Home ಜಾಲತಾಣದಿಂದ ಕೊರೋನಾ: ನಾವೇನು ಮಾಡೋಣ?

ಕೊರೋನಾ: ನಾವೇನು ಮಾಡೋಣ?

ಜ್ವರ, ಕೆಮ್ಮು, ಗಂಟಲು ಕೆರೆತ/ನೋವು, ನೆಗಡಿ, ವಾಸನೆ-ರುಚಿ ತಿಳಿಯದಾಗುವುದು, ಭೇದಿ ಕೊರೋನಾ ಸೋಂಕಿನ ಲಕ್ಷಣಗಳು. ಇವು ತೊಡಗಿದರೆ ಮನೆಯಲ್ಲೇ ಉಳಿಯಿರಿ. ಸಹಾಯವಾಣಿ 14410ಗೆ ಕರೆ ಮಾಡಿ ತಿಳಿಸಿ.

ಕೊರೋನಾ ಪತ್ತೆಯ ಪರೀಕ್ಷೆ, ಚಿಕಿತ್ಸೆ ಎಂದು ಅಲ್ಲಿಲ್ಲಿ ಓಡಾಡಬೇಡಿ. 99% ಜನರಲ್ಲಿ ಕೊರೋನಾ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ತಾನಾಗಿ ವಾಸಿಯಾಗುತ್ತದೆ. ಕಷಾಯ, ಆಯುಷ್ ಯಾವುದೂ ಅಗತ್ಯವಿಲ್ಲ. ಈಗಾಗಲೇ ವಿಶ್ವದಲ್ಲಿ 1 ಕೋಟಿ 25 ಲಕ್ಷದಲ್ಲಿ 75 ಲಕ್ಷಕ್ಕೂ ಹೆಚ್ಚು, ಭಾರತದಲ್ಲಿ ಎಂಟೂವರೆ ಲಕ್ಷದಲ್ಲಿ ಐದೂವರೆ ಲಕ್ಷದಷ್ಟು, ಇಂಥ ಕಷಾಯ ಗಿಷಾಯ ಆಯುಷ್ ಇಲ್ಲದೆ ಗುಣವಾಗಿದ್ದಾರೆ, ಉಳಿದವರೂ ಆಗಲಿದ್ದಾರೆ.

ಕೊರೋನಾದಿಂದ ಸಮಸ್ಯೆಗಳಾಗುವುದು 60ಕ್ಕೆ ಮೇಲ್ಪಟ್ಟವರಲ್ಲಿ, ಅಥವಾ ಮೊದಲೇ ಇತರ ಸಮಸ್ಯೆಗಳಿದ್ದವರಲ್ಲಿ – ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ/ಮಿದುಳಿನ ರಕ್ತನಾಳಗಳ ಕಾಯಿಲೆ, ವಿಪರೀತ ಬೊಜ್ಜು, ಶ್ವಾಸಕೋಶಗಳು ಅಥವಾ ಮೂತ್ರಪಿಂಡಗಳು ಅಥವಾ ಯಕೃತ್ತಿನ ದೀರ್ಘಕಾಲದ ಕಾಯಿಲೆಗಳು ಇದ್ದವರಲ್ಲಿ. ಇಂಥವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ತೊಡಗಿದರೆ ತಮ್ಮ ದೇಹದ ಸ್ಥಿತಿಗತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ರೋಗವು ಉಲ್ಬಣಿಸುವ ಸೂಚನೆಗಳಿದ್ದರೆ ತಡಮಾಡದೆ ಆಸ್ಪತ್ರೆಗೆ ಹೋಗಲೇಬೇಕು.

ಹೆಚ್ಚಿನವರಲ್ಲಿ ಕೊರೋನಾ ಸೋಂಕು 3-4 ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ. ಕೊರೋನಾ ರೋಗವು ಉಲ್ಬಣಿಸುವವರಲ್ಲಿ ಅದರ ಲಕ್ಷಣಗಳು ಮತ್ತೆಯೂ ಮುಂದುವರಿಯುತ್ತವೆ, ಸಾಧಾರಣವಾಗಿ 6-7ನೇ ದಿನಗಳಾದಾಗ ರೋಗವು ಉಲ್ಬಣಗೊಳ್ಳುವ ಲಕ್ಷಣಗಳು ಆರಂಭಗೊಂಡು, 10-11ನೇ ದಿನಕ್ಕೆ ತೀವ್ರ ಸ್ಥಿತಿಗೆ ತಲುಪುತ್ತದೆ. ಅಂಥವರಲ್ಲಿ ಜ್ವರವು ಮುಂದುವರಿಯುತ್ತದೆ, ಅಥವಾ ಇನ್ನಷ್ಟು ಏರುತ್ತದೆ, ಕೆಮ್ಮು ಹೆಚ್ಚುತ್ತದೆ, ಉಸಿರಾಟಕ್ಕೆ ಕಷ್ಟವೆನಿಸುತ್ತದೆ, ಮಲಗಿದಾಗ, ನಡೆದಾಡುವಾಗ ಉಸಿರಾಟದ ಕಷ್ಟವೂ ಹೆಚ್ಚುತ್ತದೆ. ಇಂಥ ಲಕ್ಷಣಗಳಿದ್ದವರು ಆ ಕೂಡಲೇ ಆಸ್ಪತ್ರೆಗೆ ಹೋಗಲೇಬೇಕು.

