು ಏಳು ವರ್ಷ ಸೆರೆವಾಸದ ಶಿಕ್ಷೆ ನಿಗದಿಪಡಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ದರ್ಜೆಗಿಂತಲೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗೆ ಜಪ್ತಿ ಮತ್ತು ಶೋಧದ ಅಧಿಕಾರ ನೀಡಲಾಗಿದ್ದು ವಿಶೇಷ ಜಿಲ್ಲಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ವಶಪಡಿಸಿಕೊಂಡ ಗೋವುಗಳನ್ನು ಆರೋಪಿಗೆ ಹಿಂದಿರುಗಿಸದೆ ಹರಾಜು ಮಾಡಲು ಅವಕಾಶ ನೀಡಲಾಗಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ಪರಿಗಣಿಸಿ ವಶಪಡಿಸಿಕೊಂಡ ಗೋಮಾಂಸವನ್ನು ನಾಶಪಡಿಸಲು ಅನುಮತಿ ನೀಡಲಾಗಿದೆ. ಆರೋಪ ಸಾಬೀತಾದರೆ ಜಾನುವಾರು, ಅದನ್ನು ಕಟ್ಟಿಹಾಕಿದ ಜಾಗ ಮತ್ತು ಸಾಗಿಸುವ ವಾಹನ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಇವೆಲ್ಲವನ್ನೂ ಮೀರಿದ ನಿಯಮ ಎಂದರೆ ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವಂತಿಲ್ಲ.

 ಇಲ್ಲಿ ಅಖ್ಲಾಕ್ ನೆನಪಾಗುತ್ತಾನೆ. ಕೇವಲ ಚರ್ಚ್ ಮೇಲೆ ಆಕ್ರಮಣ ನಡೆಸಲು, ಮುಸ್ಲಿಮರ ವಿರುದ್ಧ ದ್ವೇಷ ಪ್ರಚಾರ ಮಾಡಲು ಬಳಕೆಯಾಗುತ್ತಿದ್ದ ಸಾಂಸ್ಕೃತಿಕ ಆರಕ್ಷಕರು ಇನ್ನು ಮುಂದೆ ಸಮವಸ್ತ್ರವಿಲ್ಲದ, ಕಾನೂನು ವ್ಯಾಪ್ತಿಗೊಳಪಡದ, ನ್ಯಾಯಿಕ ಪ್ರಕ್ರಿಯೆಯಿಂದ ಹೊರತಾದ ಅನಧಿಕತ ಪೊಲೀಸ್ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸಂತೆಯಲ್ಲಿ ಖರೀದಿಸಿದ ಅಥವಾ ಸಂತೆಗೆ ಸಾಗಿಸುವ ಗೋವುಗಳನ್ನು ಸಾಗಿಸುವ ವಾಹನಗಳಲ್ಲಿ ಮುಸ್ಲಿಮ್ ಚಾಲಕನಿದ್ದರೆ ಈ ಮತಾಂಧರ ಹಲ್ಲೆಗೊಳಗಾಗುತ್ತಾನೆ. ಎಮ್ಮೆ ಮತ್ತು ಕೋಣಗಳ ಜನನ ಪ್ರಮಾಣ ಪತ್ರ ಇಟ್ಟುಕೊಂಡೇ ಮಾರಾಟದ ಸಂತೆಗೆ ಕರೆದೊಯ್ಯಬೇಕಾಗುತ್ತದೆ. ಈ ಜನನ ಪ್ರಮಾಣ ಪತ್ರವನ್ನು ನೀಡುವ ಪಶುವೈದ್ಯರು ಅಥವಾ ಅಧಿಕಾರಿಗಳು ಪ್ರಾಮಾಣಿಕರಾಗಿರುವಂತೆ ಎಚ್ಚರವಹಿಸಬೇಕಾಗುತ್ತದೆ.

