ಬೆಂಗಳೂರು : ಮಹಾನಗರ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 74,185ರಷ್ಟಾಗಿದೆ. ಇಂತಹ ವೇಳೆ ಕೋವಿಡ್ ಸೋಂಕು ತಗುಲಿದ ಕುಟುಂಬಗಳಿಗೆ ಅವರ ಮನೆಗಳನ್ನು ಸೀಲ್ ಡೌನ್ ಮಾಡುವುದರಿಂದ ಮುಜುಗರ ಎದುರಿಸುವ ಸ್ಥಿತಿಯೂ ಹೆಚ್ಚಿತ್ತು. ಹೀಗಾಗಿ, ಈಗ ಒಂದು ಮನೆಯಲ್ಲಿ ಒಬ್ಬರೇ ಸೋಂಕಿತರಿದ್ದರೆ ಮನೆ ಸೀಲ್ ಡೌನ್ ಮಾಡುವುದನ್ನು ನಿಲ್ಲಿಸಲು ಬಿಬಿಎಂಪಿ ನಿರ್ಧರಿಸಿದೆ.
ಸೋಂಕಿತರ ಮನೆಯವರು ಹೊರ ಬಾರದಂತೆ ಕಬ್ಬಿಣದ ಗ್ರಿಲ್, ಶೀಟ್ ಗಳನ್ನು ಹಾಕಿ ಸೀಲ್ ಡೌನ್ ಮಾಡಲಾಗುತಿತ್ತು. ಮನೆಯ ಮಂದೆ ಸೋಂಕಿತರು ಇರುವ ಮನೆ ಎಂದು ಬ್ಯಾನರ್ ಹಾಕಲಾಗುತಿತ್ತು. ಇದರಿಂದ ಮುಜುಗರಕ್ಕೊಳಗಾದವರು, ಈ ವ್ಯವಸ್ಥೆ ಕೈಬಿಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದರು. ಮನೆ ಸೀಲ್ ಡೌನ್ ಮಾಡುವ ಕುರಿತು ಹಲವು ದೂರುಗಳು ಬಂದಿವೆ. ಇದು ಸರಿಯಲ್ಲ ಎಂದು ಜನರು ಹೇಳುತ್ತಿದ್ದಾರೆ. ಜನರು ಮಾಡಿದ ಮನವಿಯನ್ನು ಸರಕಾರದ ಮುಂದಿಡಲಿದ್ದೇವೆ. ಸರ್ಕಾರದ ನಿರ್ಧಾರದಂತೆ ಕ್ರಮಕೈಗೊಳ್ಳಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ತಿಳಿಸಿದ್ದಾರೆ.