ವಾಷಿಂಗ್ಟನ್: ಕರಿಯ ವರ್ಣೀಯರ ಬಗ್ಗೆ ದಶಕಗಳಿಂದ ಜನಾಂಗೀಯವಾದಿ, ತಾರತಮ್ಯಕಾರಿ ವರದಿಗಳನ್ನು ಪ್ರಕಟಿಸಿರುವುದಕ್ಕಾಗಿ ಅಮೆರಿಕದ ‘ಕ್ಯಾನ್ಸಸ್ ಸಿಟಿ ಸ್ಟಾರ್’ ಪತ್ರಿಕೆಯ ಸಂಪಾದಕ ಮೈಕ್ ಫನಿನ್ ಪತ್ರಿಕೆಯ ಪರವಾಗಿ ಕ್ಷಮೆಯಾಚಿಸಿದ್ದಾರೆ.
ಸಿ.ಎನ್.ಎನ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾರ್ಜ್ ಫ್ಲಾಯ್ಡ್ ರ ಹತ್ಯೆಯನ್ನು ವಿರೋಧಿಸಿ ಅಮೆರಿಕ ಹಾಗೂ ಜಗತ್ತಿನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ಘಟನೆಯು ಕರಿಯ ವರ್ಣೀಯರ ಬಗೆಗಿನ ತಮ್ಮ ನಿಲುವನ್ನು ಬದಲಿಸುವಂತೆ ಪತ್ರಿಕೆಯನ್ನು ಪ್ರೇರೇಪಿಸಿದೆ. ದಶಕಗಳ ಕಾಲ ಕರಿಯ ವರ್ಣೀಯರ ಬಗ್ಗೆ ಪತ್ರಿಕೆಯು ಹೇಗೆ ವರದಿ ಮಾಡಿತೆನ್ನುವುದನ್ನು ತಿಳಿಯಲು ನಾವೆಂದೂ ಪ್ರಯತ್ನಿಸಲಿಲ್ಲ” ಎಂದು ಫನಿನ್ ಹೇಳಿದ್ದಾರೆ.
“ತನ್ನ ಆರಂಭಿಕ ಇತಿಹಾಸದ ಹೆಚ್ಚಿನ ಅವಧಿಯಲ್ಲಿ, ಪತ್ರಿಕೆಯು ಕ್ಯಾನ್ಸಸ್ ನ ಕರಿಯ ನಾಗರಿಕರ ತಲೆಮಾರುಗಳನ್ನು ಹಕ್ಕುವಂಚಿತರನ್ನಾಗಿಸಿದ್ದು, ಅವರನ್ನು ನಿರ್ಲಕ್ಷಿಸಿದೆ” ಎಂದು ಅವರು ಹೇಳಿದರು.
ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರೋಧಿ ಪ್ರತಿಭಟನೆಗಳ ಬಳಿಕ, ಅಮೆರಿಕವು ತನ್ನ ಗುಲಾಮಗಿರಿ ಮತ್ತು ಜನಾಂಗೀಯ ತಾರತಮ್ಯ ಧೋರಣೆಯ ಇತಿಹಾಸದತ್ತ ತಿರುಗಿ ನೋಡುತ್ತಿದೆ.