ಈ ಹೊಸ ಕಾಯ್ದೆಯ ವತಿಯಿಂದ ಗೋವಿನ ಸಾಕಾಣಿಕೆಯೂ ದುರ್ಭರವಾಗುತ್ತದೆ, ಸಾಗಾಣಿಕೆಯೂ ದುರ್ಭರವಾಗುತ್ತದೆ. ಯಾವ ಗೋವನ್ನು ಉಳುಮೆಗೆ ಕರೆದೊಯ್ಯಲಾಗುತ್ತಿದೆ, ಯಾವುದನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಾಗುತ್ತಿದೆ ಎನ್ನುವುದನ್ನು ನಿರ್ಧರಿಸಲು ಯಾವುದೇ ಸಾಂಸ್ಥಿಕ ಆಡಳಿತ ಯಂತ್ರ ಇರುವುದಿಲ್ಲ. ಸಹಜವಾಗಿ ಹಳ್ಳಿಯಿಂದ ಹಳ್ಳಿಗೆ ಅಥವಾ ಪಟ್ಟಣಗಳಿಗೆ ರವಾನೆಯಾಗುವ ಗೋವುಗಳು, ವಾಹನಗಳು ಮತ್ತು ವಾಹನಚಾಲಕರು ಸಾಂಸ್ಕೃತಿಕ ಆರಕ್ಷಕರಿಂದ ಹಲ್ಲೆಗೊಳಗಾಗುತ್ತಾರೆ. ಇದು ದಿನನಿತ್ಯ ಸಂಭವಿಸಬಹುದಾದ ಘಟನೆಗಳಾಗಿ ಬಿಡುತ್ತವೆ. ಈ ಕಾಯ್ದೆಯ ಮೂಲ ಉದ್ದೇಶವೇ ಸಂದೇಹಾಸ್ಪದವಾಗಿದ್ದು, ಒಂದು ನಿರ್ದಿಷ್ಟ ಸಮುದಾಯವನ್ನು ಪ್ರತ್ಯೇಕೀಕರಿಸಲು ಉದ್ದೇಶಿಸಿರುವುದರಿಂದ ಮತಾಂಧರಿಗೆ ಮುಕ್ತ ಅವಕಾಶ ನೀಡಿದಂತಾಗುತ್ತದೆ.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಹೈನುಗಾರಿಕೆಯನ್ನೇ ನಂಬಿ ಬದುಕುವವರೂ ಸಹ ಹಾಲು ನೀಡದ ಹಸುಗಳನ್ನು ಸಾಕಲು ಸಾಧ್ಯವಾಗುವುದಿಲ್ಲ. ಹಾಲು ನೀಡುವ ಹಸುಗಳಿಗೇ ಮೇವು ಉಣಿಸಲಾರದೆ ಬೀದಿಗಳಲ್ಲಿ ಸಿಕ್ಕಿದ್ದನ್ನು ತಿನ್ನಲು ಬಿಡುವ ಒಂದು ಪದ್ಧತಿಯನ್ನು ನಗರಗಳಲ್ಲಿ ಪಟ್ಟಣಗಳಲ್ಲಿ ನೋಡುತ್ತಿದ್ದೇವೆ. ಉತ್ಪಾದಕೀಯತೆಯನ್ನು ಕಳೆದುಕೊಂಡ ಹಸು, ಎತ್ತು ರೈತರ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತದೆ. ಸಾಕಿದ ಹಸುಗಳು ಹಾಕುವ ಎಲ್ಲ ಕರುಗಳನ್ನೂ ಸಲಹುವ ಆರ್ಥಿಕ ಸಾಮರ್ಥ್ಯವೂ ಎಷ್ಟೋ ರೈತರಲ್ಲಿ ಇರುವುದಿಲ್ಲ. ಇಂಥವರು ಇದನ್ನು ಮಾರಾಟ ಮಾಡುತ್ತಾರೆ. ಕೊಳ್ಳುವವರು ವಧೆ ಮಾಡಲೆಂದೇ ಕೊಳ್ಳದೆ ಹೋದರೂ ಗೋರಕ್ಷಕರ ಕೈಗೆ ಸಿಕ್ಕಿದರೆ ಪೊಲೀಸ್ ಠಾಣೆಗೆ ಅಲೆದಾಡಬೇಕಾಗುತ್ತದೆ. 13 ವರ್ಷ ತುಂಬಿದ ಎಮ್ಮೆ ಮತ್ತು ಕೋಣಗಳ ವಯಸ್ಸನ್ನು ನಿಖರವಾಗಿ ಯಾರು ದಾಖಲು ಮಾಡಲು ಸಾಧ್ಯ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಸಾಮಾನ್ಯವಾಗಿ ಗೋರಕ್ಷಕರಲ್ಲಿ ಜಾನುವಾರುಗಳ ಬಗ್ಗೆ ಜ್ಞಾನ ಇರುವುದು ಕಡಿಮೆ. ಅವರಿಗೆ ಅದೊಂದು ಪವಿತ್ರ ಪ್ರಾಣಿಯಾಗಿ, ಸಾಂಸ್ಕೃತಿಕ ಲಾಂಛನವಾಗಿ, ರಾಜಕೀಯ ಚಿಹ್ನೆಯಾಗಿ ಮಾತ್ರವೇ ಕಾಣುತ್ತದೆ. ಹಾಗಾಗಿ ವಯಸ್ಸಾದ ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ರೈತರು ಬಹಳ ಎಚ್ಚರದಿಂದಿರಬೇಕಾಗುತ್ತದೆ.