ಕೊರೋನಾ ರೋಗದಲ್ಲಿ ಶ್ವಾಸಕೋಶಗಳಿಗೆ ಸಮಸ್ಯೆಯಾಗುವುದರಿಂದ ಅಲ್ಲಿ ರಕ್ತಕ್ಕೆ ಆಮ್ಲಜನಕವು ಬೆರೆಯುವುದಕ್ಕೆ ಅಡ್ಡಿಯಾಗುತ್ತದೆ, ಇದರಿಂದಾಗಿ ರಕ್ತದಲ್ಲಿ ಆಮ್ಲಜನಕದ ಮಟ್ಟವು ಇಳಿಯತೊಡಗುತ್ತದೆ. ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ನೋಡಿಕೊಂಡಿದ್ದರೆ ಕೊರೋನಾ ರೋಗವು ಉಲ್ಬಣಿಸುವುದನ್ನು ಬೇಗನೇ ಗುರುತಿಸಬಹುದು. ಪಲ್ಸ್ ಆಕ್ಸಿಮೀಟರ್ (2000-4000 ರೂ ಬೆಲೆ) ಎಂಬ ಸರಳವಾದ ಸಾಧನವನ್ನು ಬೆರಳಿಗೆ ಸಿಕ್ಕಿಸಿಕೊಂಡರೆ ನಿಮಿಷದೊಳಗೆ ರಕ್ತದ ಆಮ್ಲಜನಕದ ಮಟ್ಟವು (SpO2) ತಿಳಿಯುತ್ತದೆ. ಅದೇ ಉಪಕರಣವು ನಾಡಿಯ ಗತಿಯನ್ನೂ (PR) ತೋರಿಸುತ್ತದೆ. SpO2 ಸಾಮಾನ್ಯವಾಗಿ 97-100% ಇರುತ್ತದೆ, PR 60-100 ಇರುತ್ತದೆ. SpO2 95%ಕ್ಕಿಂತ ಕೆಳಗಿಳಿದರೆ, ಮತ್ತು PR 100 ನ್ನು ಮೀರಿದರೆ ಕೊರೋನಾ ರೋಗವು ಉಲ್ಬಣಿಸುವುದರ ಸೂಚನೆಯಾಗಿರಬಹುದು. ಮೊದಲೇ ಶ್ವಾಸಕೋಶಗಳ ಸಮಸ್ಯೆಯಿದ್ದವರಲ್ಲಿ SpO2 ಮೊದಲೇ ಕಡಿಮೆಯಿರಬಹುದು; ಅಂಥವರು 6 ನಿಮಿಷ ನಡೆದಾಡಿ ಮತ್ತೆ SpO2 ನೋಡಿದಾಗ ಅದು ಮೊದಲಿದ್ದುದಕ್ಕಿಂತ 4% ಇಳಿದರೆ ಕೊರೋನಾ ಉಲ್ಬಣಿಸುವುದರ ಸೂಚನೆಯೆಂದು ಪರಿಗಣಿಸಬೇಕು.

ಸಾರಾಂಶ ಇಷ್ಟು:

99%ಕ್ಕೂ ಹೆಚ್ಚು ಕೊರೋನಾ ಸೋಂಕಿತರಿಗೆ ಯಾವ ಪರೀಕ್ಷೆಯೂ ಬೇಡ, ಯಾವ ಚಿಕಿತ್ಸೆಯೂ ಬೇಡ, ಅದು ತಾನಾಗಿ ವಾಸಿಯಾಗುತ್ತದೆ. ಎಲ್ಲರೂ ಮನೆಯಲ್ಲೇ ಉಳಿದು, ಇತರರಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು, ಅಷ್ಟೇ. ಸಹಾಯವಾಣಿ 14410ಗೆ ಕರೆ ಮಾಡಿ ತಿಳಿಸಿದರೆ ಆಯಿತು.

ಕೊರೋನಾ ಸೋಂಕು ಉಲ್ಬಣಿಸುವ ಸಾಧ್ಯತೆಗಳಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಸೋಂಕಿನ ಲಕ್ಷಣಗಳು ಆರಂಭವಾದರೆ, ಅದು ಮುಂದುವರಿದು ಆರೇಳು ದಿನಗಳಾಗುವಾಗ, ಸೋಂಕು ಉಲ್ಬಣಿಸುವ ಲಕ್ಷಣಗಳನ್ನು ಗುರುತಿಸಬೇಕು, ಪಲ್ಸ್ ಆಕ್ಸಿಮೀಟರ್ ಬಳಸಿ ರಕ್ತದ ಆಮ್ಲಜನಕದ ಮಟ್ಟವನ್ನು ನೋಡುತ್ತಿರಬೇಕು, ಅದು 95%ಕ್ಕಿಂತ ಕೆಳಗಿಳಿದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು.

ವಿ.ಸೂ.:

ಸಕ್ಕರೆ ಕಾಯಿಲೆಯ ಹಾಗೆಯೇ ಸಕ್ಕರೆಯ ಅತಿಯಾದ ಸೇವನೆಯೂ ಕೂಡ ಕೊರೋನಾ ಬಿಗಡಾಯಿಸುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಸಕ್ಕರೆ, ಸಿಹಿ ತಿನಿಸುಗಳು, ಸಿಹಿ ಪೇಯಗಳು, ಹಣ್ಣುಗಳು ಮತ್ತು ಹಣ್ಣಿನ ರಸಗಳು, ಮೈದಾ ಮತ್ತಿತರ ಸಂಸ್ಕರಿತ ತಿನಿಸುಗಳನ್ನು ಸಂಪೂರ್ಣವಾಗಿ ವರ್ಜಿಸುವುದು ಒಳ್ಳೆಯದು.

Join Whatsapp
Exit mobile version