ಭಾರತದಲ್ಲಿ ಕಾನೂನುಗಳ ಅನುಷ್ಠಾನದಲ್ಲಿ ಸಾಮಾನ್ಯವಾಗಿ ಕಂಡುಬರುವ ವ್ಯತ್ಯಯಗಳು ಮತ್ತು ಅವಿವೇಕಿ ಧೋರಣೆಗಳು ಇಲ್ಲಿ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಏಕೆಂದರೆ ಇದು ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಜೀವನ ನಿರ್ವಹಣೆಯ ಪ್ರಶ್ನೆಯಾಗಿ ಬಿಡುತ್ತದೆ. ಬಂಧನಕ್ಕೊಳಗಾಗಬಹುದಾದ ವಾಹನ ಚಾಲಕ, ವಾಹನದ ಮಾಲೀಕ ಮತ್ತು ಅವರ ಕುಟುಂಬಗಳು ಅಪಾಯದ ತೂಗುಗತ್ತಿಯ ಅಡಿಯಲ್ಲೇ ಬದುಕಬೇಕಾಗುತ್ತದೆ. ವಾಹನವನ್ನೂ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಒಂದು ಕುಟುಂಬದ ಆದಾಯಕ್ಕೂ ಪೆಟ್ಟು ಬೀಳುತ್ತದೆ. ಇದು ಈಗಾಗಲೇ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳು ಎನ್ನುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

 ತನ್ನ ನಿತ್ಯ ಜೀವನಕ್ಕೆ ಅವಶ್ಯವಾದಷ್ಟು ಮಾತ್ರ ವ್ಯವಸಾಯ ಮಾಡುವ ಸಣ್ಣ ರೈತರೇ ಭಾರತದಲ್ಲಿ, ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಎಕರೆಗಿಂತಲೂ ಕಡಿಮೆ ಭೂಮಿ ಇರುವ ರೈತನು ಹೈನುಗಾರಿಕೆಯ ಮೂಲಕ ಜೀವನ ನಡೆಸುತ್ತಾನೆ. ಇಂತಹ ರೈತರಿಗೆ ಮುದಿ ಎತ್ತುಗಳನ್ನು, ವಯಸ್ಸಾದ ಹಸುಗಳನ್ನು ಸಾಕುವುದೇ ಹೊರೆಯಾಗುತ್ತದೆ. ಕರುಗಳನ್ನು ಸಾಕುವುದೂ ಇವರಿಗೆ ಹೊರೆಯಾಗುತ್ತದೆ. ಮೇವು ಒದಗಿಸಲು ಸಾಧ್ಯವಾಗುವುದಿಲ್ಲ. ಇವುಗಳನ್ನು ಮಾರಾಟ ಮಾಡಲೂ ನೂತನ ಕಾನೂನಿನಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ನಗರಗಳಲ್ಲಿ ಮಾಡಿದಂತೆ ಹಳ್ಳಿಗಳಲ್ಲಿ ವಯಸ್ಸಾದ ಹಸು ಮತ್ತು ಎತ್ತುಗಳನ್ನು ಬೀದಿಗೆ ಬಿಡಲಾಗುವುದಿಲ್ಲ. ಅವು ಹೊಲಗದ್ದೆಗಳನ್ನು ಪ್ರವೇಶಿಸಿ ಬೆಳೆಯನ್ನು ಧ್ವಂಸ ಮಾಡುತ್ತವೆ. ಇದು ಪಟ್ಟಣಗಳಿಂದ ದೂರದಲ್ಲಿರುವ ಗ್ರಾಮೀಣ ಪ್ರದೇಶಗಳ ರೈತರ ಪಾಲಿಗೆ ಮರಣಶಾಸನವಾಗುತ್ತದೆ.

ಭಾರತದ ಮಟ್ಟಿಗೆ ಹೇಳುವುದಾದರೆ, ಪ್ರತಿವರ್ಷ 3.4 ಕೋಟಿ ಗಂಡುಕರುಗಳು ಜನಿಸುತ್ತವೆ. ಈಗಿರುವ ಹಾಲು ನೀಡುವ ಹಸುಗಳ ಪ್ರಮಾಣವನ್ನೇ ಕಾಪಾಡಿಕೊಳ್ಳಬೇಕಾದರೆ ವರ್ಷಕ್ಕೆ ಇಷ್ಟು ಸಂಖ್ಯೆಯ ಗಂಡುಕರುಗಳು ಬೇಕಾಗುತ್ತವೆ. ಈ ಗಂಡು ಕರುಗಳನ್ನು, ಎತ್ತುಗಳನ್ನು ವಧೆ ಮಾಡುವುದನ್ನು ನಿಷೇಧಿಸಿದರೆ, ಹತ್ತು ವರ್ಷದಲ್ಲಿ ದೇಶದಲ್ಲಿ 34 ಕೋಟಿ ಎತ್ತುಗಳು ಇರುತ್ತವೆ. ಇದರೊಟ್ಟಿಗೆ ಹಸುಗಳ ಮಾರಾಟವನ್ನೂ ನಿಷೇಧಿಸುವುದರಿಂದ ವರ್ಷಕ್ಕೆ ಆರು ಕೋಟಿ ಹಾಲು ನೀಡದ ಅನುತ್ಪಾದಕ ಹಸುಗಳು ಉಳಿದುಕೊಳ್ಳುತ್ತವೆ. ಈ ರೀತಿ ಉಳಿದುಕೊಳ್ಳುವ ಕನಿಷ್ಟ 30 ಕೋಟಿ ಜಾನುವಾರುಗಳನ್ನು ಸಾಕಾಣಿಕೆ ಮಾಡಲು ಐದು ಲಕ್ಷ ಎಕರೆ ಭೂಮಿ, ಕೊಟ್ಟಿಗೆಗಳ ನಿರ್ಮಾಣಕ್ಕೆ ಹತ್ತು ಲಕ್ಷ ಕೋಟಿ ರೂಗಳ ಬಂಡವಾಳ ಬೇಕಾಗುವುದೇ ಅಲ್ಲದೆ ವೈದ್ಯಕೀಯ ಸೇವೆ ಮತ್ತು ಪಶು ಆಹಾರ ಒದಗಿಸಲು ವರ್ಷಕ್ಕೆ 5 ಲಕ್ಷ 40 ಸಾವಿರ ಕೋಟಿ ರೂ. ಬೇಕಾಗುತ್ತದೆ. 70 ಸಾವಿರ ಕೋಟಿ ಟನ್ ಮೇವು ಬೇಕಾಗುತ್ತದೆ. ಇದು ದೇಶದ ರಕ್ಷಣಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿನ ವೆಚ್ಚವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ಮಾಡುವ ವಾರ್ಷಿಕ ವೆಚ್ಚಕ್ಕಿಂತ 35 ಪಟ್ಟು ಹೆಚ್ಚಿನ ಖರ್ಚಾಗುತ್ತದೆ. (ವಿಕಾಸ್ ರಾವಲ್ https://www.newsclick.in/economic-implications-restrictions-cow-slaughter )

ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ, ಗೋ ಹತ್ಯೆಗೆ ಈಗಿನ ಶಾಸನದ ರೀತಿಯಲ್ಲಿ ನಿರ್ಬಂಧಗಳನ್ನು ವಿಧಿಸಿದರೆ ಅನುತ್ಪಾದಕೀಯ ಗೋವುಗಳ ನಿರ್ವಹಣೆ ರೈತರಿಗೆ ಹೊರೆಯಾಗಿ ಪರಿಣಮಿಸುತ್ತದೆ. ಅನಿವಾರ್ಯವಾಗಿ ರೈತರು ಯಾವುದೋ ಒಂದು ರೀತಿಯಲ್ಲಿ ಗೋವುಗಳ ಸಾವಿನ ಹಾದಿಯನ್ನು ನೋಡಬೇಕಾಗುತ್ತದೆ. ಯಾವುದೇ ರೈತ ತಾನು ಸಾಕಿದ ಹಸುವನ್ನು, ಎತ್ತುಗಳನ್ನು ಕೈಯ್ಯಾರೆ ಸಾಯಿಸಲು ಎಂದಿಗೂ ಬಯಸುವುದಿಲ್ಲ. ಯಾವುದೋ ಒಂದು ಮತಧಾರ್ಮಿಕ ಆಚರಣೆಯ ಸಂದರ್ಭದಲ್ಲೋ, ರಸ್ತೆಯಲ್ಲಿ ಕಂಡಾಗಲೋ ಗೋವಿಗೆ ಕೈಮುಗಿಯುವ ಶ್ರೇಷ್ಠತೆಯ ಪ್ರತಿಪಾದಕರಿಗೆ ಗೋವು ಒಂದು ಪ್ರತಿಮೆಯಂತೆ ಕಾಣುತ್ತದೆ. ಆದರೆ ಹೈನುಗಾರಿಕೆಯಿಂದಲೇ ಬದುಕುವ, ಕೃಷಿಯನ್ನೇ ನಂಬಿ ಬದುಕುವ ರೈತನಿಗೆ ಗೋವು ಜೀವನೋಪಾಯದ ರೂಪಕವಾಗಿ ಕಾಣುತ್ತದೆ. ಗೋ ಹತ್ಯೆಯ ವಿರುದ್ಧ ಮಾತನಾಡುವ ಹಿತವಲಯದ ಸಂಪ್ರದಾಯವಾದಿಗಳಿಗೆ ಈ ಸೂಕ್ಷ್ಮ್ಮ ಅರ್ಥವಾಗುವುದೂ ಇಲ್ಲ.

ಗೋ ವಧೆಯನ್ನು ನಿಷೇಧಿಸಿದಷ್ಟೂ, ನಿರ್ಬಂಧಿಸಿದಷ್ಟೂ ಗ್ರಾಮೀಣ ಬಡ ಕುಟುಂಬಗಳ ಮತ್ತು ರೈತ ಕುಟುಂಬಗಳಲ್ಲಿ ಆದಾಯ ಕುಸಿಯುತ್ತದೆ. ಕಡಿಮೆ ಭೂಮಿಯನ್ನು ಹೊಂದಿರುವವರಿಗೆ ಜಾನುವಾರು ಸಾಕಾಣಿಕೆ ದುಬಾರಿಯಾಗಿಯೇ ಇರುತ್ತದೆ. ಭೂಮಿಯನ್ನು ಹೊಂದಿರದ ಅನೇಕ ಗ್ರಾಮೀಣ ಕುಟುಂಬಗಳು ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಮೇವನ್ನು ಬೆಳೆದು ಜಾನುವಾರುಗಳನ್ನು ಸಲಹುತ್ತಾರೆ. ಭಾರತದ ಬಹುಪಾಲು ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಸಾಕಾಣಿಕೆ ಗ್ರಾಮೀಣ ಮಹಿಳೆಯರ ಆದಾಯದ ಮುಖ್ಯ ಆಧಾರವಾಗಿರುತ್ತದೆ. ಈಗ ಮೇವಿನ ಕೊರತೆ ಮತ್ತು ಭೂ ಹಿಡುವಳಿಯಲ್ಲಿನ ತಾರತಮ್ಯಗಳ ಪರಿಣಾಮ ಇವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಇವರಿಗೆ ಕರುಗಳನ್ನು ಮಾರಾಟ ಮಾಡುವುದರಿಂದ ಬರುವ ಆದಾಯವೇ ಜೀವನೋಪಾಯಕ್ಕೆ ಆಧಾರವಾಗಿರುತ್ತದೆ.

ಗೋ ಹತ್ಯೆಯನ್ನು ನಿಷೇಧಿಸುವುದರಿಂದ ಗ್ರಾಮೀಣ ಬಡ ಕುಟುಂಬಗಳ ಜೀವನೋಪಾಯಕ್ಕೆ ಅಡಿಪಾಯವಾದ ಜಾನುವಾರು ಸಾಕಾಣಿಕೆ ಮತ್ತು ಹೈನುಗಾರಿಕೆ ಕ್ರಮೇಣ ನಶಿಸಿಹೋಗುತ್ತದೆ. ಇದು ಈಗಾಗಲೇ ಅಪಾಯದ ಅಂಚಿನಲ್ಲಿರುವ ಗ್ರಾಮೀಣ ಬಡಜನತೆಯನ್ನು ಮತ್ತಷ್ಟು ಬಡತನಕ್ಕೆ ನೂಕುತ್ತದೆ. ಗೋಹತ್ಯೆ ನಿಷೇಧಿಸುವುದರಿಂದ ಹಾಲು ನೀಡುವ ಹಸುಗಳ ಸಂಖ್ಯೆಯೂ ಕ್ಷೀಣಿಸುವುದಲ್ಲದೆ, ಹಾಲಿನ ಉತ್ಪಾದನೆಯೂ ಕುಂಠಿತವಾಗುತ್ತದೆ ಎಂದು ಪಶುಸಂಗೋಪನಾ ತಜ್ಞರು, ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಮಸೂದೆಗಳು ಬಡ ರೈತರನ್ನು ಮತ್ತಷ್ಟು ಬಡತನದ ಅಂಚಿಗೆ ನೂಕುವ ಸಾಧ್ಯತೆಗಳು ಹೆಚ್ಚಾಗಿರುವಾಗಲೇ ಗೋ ಹತ್ಯೆ ನಿಷೇಧ ಮತ್ತು ಕೃಷಿ ಭೂಮಿಯ ಖರೀದಿಯ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಿ ಕೃಷಿ ಭೂಮಿಯನ್ನು ಕಷಿಯೇತರ ಚಟುವಟಿಕೆಗಳಿಗೂ ಬಳಸುವ ಕಾಯ್ದೆಯನ್ನು ಜಾರಿಗೊಳಿಸಿರುವುದು ಗ್ರಾಮೀಣ ಬಡಜನತೆಯನ್ನು, ಕೃಷಿ ಆಧಾರಿತ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ.

ಮನುಷ್ಯರನ್ನು ಜಾತಿ ಶ್ರೇಷ್ಠತೆಯನ್ನು ಆಧರಿಸಿ ವಿಭಜಿಸಿದಂತೆಯೇ ಭಾರತದ ವೈದಿಕ ಸಂಸ್ಕೃತಿ ಜಾನುವಾರುಗಳನ್ನೂ ವಿಂಗಡಿಸಿದೆ. ಹಾಗಾಗಿಯೇ ಹಸು ಮತ್ತು ಎತ್ತು ಶ್ರೇಷ್ಠ ಎನಿಸಿಕೊಂಡರೆ ಎಮ್ಮೆ ಮತ್ತು ಕೋಣ ಕೆಳಸ್ತರವನ್ನು ಪ್ರತಿನಿಧಿಸುತ್ತವೆ. ಗಂಜಲ, ಸಗಣಿ ಇವುಗಳನ್ನೂ ಸಹ ಇದೇ ರೀತಿಯ ಶ್ರೇಣೀಕರಣಕ್ಕೊಳಪಡಿಸಲಾಗಿದೆ. ಎಮ್ಮೆ ಮತ್ತು ಕೋಣ ಬಲಿ ಕೊಡಬಹುದಾದ ಪ್ರಾಣಿಗಳಾಗಿದ್ದರೂ ಚಿಂತಿಸದ ಸಂಪ್ರದಾಯಸ್ಥ ಸಮಾಜ ಗೋವುಗಳನ್ನು ದೈವಿಕ ನೆಲೆಯಲ್ಲಿಟ್ಟು ಪೂಜಿಸುತ್ತದೆ. ಇದು ಬಹುಶಃ ವಿಶ್ವದ ಯಾವುದೇ ಭಾಗದಲ್ಲಿ ಕಾಣಲಾಗದಂತಹ ತಾರತಮ್ಯ ನೀತಿ ಎಂದು ಹೇಳಬಹುದು. ಹಾಗೆಯೇ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ಮತ್ತು ಮತೀಯವಾದಕ್ಕೆ ಜಾನುವಾರುಗಳನ್ನು ಅಸ್ತ್ರದಂತೆ ಬಳಸುವ ಒಂದು ವಿಕೃತ ಪದ್ಧತಿಗೂ ಭಾರತ ಸಾಕ್ಷಿಯಾಗಿದೆ.

Join Whatsapp
Exit mobile version